ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಚೆಸ್ಕಾಂ ಎದುರು ಪ್ರತಿಭಟನೆ
ಮದ್ದೂರು: ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ತಾಲೂಕಿನ ಕೆ. ಹೊನ್ನಲಗೆರೆ ಸುತ್ತಮುತ್ತಲ ಗ್ರಾಮಸ್ಥರು ಗ್ರಾಮದ ಚೆಸ್ಕಾಂ ಶಾಖಾ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ತಾಲೂಕಿನ ಹೊನ್ನಲಗೆರೆ, ನೀಲಕಂಠನಹಳ್ಳಿ, ಹಾಗಲಹಳ್ಳಿ, ಕಬ್ಬಾರೆ, ಆಲೂರು, ಹಾಗೂ ಚುಂಚಗಳ್ಳಿ ಗ್ರಾಮಗಳಿಂದ ಆಗಮಿಸಿದ್ದ ಗ್ರಾಮಸ್ಥರು ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಚೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಕೆ.ಹೊನ್ನಲಗೆರೆ ಚೆಸ್ಕಾಂ ಶಾಖಾ ಕಚೇರಿ ವ್ಯಾಪ್ತಿಗೆ ಗ್ರಾಮಗಳಿಗೆ ವಿದ್ಯುತ್ ತೊಂದರೆಯಿಂದಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಚೆಸ್ಕಾಂ ಅಧಿಕಾರಿಗಳಿಗೆ ಹಲವಾರು ಭಾರಿ ಮನವಿ ಮಾಡಿದ್ದರೂ ಸಮಸ್ಯೆ ಬಗೆಹರಿಸಲು ಕ್ರಮಕೈಗೊಂಡಿಲ್ಲ ಎಂದು ದೂರಿದರು. ಗ್ರಾಮಗಳ ವಿದ್ಯುತ್ ಕಂಬಗಳಲ್ಲಿ ಜೋತು ಬಿದ್ದಿರುವ ತಂತಿಗಳನ್ನು ಸರಿಪಡಿಸುವ ಬಗ್ಗೆ ಗಮನ ಹರಿಸಿಲ್ಲ. ಕೆಟ್ಟು ಹೋಗಿರುವ ಟ್ರಾನ್ಸ್ಫಾರ್ಮರ್ಗಳನ್ನು ಸಕಾಲದಲ್ಲಿ ಬದಲಾವಣೆ ಮಾಡದ ಕಾರಣ ವಿದ್ಯುತ್ ಸಮಸ್ಯೆ ಎದುರಾಗಿದೆ ಎಂದು ಪ್ರತಿಭಟನಕಾರರು ದೂರಿದರು. ನಂತರ ಸ್ಥಳಕ್ಕೆ ಧಾವಿಸಿದ ಚೆಸ್ಕಾಂ ಕಿರಿಯ ಇಂಜಿನಿಯರ್ ಗಿರೀಶ್ಗೆ ಧರಣಿ ನಿರತರು ಮನವಿ ಸಲ್ಲಿಸಿದರು