'ಕಣ್ಣೀರು ಬರುವುದು ಹೃದಯವಂತರಿಗೆ'
ರಾಮನಗರ: ಕಣ್ಣೀರು ಬರುವುದು ಹೃದಯವಂತರಿಗೆ. ದಗಾಕೋರರು, ಲೂಟಿಕೋರರು, ಕೊಲೆಗಡುಕರು, ಸಮಾಜ ದ್ರೋಹಿ ಕೃತ್ಯಗಳಲ್ಲಿ ತೊಡಗಿರುವವರಿಗೆ ಕಣ್ಣೀರು ಬಾರದು ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು ಹೇಳಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಣ್ಣೀರಿಟ್ಟ ಬಗ್ಗೆ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಮಾಡಿದ್ದ ಟೀಕೆಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು ಎದುರೇಟು ನೀಡಿದರು. ಜಿಲ್ಲೆಯ ಜನರೊಂದಿಗೆ ಕುಮಾರಸ್ವಾಮಿ ಅವರು ಹೊಂದಿರುವ ಭಾವನಾತ್ಮಕ ಸಂಬಂಧದಿಂದ ಕಣ್ಣೀರು ಹಾಕಿದ್ದಾರೆ. ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಮಾತ್ರಕ್ಕೆ ಕುಮಾರಸ್ವಾಮಿ ಅವರು ರಾಮನಗರ ಮತ್ತು ಇಲ್ಲಿನ ಜನರನ್ನು ಎಂದೂ ಮರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಚಿಕ್ಕಬಳ್ಳಾಪುರದಲ್ಲಿ ಎಚ್ಡಿಕೆ ಸ್ಪರ್ಧೆ ಪಕ್ಷದ ನಿರ್ಧಾರವೇ ಹೊರತು ಅವರ ವೈಯಕ್ತಿಕ ತೀರ್ಮಾನವಲ್ಲ. ಹೀಗೆಯೇ ಅದೆಷ್ಟು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಕ್ಷೇತ್ರಾಂತರ ಮಾಡಿಲ್ಲ ಎಂದು ಪ್ರಶ್ನಿಸಿದರು.
ಬೆಂ.ಗ್ರಾಮಾಂತರದಲ್ಲಿ ಚತುಷ್ಕೋನ ಸ್ಪರ್ಧೆ
ಚನ್ನಪಟ್ಟಣ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದ್ದು, ಹೊಸದಾಗಿ ರಚನೆಯಾಗಿರುವ ಆಮ್ ಆದ್ಮಿ ಹಾಗೂ ಜೆಡಿಎಸ್, ಬಿಜೆಪಿ ಪಕ್ಷಗಳನ್ನು ನಾವು ಸಮಾನವಾಗಿ ಪರಿಗಣಿಸಿದ್ದು ಎಲ್ಲರೂ ನಮ್ಮ ಎದುರಾಳಿಗಳು ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ತಿಳಿಸಿದರು.
ತಾಲೂಕಿನ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿ ಮಾತನಾಡಿ, ನಮ್ಮ ಪಕ್ಷ ಯಾರನ್ನೂ ನಿರ್ದಿಷ್ಟ ಎದುರಾಳಿ ಎಂದು ಗುರುತಿಸದೆ ಎಲ್ಲಾ ಪಕ್ಷವನ್ನು ಸಮಾನಾಗಿ ಪರಿಗಣಿಸಿ ಚುನಾವಣೆ ಎದುರಿಸಲಿದೆ. ನಮ್ಮ ಅಭಿವೃದ್ಧಿ ಕಾರ್ಯಗಳಿಗೆ ಮತದಾರರು ಬೆಂಬಲ ನೀಡುತ್ತಾರೆಂಬ ವಿಶ್ವಾಸ ಇದೆ ಎಂದರು.
ಎಚ್ಡಿಕೆ ಮಾತು ರಿವೈಂಡ್ ಮಾಡಿ: ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿ ಚುನಾವಣೆಗೊಂದೊಂದು ರೀತಿ ಮಾತನಾಡುತ್ತಿರುತ್ತಾರೆ. ಈ ಹಿಂದಿನ ಚುನಾವಣೆಗಳ ಸಮಯದಲ್ಲಿ ಅವರು ಏನು ಮಾತನಾಡಿದರು ಎಂದು ರಿವೈಂಡ್ ಮಾಡಿ ನೋಡಿದರೆ ಎಲ್ಲಾ ಸತ್ಯಾಂಶ ತಿಳಿಯುತ್ತದೆ ಎಂದು ಕುಮಾರಸ್ವಾಮಿ ಆರೋಪಗಳಿಗೆ ತಿರುಗೇಟು ನೀಡಿದರು. ಕುಮಾರಸ್ವಾಮಿ ಯಾವುದೇ ಕ್ಷೇತ್ರದಲ್ಲಿ ನಿಲ್ಲಲೂ ಸ್ವತಂತ್ರರು ಎಂದರು.
ನೀರಾವರಿಗೆ ಆದ್ಯತೆ: ಬರದಿಂದ ಕಂಗಾಲಾಗಿರುವ ಈ ಭಾಗದ ಜನತೆಗೆ ಶಾಶ್ವತ ನೀರಾವರಿ ಯೋಜನೆಯನ್ನು
ಅನುಷ್ಠಾನ ಗೊಳಿಸುವ ಸಂಕಲ್ಪದೊಂದಿಗೆ ನಾನು ಚುನಾವಣೆಯನ್ನು ಎದುರು ಗೊಂಡಿದ್ದೇನೆ. ಎಂತಹುದೇ
ಸಂದರ್ಭದಲ್ಲೂ ನನ್ನ ಗುರಿಯನ್ನು ನಾನು ಕೈ ಬಿಡುವುದಿಲ್ಲ ಎಂದರು. ಮಾಗಡಿಯ ಶ್ರೀರಂಗ ಯೋಜನೆಯನ್ನು ಅದಾಗಲೆ ಅನುಷ್ಠಾನ ಗೊಳಿಸಿದ್ದು, ಶುದ್ಧಕುಡಿಯುವ ನೀರಿನ ಘಟಕವನ್ನು ಸ್ಥಾಪಿಸುವುದಾಗಿ ತಿಳಿಸಿದರು.
ಸಿಪಿವೈ ಬೆಂಬಲ: ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಪಿ.ಯೋಗೇಶ್ವರ್, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನು ಮತ್ತು ಡಿ.ಕೆ.ಸುರೇಶ್ ಒಗ್ಗಟ್ಟಿನಿಂದ ಶ್ರಮಿಸಲಿದ್ದು ಮತದಾರರು ಕ್ರಿಯಾಶೀಲ ಯುವಕರಾಗಿರುವ ಸುರೇಶ್ಗೆ ಬೆಂಬಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ ಎಂದರು.
ಕಾಂಗ್ರೆಸ್ಗೆ ಈಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳು ಲಭ್ಯವಾಗಲಿದ್ದು, ಈ ತಾಲೂಕಿನಲ್ಲಿ ಡಿ.ಕೆ.ಸುರೇಶ್ಗೆ ಹೆಚ್ಚಿನ ಮತ ಲಭಿಸುತ್ತದೆ. ಹಿಂದಿನ ಚುನಾವಣೆಯಿಂದಲೂ ಕ್ಷೇತ್ರದ ಮತದಾರರು ಡಿ.ಕೆ.ಸುರೇಶ್ ಬೆಂಬಲಿಸುತ್ತಾ ಬಂದಿದ್ದು ಅನ್ಯ ಪಕ್ಷಗಳಿಗೆ ಮತ ನೀಡದೆ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಇಲ್ಲೇ ಸ್ಪರ್ಧಿಸಬೇಕಿತ್ತು: ಕುಮಾರಸ್ವಾಮಿ ಇಲ್ಲೇ ಸ್ಪರ್ಧಿಸಬೇಕಿತ್ತು, ಅವರು ಈ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಿಡಬಾರದಿತ್ತು ಎಂದ ಯೋಗೇಶ್ವರ್, ಕ್ಷೇತ್ರವನ್ನು ಬಿಟ್ಟಿದ್ದು ನಮ್ಮ ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಘುನಂದನ್ ರಾಮಣ್ಣ, ಟಿ.ಕೆ.ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ.ವೀರೇಗೌಡ, ಶಿವಮಾದು, ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾದ ಸಿಂಗರಾಜಪುರ ರಾಜಣ್ಣ, ಡಿ.ಕೆ.ಕಾಂತರಾಜು, ನಗರಸಭಾ ಉಪಾಧ್ಯಕ್ಷ ಮುದ್ದುಕೃಷ್ಣ, ರಾಂಪುರ ಮಲುವೇಗೌಡ, ಅಕ್ಕೂರು ಶೇಖರ್, ಹನಿಯೂರು ಕಾಂತರಾಜು, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸತೀಶ್ ಇನ್ನೂ ಮುಂತಾದವರು ಉಸ್ಥಿತರಿದ್ದರು.