ಕಳವು ಪ್ರಕರಣ ಪತ್ತೆ: ಭದ್ರತಾ ಅಧಿಕಾರಿ ಮೇಲೆ ಚಾಲಕ ಹಲ್ಲೆ
ಮದ್ದೂರು: ಕಳವು ಪ್ರಕರಣ ಪತ್ತೆ ದ್ವೇಷದ ಹಿನ್ನೆಲೆಯಲ್ಲಿ ಹಾಲು ಸಾಗಾಣಿಕೆ ಗುತ್ತಿಗೆ ವಾಹನ ಚಾಲಕ ಭದ್ರತಾ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಜಿಲ್ಲಾ ಹಾಲು ಒಕ್ಕೂಟದಲ್ಲಿ ಶುಕ್ರವಾರ ರಾತ್ರಿ ಜರುಗಿದೆ. ಜಿಲ್ಲಾ ಹಾಲು ಒಕ್ಕೂಟದ ಭದ್ರತಾಧಿಕಾರಿ ಸಿ.ಎಚ್. ಪುಟ್ಟಸ್ವಾಮಿ ಹಲ್ಲೆಯಿಂದಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಹಲ್ಲೆ ಕುರಿತಂತೆ ಚಾಲಕ ಉಮೇಶವಿರುದ್ಧ ಮದ್ದೂರು ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿದ್ದರು. ಕುದರಗುಂಡಿ ಗ್ರಾಮದ ಕೆ.ಬಿ. ನಾರಾಯಣ ಅವರ ಕ್ಯಾಂಟರ್ನ್ನು ಹಾಲು ಒಕ್ಕೂಟಕ್ಕೆ ಹಾಲು ಸಾಗಾಣಿಕೆ ಮಾಡಲು ಗುತ್ತಿಗೆ ಆಧಾರದ ಮೇಲೆ ಪಡೆಯಲಾಗಿತ್ತು. ಚಾಲಕ ಉಮೇಶ್ ಕೆಲ ದಿನಗಳ ಹಿಂದೆ ಒಕ್ಕೂಟದಿಂದ ಕಬ್ಬಿಣದ ರಾಡುಗಳನ್ನು ಸಾಗಾಣಿಕೆ ಮಾಡುತ್ತಿದ್ದಾಗ ಭದ್ರತಾಧಿಕಾರಿ ಪುಟ್ಟಸ್ವಾಮಿ ಕೈಗೆ ಸಿಕ್ಕಿ ಬಿದ್ದಿದ್ದ. ಈ ಬಗ್ಗೆ ಪುಟ್ಟಸ್ವಾಮಿ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಿದ್ದರು.