ಚುನಾವಣೆ ಭರಾಟೆ ಬಲು ಜೋರು
ಮತ್ತೀಕೆರೆ ಜಯರಾಮ್
ರಾಮನಗರ: ಜಿದ್ದಾಜಿದ್ದಿನ ಅಖಾಡವಾದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಉಳಿದೆಡೆಗಿಂತ ರಾಮನಗರದಲ್ಲಿ ಚುನಾವಣೆ ಭರಾಟೆ ಜೋರು. ಸಂಭಾವ್ಯ ಉಪ ಚುನಾವಣೆ ಕನವರಿಕೆಯಲ್ಲಿರುವ ಇಲ್ಲಿನ ಪ್ರಮುಖ ಪಕ್ಷಗಳ ನಾಯಕರು ಭರ್ಜರಿ ತಾಲೀಮು ನಡೆಸುತ್ತಿದ್ದಾರೆ.
ರಾಮನಗರ ಶಾಸಕ ಎಚ್.ಡಿ.ಕುಮಾರಸ್ವಾಮಿ ನೆರೆಯ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಅಭ್ಯರ್ಥಿ. ಅಲ್ಲೇನಾದರೂ ಅವರು ಗೆದ್ದರೆ, ರಾಮನಗರಕ್ಕೆ ಉಪ ಚುನಾವಣೆ ನಿಶ್ಚಿತ. ಹೀಗಾಗಿ ಇಲ್ಲಿನ ಮುಂದಾಳುಗಳು ಸಾಮರ್ಥ್ಯ ಸಾಬೀತಿಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಈ ವ್ಯಾಪ್ತಿಯ ಮತ ಗಳಿಕೆ, ಅಂತರ ಸಂಭಾವ್ಯ ಉಪ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಅಂತೆಯೇ ಈಗಿನ ಚುನಾವಣೆ ಸ್ಥಳೀಯ ಮುಖಂಡರ ಶಕ್ತಿ, ಸಾಮರ್ಥ್ಯಕ್ಕೆ ಅಳತೆಗೋಲು. ಈ ಹಿನ್ನೆಲೆಯಲ್ಲಿ ಪ್ರಮುಖ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿದೆ.
ಟಿಕೆಟ್ ಪೈಪೋಟಿ: ಸಂಭಾವ್ಯ ಉಪ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸುವ ಗುರಿಯೊಂದಿಗೆ ಹಲವರು ಹೋರಾಟ ತೀವ್ರಗೊಳಿಸಿದ್ದಾರೆ. ಸಾಂಪ್ರದಾಯಿಕ ಎದುರಾಳಿಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಉಭಯ ಪಕ್ಷಗಳಲ್ಲೂ ಭವಿಷ್ಯದ ಅಭ್ಯರ್ಥಿ ಕನಸು ಕಂಡವರ ಸಂಖ್ಯೆ ಕಮ್ಮಿಯಿಲ್ಲ. ಶತಾಯ ಗತಾಯ ಮುನ್ನಡೆ ಉಳಿಸಿಕೊಂಡು, ಕ್ಷೇತ್ರದಲ್ಲಿ ಕುಮಾರಸ್ವಾಮಿ ಬಳಿ ಮರ್ಯಾದೆ ಕಾಪಾಡಿಕೊಳ್ಳವುದು ಜೆಡಿಎಸ್ ಪಾಳಯದ ಗುರಿ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ ಕೊಡಿಸಿ, ಉಪ ಚುನಾವಣೆ ಟಿಕೆಟ್ ಖಾತ್ರಿಗಾಗಿ ಕೈ ಪಡೆ ನಾಯಕರು ಶ್ರಮಿಸುತ್ತಿದ್ದಾರೆ.
ಆಸೆಗೆ ತಣ್ಣೀರು: 2009ರಲ್ಲಿ ಲೋಕಸಭೆಗೆ ಕುಮಾರಸ್ವಾಮಿ ಆರಿಸಿ ಹೋದಾಗ ರಾಮನಗರ ವಿಧಾನಸಭೆ ಉಪ ಚುನಾವಣೆ ನಡೆದಿತ್ತು. ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನದ ಚುನಾವಣೆಯಲ್ಲೇ ಗೆಲ್ಲಲಾಗದ ಕೆ.ರಾಜು ಅವರು ಕುಮಾರಸ್ವಾಮಿ ನಾಮಬಲದೊಂದಿಗೆ ವಿಧಾನಸಭೆ ಪ್ರವೇಶಿಸಿದ್ದರು. ಆದರೆ, ಈ ಬಾರಿ ಪರಿಸ್ಥಿತಿ ಹಾಗಿಲ್ಲ. ನೆರೆಯ ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ ಸೋಲು ಕಂಡಿದ್ದಾರೆ. ಪುತ್ರ ನಿಖಿಲ್ ಗೌಡ ಕೂಡ ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹೇಳಿ ಕೇಳಿ ಇಲ್ಲಿ ಜೆಡಿಎಸ್ ಒಡೆದ ಮನೆ. ಮುಖಂಡರು ಕಾಲೆಳೆದಾಡುತ್ತಿದ್ದಾರೆ. ಹೀಗಾಗಿ ಕುಮಾರಸ್ವಾಮಿ ತಮ್ಮ ಕುಟುಂಬದಲ್ಲೇ ಒಬ್ಬರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಜೆಡಿಎಸ್ ಆಕಾಂಕ್ಷಿಗಳ ಆಸೆಗೆ ತಣ್ಣೀರೆರೆಚಿದಂತಾಗಿದೆ.
ಹೆಚ್ಚಿರುವ ಪೈಪೋಟಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವಯಂ ನಿವೃತ್ತ ಸರ್ಕಾರಿ ನೌಕರ ಮರಿದೇವರು ಅನಾಯಾಸವಾಗಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿ, ಕುಮಾರಸ್ವಾಮಿಗೆ ಪೈಪೋಟಿ ಒಡ್ಡಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಅವರು ಟಿಕೆಟ್ ಗಿಟ್ಟಿಸಲು ತೀವ್ರ ಪೈಪೋಟಿ ನಡೆಸಲೇಬೇಕಿದೆ. ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಅವರ ಪುತ್ರ ಎಲ್. ಚಂದ್ರಶೇಖರ್ ಹಿಂದಿಗಿಂತ ಹೆಚ್ಚು ಚಟುವಟಿಕೆಯಲ್ಲಿದ್ದಾರೆ. ಜೆಡಿಎಸ್ನಂತೆಯೇ ಕಾಂಗ್ರೆಸ್ನಲ್ಲೂ ಮುಸುಕಿನ ಗುದ್ದಾಟವಿದೆ. ಕನಕಪುರ ತಾಲೂಕಿನ 2 ಹೋಬಳಿಗಳು ರಾಮನಗರ ಕ್ಷೇತ್ರಕ್ಕೆ ಸೇರಿರುವ ಹಿನ್ನೆಲೆಯಲ್ಲಿ ವಿಪ ಮಾಜಿ ಸದಸ್ಯ ಎಸ್.ರವಿ ಹೆಸರೂ ಚಾಲ್ತಿಗೆ ಬಂದಿದೆ.
ಪಕ್ಷಾಂತರದ ಭರಾಟೆ: ಇಡೀ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಆಪರೇಷನ್ ಹಸ್ತ ಕಾರ್ಯಾಚರಣೆ ಬಿರುಸುಗೊಂಡಿದೆ. ಜೆಡಿಎಸ್ ಹಾಗೂ ಬಿಜೆಪಿಯ ಅತೃಪ್ತರು, ತಟಸ್ಥರಾಗಿರುವ ಮುಖಂಡರು ಮತ್ತು ಕಾರ್ಯಕರ್ತರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ. ಕಾಂಗ್ರೆಸ್ನಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮ ನಿತ್ಯ ನಿರಂತರವಾಗಿದ್ದು, ಅಲ್ಲಿ ಮುಖಂಡರು ಬ್ಯುಸಿಯಾಗಿದ್ದಾರೆ. ಲೋಕಸಭೆ ಕ್ಷೇತ್ರದ ಬೇರೆ ಏಳು ವಿಧಾನಸಭಾ ಕ್ಷೇತ್ರಗಳಿಗಿಂತ ರಾಮನಗರದಲ್ಲೇ ಪಕ್ಷಾಂತರ ಹೆಚ್ಚಾಗಿದೆ. ಎದುರಾಳಿ ಪಕ್ಷದವರನ್ನು ಬೇಟೆಯಾಡಿ ಸೆಳೆದುಕೊಂಡು, ಸ್ವಪಕ್ಷೀಯ ನಾಯಕರಿಂದ ಶಹಬ್ಬಾಸ್ ಗಿರಿ ಗಿಟ್ಟಿಸುವ ಮೂಲಕ ಅವರ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಸ್ಥಳೀಯ ಕಾಂಗ್ರೆಸ್ ಮುಖಂಡರು ಪ್ರಯತ್ನಿಸುತ್ತಿದ್ದಾರೆ.