ಹೊಸಕೋಟೆ ತಾಲೂಕಲ್ಲಿ ಜಾಗೃತಿ ತಂಡಗಳ ರಚನೆ
ಸೂಲಿಬೆಲೆ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹೊಸಕೋಟೆ ಕ್ಷೇತ್ರದಲ್ಲಿ ನ್ಯಾಯ ಮತ್ತು ನಿರ್ಭೀತಿ ಮತದಾನಕ್ಕಾಗಿ ಜಾಗೃತಿ ಹಾಗೂ ಫ್ಲೈಯಿಂಗ್ ಸ್ಕ್ವಾಡ್ಗಳನ್ನು ರಚನೆ ಮಾಡಿದ್ದು ಮತಗಳಿಕೆಗಾಗಿ ಅನ್ಯ ಮಾರ್ಗಗಗಳ, ಅಕ್ರಮ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ಸಹಾಯಕ ಚುನಾವಣಾಧಿಕಾರಿ ಡಾ.ನಟರಾಜ್ ಸೂಚಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಸೂಕ್ಷ್ಮ ಮತಕೇಂದ್ರಗಳನ್ನು ಹೊಂದಿದ್ದು, ನಿರ್ಭೀತ ಹಾಗೂ ನ್ಯಾಯ ಸಮ್ಮತ ಮತದಾನ ನಡೆಸಲು 5 ಕಡೆ ಚೆಕ್ ಪೋಸ್ಟ್ಗಳನ್ನು ತೆರೆದಿದ್ದು, ತಾಲೂಕಿನ 5 ಹೋಬಳಿಗೊಂದರಂತೆ ಸ್ಕ್ವಾಡ್ಗನ್ನು ರಚನೆ ಮಾಡಿ ಮತ ಪಡೆಯುವ ಉದ್ದೇಶದಿಂದ ಯಾವುದೇ ಪಕ್ಷದವರು ತೆಗೆದುಕೊಳ್ಳುವ ಅನ್ಯ ಮಾರ್ಗಗಗಳ ಮೇಲೆ ಹದ್ದಿನ ಕಣ್ಣೀಡಲು ಸೂಚನೆ ನೀಡಲಾಗಿದೆ. ಯಾವುದೇ ಗ್ರಾಮದಲ್ಲಿ ಮತದಾರರಿಗೆ ಆಮಿಷ ನೀಡುವಂತ ಪ್ರಕರಣಗಳು ಕಂಡು ಬಂದರೆ ಜನ ಕೂಡಲೇ ತಂಡದ ಮುಖ್ಯಸ್ಥರಿಗೆ ಅಥವಾ ತಹಸೀಲ್ದಾರ್ ಅವರಿಗೆ ಮಾಹಿತಿಯನ್ನು ನೀಡಿ ತಾಲೂಕಿನಲ್ಲಿ ಶಾಂತಿಯುತ ಹಾಗೂ ಮುಕ್ತ ಮತದಾನಕ್ಕಾಗಿ ಜನತೆ ಸಹಕರಿಸಬೇಕು ಎಂದರು.
ಮತಗಟ್ಟೆಗೆ ಭೇಟಿ, ಪರಿಶೀಲನೆ: ಸೂಲಿಬೆಲೆ ಹೋಬಳಿಯ ಬೆಂಡಿಗಾನಹಳ್ಳಿ, ತೆನೆಯೂರು ಮೊದಲಾದ ಕಡೆ ಹೊಸಕೋಟೆ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ.ನಟರಾಜ್ ಹಾಗೂ ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ಭೇಟಿ ನೀಡಿ ಮತದಾನದ ಬಗ್ಗೆ ಮತದಾರರಲ್ಲಿ ಅಂಜಿಕೆ, ಭಯ, ಹೆದರಿಕೆ ಇದೆಯೇ ಎಂಬುದರ ಬಗ್ಗೆ ಜನರಲ್ಲಿ ಅಭಿಪ್ರಾಯವನ್ನು ಸಂಗ್ರಹಿಸಿದರು. ಗ್ರಾಮಗಳಲ್ಲಿರುವ ಮತದಾರರ ಮನೆಗೆ ಖುದ್ದು ಭೇಟಿ ನೀಡಿದ ಅಧಿಕಾರಿಗಳು ನಿರ್ಭೀತ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು. ನಂತರ ಮತಕೇಂದ್ರಗಳ ಬಳಿ ತೆರೆಳಿ ಮತದಾನದ ವೇಳೆ ಕಲ್ಪಿಸಲಾಗಿರುವ ಮೂಲಭೂತ ಸಮಸ್ಯೆಗಳನ್ನು ಪರಿಶೀಲನೆ ಮಾಡಿದರು.