ದೇವನಹಳ್ಳಿ ಒಳಾಂಗಣ ಕ್ರೀಡಾ ಸಂಘದ ಅಧ್ಯಕ್ಷರಾಗಿ ಸಿ. ಜಗನ್ನಾಥ್
ದೇವನಹಳ್ಳಿ: ಇಲ್ಲಿನ ಶಾಂತಿನಗರದಲ್ಲಿರುವ ಶ್ರೀ ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾ ಸಂಘದ 2014-15 ನೇ ಸಾಲಿಗೆ ಪುರಸಭೆಯ ಮಾಜಿ ಅಧ್ಯಕ್ಷ ಸಿ. ಜಗನ್ನಾಥ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಸಂಘದ ಗೌರವಾಧ್ಯಕ್ಷ ಪಟೇಲ್ ದೊಡ್ಡವೆಂಕಟಪ್ಪ ಅಧ್ಯಕ್ಷತೆಯಲ್ಲಿ ಅಧಿಕಾರ ಸ್ವೀಕಾರ ಸಮಾರಂಭ ಭಾನುವಾರ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಸಿ. ಜಗನ್ನಾಥ್ ಮಾತನಾಡಿ 2007 ರಲ್ಲಿ ಆರಂಭಗೊಂಡ ನಮ್ಮ ಕ್ರೀಡಾ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಉತ್ತಮ ಕ್ರೀಡಾಂಗಣ ಹೊಂದಿದ್ದು ಇದರ ಪ್ರಯೋಜನ ಕ್ರೀಡಾಪಟುಗಳಿಗೆ ಸಿಗುವಂತಾಗಲು ಎಲ್ಲ ಸದಸ್ಯರ ಮತ್ತು ಹಿಂದಿನ ಅಧ್ಯಕ್ಷರ ಸಹಕಾರ ಅಗತ್ಯ ಎಂದು ತಿಳಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸದಸ್ಯರನ್ನು ಸೇರಿಸಿಕೊಂಡು ಮತ್ತು ದಾನಿಗಳ ಸಹಕಾರದಿಂದ ಅಗತ್ಯ ನಿವೇಶನ ಖರೀದಿಸಿ ಈಜುಕೊಳ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದರು. ಗೌರವಾಧ್ಯಕ್ಷ ಪಟೇಲ್ ದೊಡ್ಡವೆಂಕಟಪ್ಪ, ಕಾರ್ಯದರ್ಶಿ ಪ್ರಕಾಶ್ ಉಪಸ್ಥಿತರಿದ್ದರು. ಮಂಜುನಾಥ್ ಸ್ವಾಗತ ಕೋರಿದರು. 2014-15 ನೇ ಸಾಲಿಗೆ ಪಟೇಲ್ ದೊಡ್ಡವೆಂಕಟಪ್ಪ- ಗೌರವಾಧ್ಯಕ್ಷರು, ಸಿ.ಜಗನ್ನಾಥ್- ಅಧ್ಯಕ್ಷರು, ಎಸ್.ಸಿ.ಚಂದ್ರಪ್ಪ- ಉಪಾಧ್ಯಕ್ಷರು, ವಿನಯಕುಮಾರ್ ಖಜಾಂಚಿ, ವೆಂಕಟೇಶ್ -ಸಹ ಕಾರ್ಯದರ್ಶಿ ಹಾಗೂ ಜಿ.ಎನ್. ವೇಣುಗೋಪಾಲ್, ಕೆ.ನಾಗರಾಜ್, ಎನ್.ರಘು, ಸಂಜೀವಪ್ಪ, ಅಂಬರೀಶ್, ಚಂದ್ರಶೇಖರ್ ಹಾಗೂ ಡಿ.ಎಂ. ವೇಣುಗೋಪಾಲ್ ನಿರ್ದೇಶಕರುಗಳಾಗಿ ಆಯ್ಕೆಗೊಂಡಿದ್ದಾರೆ.