ನ್ಯಾಯಸಮ್ಮತ ಮತದಾನಕ್ಕೆ ಅವಕಾಶ ಮಾಡಿ ಕೊಡಿ
ಚನ್ನಪಟ್ಟಣ: ರಾಜಕಾರಣಿಗಳೊಂದಿಗೆ ಒಡನಾಟ ಹೊಂದಿರುವ ಅಧಿಕಾರಿಗಳನ್ನು ಹೊರಗಿಟ್ಟು ಚುನಾವಣೆ ನಡೆಸುವ ಮೂಲಕ ನ್ಯಾಯಸಮ್ಮತ ಚುನಾವಣೆಗೆ ಅವಕಾಶ ಮಾಡಿ ಕೊಡಿ ಎಂದು ಭ್ರಷ್ಟಾಚಾರ ವಿಮೋಚನಾ ವೇದಿಕೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳನ್ನು ಒತ್ತಾಯಿಸಿದೆ.
ಈ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೆ ಲಿಖಿತ ದೂರು ನೀಡಿರುವ ವೇದಿಕೆಯ ಪ್ರಧಾನಕಾರ್ಯದರ್ಶಿ ಆರ್.ಸುರೇಶ್ ಜಿಲ್ಲಾಧಿಕಾರಿ ಮತ್ತು ಕೆಲ ತಹಸೀಲ್ದಾರರು ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸ್ಥಳೀಯ ರಾಜಕಾರಣಿಗಳೊಂದಿಗೆ ಒಡನಾಟವಿರಿಸಿ ಕೊಂಡಿದ್ದು ಈ ಅಧಿಕಾರಿಗಳಿಂದ ನಿಷ್ಪಕ್ಷಪಾತ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ವಿಧಾನಸಭಾ ಚುನಾವಣೆಯ ವೇಳೆ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್, ಕೆಲ ಪೊಲೀಸ್ ಅಧಿಕಾರಿಗಳು ಮತ್ತು ತಹಸೀಲ್ದಾರರನ್ನು ಬದಲಾಯಿಸಲಾಗಿತ್ತು.
ಇದರಿಂದಾಗಿ ಜಿಲ್ಲೆಯಲ್ಲಿ ನ್ಯಾಯಸಮ್ಮತ ಮತ್ತು ಮುಕ್ತ ಚುನಾವಣೆ ಎದುರಿಸಲು ಸಾಧ್ಯವಾಯಿತು. ಈ ಬಾರಿಯ ಚುನಾವಣೆಯಲ್ಲೂ ಅಂತಹುದೇ ಪ್ರಯತ್ನ ಮಾಡಿ ಎಂದು ಆಗ್ರಹಿಸಿದ್ದಾರೆ.
ಅಧಿಕಾರಿಗಳು ರಾಜಕಾರಣಿಗಳ ಶಿಫಾರಸು ಪತ್ರದೊಂದಿಗೆ ನಿಯೋಜನೆ ಗೊಂಡಿರುವ ಕಾರಣ ಇವರು ಚುನಾವಣೆ ವೇಳೆಯಲ್ಲಿ ಅವರ ಮರ್ಜಿಗೆ ಒಳಗಾಗುತ್ತಾರೆ. ಆದ ಕಾರಣ ಜಿಲ್ಲಾಧಿಕಾರಿ, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ, ಚನ್ನಪಟ್ಟಣ ಮತ್ತು ಕನಕಪುರ ತಹಸೀಲ್ದಾರ್‌ರನ್ನು ಬೇರೆಡೆಗೆ ನಿಯೋಜನೆಗೊಳಿಸಿ ಹೊಸ ಅಧಿಕಾರಿಗಳನ್ನು ನಿಯೋಜಿಸಬೇಕೆಂದು ಕೋರಿದ್ದಾರೆ.
ಚುನಾವಣಾ ನೀತಿ ಸಂಹಿತೆ ಪಾಲನೆಯಾಗದಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದಾಗ ದೂರವಾಣಿಯನ್ನು ಸಚಿವ ಡಿ.ಕೆ.ಶಿವಕುಮಾರ್‌ಗೆ ನೀಡಿ ದಮಕಿ ಹಾಕಿಸುವ ಮೂಲಕ ಹಿಂದೆ ಚನ್ನಪಟ್ಟಣ ತಹಸೀಲ್ದಾರ್ ಆಗಿದ್ದ, ಈಗ ಕನಕಪುರಕ್ಕೆ ನಿಯೋಜನೆ ಗೊಂಡಿರುವ ತಹಸೀಲ್ದಾರ್ ಶಿವರುದ್ರಪ್ಪ ತಮ್ಮ ರಾಜಕಾರಣಿಗಳೊಂದಿಗಿನ ನಿಷ್ಠೆಯನ್ನು ಪ್ರದರ್ಶಿಸಿದ್ದು ಇಂತಹ ಅಧಿಕಾರಿಗಳ ಮೂಲಕ ಚುನಾವಣಾ ಕರ್ತವ್ಯ ಪಾಲನೆ ಎಷ್ಟರ ಮಟ್ಟಿಗೆ ಮಾಡಲು ಸಾಧ್ಯ ಎಂದು ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಪ್ರಶ್ನಿಸಿದ್ದಾರೆ.