ಕುಡಿವ ನೀರಿಗೆ ಹಾಹಾಕಾರ
ಮಾಗಡಿ: ಪಟ್ಟಣದ ಚನ್ನಪ್ಪ ಬಡಾವಣೆಯಲ್ಲಿ ಕಳೆದ ಒಂದು ತಿಂಗಳಿನಿಂದಲೂ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದರೂ ಎಚ್ಚತ್ತುಕೊಳ್ಳದ ಪುರಸಭೆ ವಿರುದ್ಧ ಬಡಾವಣೆ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದಲೂ ಚನ್ನಪ್ಪ ಬಡಾವಣೆ ನಿವಾಸಿಗಳು ಕುಡಿಯುವ ನೀರು ಪೂರೈಕೆ ಮಾಡುವಂತೆ
ಮನವಿ ಮಾಡಿದರೂ ಪುರಸಭೆ ಇಲ್ಲಿಯವರೆಗೂ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಿಲ್ಲ ಎಂದು ಆರೋಪಿಸಿದ್ದಾರೆ. ನೀರು ಪೂರೈಕೆಯಲ್ಲಿಯೂ ಪುರಸಭೆ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಬಲಾಢ್ಯರಿಗೆ ಮಾತ್ರ ನೀರು, ಬಡವರಿಗೆ ನೀರಿಲ್ಲ. ಬಡವರಿಂದ ಮತ ಪಡೆದ ವಾರ್ಡ್ ಸದಸ್ಯರು ವಾರ್ಡ್‌ಗಳಿಗೆ ಭೇಟಿ ನೀಡುತ್ತಿಲ್ಲ, ನೀರು ಪೂರೈಕೆಗೂ ಗಮನ ಹರಿಸುತ್ತಿಲ್ಲ. ತೆರಿಗೆ ಹಣ ಬಲಾಢ್ಯರ
ಅನುಕೂಲಕ್ಕಾಗಿಯೇ ಎಂದು ಪ್ರಶ್ನಿಸಿದ್ದಾರೆ. ಸೋಮವಾರ ಯುಗಾದಿ ಹಬ್ಬವಿದೆ. ನೀರಲ್ಲದೆ ಹಬ್ಬ ಆಚರಣೆ ಹೇಗೆ, ಕುಡಿಯಲು ನೀರು ಕೊಡದ ಪುರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಮಾಡಲಾಗಿದೆ ಎಂದು ಚನ್ನಪ್ಪ ಬಡಾವಣೆಯ ನಿವಾಸಿಗಳು ತಿಳಿಸಿದ್ದಾರೆ.
ಖಂಡನೆ: ಬಲಾಢ್ಯರ ಸಂಪುಗಳಿಗೆ ನೀರು ಪೂರೈಕೆ ಮಾಡುತ್ತಾ ಬಡವರಿಗೆ ನೀರು ಪೂರೈಕೆ ಮಾಡದೆ ತಾರತಮ್ಯ ಮಾಡುತ್ತಿರುವ ಪುರಸಭೆ ಅಧಿಕಾರಿಗಳ ಕಾರ್ಯವೈಕರಿಯನ್ನು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಕೆ.ಪಿ. ರಂಗಸ್ವಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.