ಕಣದಲ್ಲಿ 15 ಹುರಿಯಾಳುಗಳು
ರಾಮನಗರ: ಜಿದ್ದಾಜಿದ್ದಿನ ಅಖಾಡವಾದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷೇತರ ಟಿ.ಎಂ. ಮಂಚೇಗೌಡ ಶನಿವಾರ ನಾಮಪತ್ರ ಹಿಂಪಡೆದಿದ್ದು, ಅಂತಿಮವಾಗಿ 15 ಮಂದಿ ಹುರಿಯಾಳುಗಳು ಕಣದಲ್ಲಿ ಉಳಿದಿದ್ದಾರೆ.
ನಾಮಪತ್ರ ಹಿಂತೆಗೆತ ಪ್ರಕ್ರಿಯೆ ಮುಕ್ತಾಯದ ಬಳಿಕ ಚುನಾವಣಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅವರು ಕ್ರಮ ಸಂಖ್ಯೆವಾರು ಅಭ್ಯರ್ಥಿಗಳ ಪಟ್ಟಿ ಅಖೈರುಗೊಳಿಸಿದ್ದು, ಪಕ್ಷೇತರ ಹುರಿಯಾಳುಗಳಿಗೆ ಚಿಹ್ನೆಯನ್ನೂ ಹಂಚಿದ್ದಾರೆ.
ಮಂಚೇಗೌಡ ವಾಪಸ್: ಗ್ರಾ.ಪಂ.ನಿಂದ ಲೋಕಸಭೆವರೆಗೆ ಸುಮಾರು 8 ಚುನಾವಣೆಗಳನ್ನು ಎದುರಿಸಿರುವ ಟಿ.ಎಂ. ಮಂಚೇಗೌಡ ಅವರು ಬೆಂಗಳೂರು ಗ್ರಾಮಾಂತರದಲ್ಲಿ 2009ರ ಸಾರ್ವತ್ರಿಕ ಮತ್ತು 2013ರ ಉಪ ಚುನಾವಣೆಯಲ್ಲೂ ಅಭ್ಯರ್ಥಿಯಾಗಿ ಠೇವಣಿ ಕಳೆದುಕೊಂಡಿದ್ದರು.
ಈ ಬಾರಿ ಕಣಕ್ಕೆ ಇಳಿದ ಪಕ್ಷೇತರರು ಮತ್ತು ಸಣ್ಣಪುಟ್ಟ ಅಭ್ಯರ್ಥಿಗಳ ಪೈಕಿ ಬಹುತೇಕರು ಪುನರಾವರ್ತಿತ ಅಭ್ಯರ್ಥಿಗಳೇ. ಸಾಕಷ್ಟು ಚುನಾವಣೆ ಎದುರಿಸಿರುವ ಮಂಚೇಗೌಡ ದಿಢೀರ್ ನಿಲುವು ಬದಲಿಸಿ, ಉಮೇದುವಾರಿಕೆ ಅರ್ಜಿ ಹಿಂಪಡೆದು ಅಚ್ಚರಿ ಮೂಡಿಸಿದ್ದಾರೆ.
ಅಭ್ಯರ್ಥಿ, ಬೆಂಬಲಿಗರು ಸಜ್ಜು: ಇದರೊಂದಿಗೆ ಚುನಾವಣಾ ಅಖಾಡ ಸಜ್ಜುಗೊಂಡಂತಾಗಿದ್ದು, ಹುರಿಯಾಳುಗಳು ಮತ್ತು ಬೆಂಬಲಿಗರು ಮತಬೇಟೆಗೆ ಹೊರಟಿದ್ದಾರೆ. ಪ್ರಮುಖ ಪಕ್ಷಗಳು ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲೂ ಮತಯಾಚನೆ, ಪ್ರಚಾರ ಸಭೆಗಳ ನಿಗದಿ ಪ್ರಕ್ರಿಯೆ ಪ್ರಾರಂಭಿಸಿವೆ. ಹಾಲಿ ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅಖಾಡದ ಅಂತಿಮ ಚಿತ್ರಣ ಮೂಡುವ ಮುನ್ನವೇ ಸ್ವಕ್ಷೇತ್ರ ಕನಕಪುರ ಮತ್ತು ರಾಮನಗರ ಭಾಗದಲ್ಲಿ ಮತಯಾಚನೆ ಪ್ರಾರಂಭಿಸಿದ್ದರು. ಜೆಡಿಎಸ್ ಇನ್ನೂ ಕಾರ್ಯಕರ್ತರ ಸಭೆ ಹಂತದಲ್ಲೇ ಇದೆ.
ದೇವೇಗೌಡ ಆಗಮನ: ಅಭ್ಯರ್ಥಿ ಪ್ರಭಾಕರರೆಡ್ಡಿ ಜತೆಗೂಡಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು
ಚನ್ನಪಟ್ಟಣಕ್ಕೆ ಶನಿವಾರ ಆಗಮಿಸಿ, ಮಾಜಿ ಶಾಸಕ ಎಂ.ಸಿ. ಅಶ್ವತ್ಥ್ ನಿವಾಸ ಆವರಣದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. ಭಾನುವಾರ ರಾಮನಗರಕ್ಕೆ ಭೇಟಿ ನೀಡುವರು.
ಆನೇಕಲ್ನಲ್ಲಿ ಜಾತ್ರೆ: ಬಿಜೆಪಿ ಹುರಿಯಾಳು ಆನೇಕಲ್ ಕಡೆ ಗಮನ ಕೇಂದ್ರೀಕರಿಸಿದ್ದಾರೆ. ಅಲ್ಲಿ ನಡೆಯುತ್ತಿರುವ ಜಾತ್ರೆ, ಹಬ್ಬದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಜತೆಗೆ ಮತಯಾಚನೆಯಲ್ಲೂ ತೊಡಗಿದ್ದಾರೆ. ಎಎಪಿ ಅಭ್ಯರ್ಥಿ ರವಿ ಕೃಷ್ಣಾರೆಡ್ಡಿ ಹಾರೋಹಳ್ಳಿ, ಕನಕಪುರದಲ್ಲಿ ಮತಭಿಕ್ಷೆ ಬೇಡಿದ್ದಾರೆ.
ಆಗಲೂ ಈಗಲೂ ಹದಿನೈದೇ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 2009ನೇ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಾಳುಗಳ ಸಂಖ್ಯೆ 15 ಆಗಿತ್ತು. ಈ ಬಾರಿಯ ಚುನಾವಣೆಯಲ್ಲೂ ಅಷ್ಟೇ ಸಂಖ್ಯೆಯ ಅಭ್ಯರ್ಥಿಗಳು ಕಣದಲ್ಲಿರುವುದು ವಿಶೇಷವಾಗಿದೆ.