ಕನಕಪುರದಲ್ಲಿ ಎನ್ಸಿಸಿ ದಿನಾಚರಣೆ
ಕನಕಪುರ: ಕನಕಪುರದ ರೂರಲ್ ಪದವಿ ಕಾಲೇಜಿನಲ್ಲಿ ಎನ್ಸಿಸಿ ದಿನಾಚರಣೆ ಸಮಾರಂಭ ನಡೆಯಿತು. ಪ್ರಾಂಶುಪಾಲ ಡಾ.ಶಿವಬಸವೇಗೌಡ ಎನ್ಸಿಸಿ ದಿನಾಚರಣೆ ಉದ್ಘಾಟನೆಯನ್ನು ನೆರವೇರಿಸಿದರು. ಮೇಜರ್ ಡಾ.ಮುನಿರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಸ್ನೇಕ್ ಅರುಣ್ರಿಂದ ಹಾವುಗಳ ಜೀವನ ವಿಧಾನ, ಪರಿಸರಕ್ಕೆ ಉರಗಗಳ ಕೊಡುಗೆ, ರೈತಸ್ನೇಹಿಯಾಗಿ ಹಾವುಗಳ ಉಪಯೋಗ, ಹಾವುಗಳಿಂದ ಆಗುತ್ತಿರುವ ಔಷಧೀಯ ಉಪಯೋಗಗಳು, ಅಪಾಯಗಳು ಮೊದಲಾದ ವಿಚಾರಗಳ ಬಗ್ಗೆ ಸೋದಾಹರಣವಾಗಿ ವಿವರಿಸಿದರು. ಮೇಜರ್ ಡಾ.ಭುವನೇಶ್ವರ್ ಮಾತನಾಡಿ ಪ್ರತಿಯೊಬ್ಬ ಯುವಕನೂ ಸೈನಿಕನಾಗಬೇಕು, ಸೇವಾಮನೋಭಾವದಿಂದ ಸಮುದಾಯದ ಸೇವೆ ಸಲ್ಲಿಸಬೇಕು, ಯುವಸಮುದಾಯದಲ್ಲಿ ದೇಶಪ್ರೇಮ, ರಾಷ್ಟ್ರಜಾಗೃತಿಗಳನ್ನು ಅರ್ಪಣಾ ಮನೋಭಾವಗಳನ್ನು ಮೂಡಿಸಬೇಕು ಎಂದರು.
ಬಾಂಬೆ ರೇಯಾನ್: ಮುಂದುವರಿದ ಪ್ರತಿಭಟನೆ
ದೊಡ್ಡಬಳ್ಳಾಪುರ: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಬಾಂಬೆ ರೇಯಾನ್ ಫ್ಯಾಷನ್ ಲಿಮಿಟೆಡ್ನ ಪ್ರಾಸೆಸ್ಸಿಂಗ್ ಘಟಕವನ್ನು ಲಾಕೌಟ್ ಮಾಡಿರುವುದರ ವಿರುದ್ಧ ಕಾರ್ಮಿಕರು ಆರಂಭಿಸಿರುವ ಹೋರಾಟ 12ನೇ ದಿನಕ್ಕೆ ಕಾಲಿಟ್ಟಿದೆ.ಕಾರ್ಖಾನೆಯ ಮುಂದೆ 500ಕ್ಕೂ ಹೆಚ್ಚು ಕಾರ್ಮಿಕರು ಹಗಲು-ಇರುಳು ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಶನಿವಾರ ಇಲ್ಲಿನ ಕನ್ನಡ ಪಕ್ಷದ ಪದಾಧಿಕಾರಿಗಳು ಕಾರ್ಮಿಕರ ಪ್ರತಿಭಟನೆಗೆ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕಾರ್ಮಿಕರ ಒತ್ತಾಯಗಳಿಗೆ ಕಿವಿಗೊಡದ ಆಡಳಿತಶಾಹಿ ಧೋರಣೆ ಖಂಡನೀಯ. ಕನಿಷ್ಠ ಮಾನವೀಯ ಪ್ರಜ್ಞೆ ಮೆರೆಯದ ಅಧಿಕಾರಶಾಹಿ ಬಡಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.