ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜೆಡಿಎಸ್ ಇತಿಹಾಸ ಮರುಕಳಿಸಲಿದೆ

Rashmi Kasaragodu
Updated On : 30 Mar 2014, 2:28 am

ಚನ್ನಪಟ್ಟಣ: ಜೆಡಿಎಸ್ ಗತ ಇತಿಹಾಸ ಮರುಕಳಿಸುವಂತೆ ಮಾಡಲು ನಾನು ಇಲ್ಲಿಂದಲೇ ಹೋರಾಟ ಆರಂಭಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ತಾಲೂಕು ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಮುಖರ ಸಭೆಯಲ್ಲಿ ಮಾತನಾಡಿ, ಕೇವಲ 7 ಮಂದಿಯನ್ನು ಜತೆಯಲ್ಲಿಟ್ಟುಕೊಂಡು ಅಧಿಕಾರ ಹಿಡಿದಿರುವ ನನಗೆ ಲಕ್ಷಾಂತರ ಮಂದಿ ಜತೆಗಿರುವಾಗ ಪಕ್ಷವನ್ನು ಅಧಿಕಾರಕ್ಕೆ ತರುವುದು ಕಷ್ಟದ ಕೆಲಸವಲ್ಲ. ನನ್ನ ಜೀವಿತಾವಧಿಯ ಕೊನೆಯ ಕ್ಷಣದವರೆಗೂ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದರು.
ಜೆಡಿಎಸ್ ಅನ್ನು ನಿರ್ನಾಮ ಮಾಡುವುದಕ್ಕೆ ನಾನು ಮುಖ್ಯಮಂತ್ರಿಯಾಗಿದ್ದೇನೆ ಎನ್ನುತ್ತಿದ್ದಾರೆ. ಆದರೆ ದೇವೇಗೌಡರು ಬದುಕಿರುವವರೆಗೂ ಈ ಪಕ್ಷವನ್ನು ಯಾರೂ ತುಳಿಯಲು ಸಾಧ್ಯವಿಲ್ಲ. ಅವರಿಗೆಲ್ಲ ಜೆಡಿಎಸ್ ಎಂದರೆ ಏನು ಎಂಬುದನ್ನು  ಈ ಚುನಾವಣೆಯಲ್ಲಿ ತೋರಿಸುತ್ತೇನೆ. ನಮ್ಮ ಪಕ್ಷದಿಂದಲೇ ಬೆಳೆದವರು ಉಂಡಮನೆಗೆ ಎರಡು ಬಗೆಯುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರ ಮದದಲ್ಲಿ ಉದ್ಧಟತನದಿಂದ ವರ್ತಿಸುತ್ತಿರುವ ಇವರಿಗೆ ಜನತೆಯೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಬಿಜೆಪಿ ತಿರುಕನ ಕನಸು: ಗುಜರಾತ್ನಿಂದ ಹೊರ ಬರದ ಅನನುಭವಿಯನ್ನು ಮುಂದಿಟ್ಟುಕೊಂಡು ಬಿಜೆಪಿ ತಿರುಕನ ಕನಸು ಕಾಣುತ್ತಿದೆ. ದೇಶದ ಆಡಳಿತದ ಬಗ್ಗೆ ಒಂದಿಷ್ಟೂ ಅನುಭವ ಇಲ್ಲದ ಇಂತಹ ವ್ಯಕ್ತಿಯಿಂದ ಏನ್ನನು ತಾನೆ ನಿರೀಕ್ಷಿಸಲು ಸಾಧ್ಯ. ನಾನು ಸಂಸತ್ತಿಗೆ ಹೋದರೆ ಎಲ್ಲಿ ಅವರ ಜಾತಕ ಜಾಲಾಡಿಸುತ್ತೇನೋ ಎಂಬ ಭಯದಲ್ಲಿ ದೇವೇಗೌಡರನ್ನು ಮಾತ್ರ ಸಂಸತ್ತಿಗೆ ಕಳುಹಿಸಬೇಡಿ ಎಂದು ಮೋದಿ ರಾಜ್ಯ ಬಿಜೆಪಿಗೆ ತಿಳಿಸಿದ್ದಾರೆ ಎಂದರು.
ಪಕ್ಷಕ್ಕಾಗಿ ಒಂದಾಗಿ: ತಾಲೂಕು ಜೆಡಿಎಸ್ನಲ್ಲಿನ ಕೆಲ ಭಿನ್ನಾಭಿಪ್ರಾಯಗಳಿಂದಾಗಿ ಪಕ್ಷದ ಕೆಲ ಮುಖಂಡರು  ತಟಸ್ಥರಾಗಿದ್ದಾರೆ. ಪಕ್ಷದಿಂದ ನಿಮ್ಮ ಮನಸ್ಸಿಗೇನಾದರೂ ನೋವಾಗಿದ್ದರೆ ಕ್ಷಮೆ ಇರಲಿ, ಸಂಕಷ್ಟದ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನೀವೆಲ್ಲ ಒಗ್ಗೂಡಬೇಕಿದ್ದು ನಿಮ್ಮಲ್ಲಿನ ವೈಮನಸ್ಯವನ್ನು ನೀವೇ ತೊಡೆದು ಹಾಕಿ ಕೊಳ್ಳುವ ಮೂಲಕ ಪಕ್ಷದ ಅಭ್ಯರ್ಥಿ ಗೆಲವಿಗೆ ಶ್ರಮಿಸಿ, ಈ ನಿಟ್ಟಿನಲ್ಲಿ ನೀವು ತೊಡುವ ಸಂಕಲ್ಪವೇ ನನಗೆ ಕೊಡುವ ಉಡುಗೊರೆ ಎಂದರು.
ಡಿಕೆಶಿ ದರ್ಬಾರ್ ಹೆಚ್ಚು ದಿನ ನಡೆಯೋಲ್ಲ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮತ್ತು ಸಮಾಜ ಪರಿವರ್ತನಾ ಸಮುದಾಯದ ಹಿರೇಮಠ್ ಕನಕಪುರಕ್ಕೆ ಬರದಂತೆ ಧಮಕಿ ಹಾಕುವ ಮೂಲಕ
ಕನಕಪುರದ ಮಂತ್ರಿ ತಮ್ಮ ಉದ್ಧಟತನದ ಪರಮಾವಧಿಯನ್ನು ಮೀರಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಪ್ರಶ್ನಿಸಿದರೆ ಸಭೆಯಲ್ಲಿರುವುದಾಗಿ ಜಾರಿ ಕೊಳ್ಳುತ್ತಿದ್ದಾರೆ. ಸರ್ಕಾರ ನಮ್ಮ ಕೈಯಲ್ಲಿದೆ ಎಂದು ಅಧಿಕಾರಿಗಳನ್ನು ಕೈಗೊಂಬೆ ಮಾಡಿಕೊಂಡಿರುವ  ಈ ಸಚಿವರಿಗೆ ಜನತೆಯೇ ತಕ್ಕ ಪಾಠಕಲಿಸ ಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಪ್ರಭಾಕರ ರೆಡ್ಡಿ, ಮಾಜಿ ಶಾಸಕ ಎಂ.ಸಿ.ಅಶ್ವತ್ಥ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು, ಮುಖಂಡರಾದ ಸಿಂ.ಲಿಂ.ನಾಗರಾಜು ಹಾಗೂ ಜಿ.ಪಂ, ತಾ.ಪಂ, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement