ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರದಲ್ಲಿ ಈ ಬಾರಿ 250 ಮತಗಟ್ಟೆ

Rashmi Kasaragodu
Updated On : 31 Mar 2014, 1:12 am

ದೊಡ್ಡಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶಗಳೂ ಸೇರಿದಂತೆ ತಾಲೂಕಿನಲ್ಲಿ ಈ ಬಾರಿ ಒಟ್ಟು 250 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಅತಿಸೂಕ್ಷ್ಮ ಎಂದು ಗುರುತಿಸಲಾಗಿರುವ ಮತಗಟ್ಟೆಗಳಿಗೆ ಬೆಂ.ಗ್ರಾ.ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ. ಅಹದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನಾದ್ಯಂತ ಚುನಾವಣೆಗಳು ಶಾಂತಿಯುತವಾಗಿ ನಡೆಸಲು ವ್ಯಾಪಕ ಕಟ್ಟೆಚ್ಚರ ವಹಿಸಲಾಗುವುದು. ಏ.17ರಂದು ನಡೆಯುವ ಮತದಾನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲಾಗುವುದು.
  ಜಿಲ್ಲಾ ಚುನಾವಣಾಧಿಕಾರಿಗಳು ಈಗಾಗಲೇ ಕ್ಷೇತ್ರದಾದ್ಯಂತ ಹಲವು ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಮತಗಟ್ಟೆಗಳ ಗುರುತಿಸುವಿಕೆ, ಅವುಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವುದು ಸೇರಿದಂತೆ ಹಲವು ಸಿದ್ಧತಾ ಕಾರ್ಯಗಳನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಈ ಸಿದ್ಧತೆಗಳ ಭಾಗವಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ಭದ್ರತಾ ನಿಗಾ ವ್ಯವಸ್ಥೆಗೆ ಆದ್ಯತೆ ನೀಡಿದ್ದಾರೆ.
250 ಮತಗಟ್ಟೆಗಳು: ಈ ಬಾರಿಯ ಚುನಾವಣೆಗೆ ನಗರ ಮತ್ತು 5 ಹೋಬಳಿಗಳ ವ್ಯಾಪ್ತಿಯಲ್ಲಿ 250 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಅದರಲ್ಲಿ 50 ಅತಿಸೂಕ್ಷ್ಮ, 84 ಸೂಕ್ಷ್ಮ ಮತ್ತು 116 ಸಾಮಾನ್ಯ  ಮತಗಟ್ಟೆಗಳಾಗಿರುತ್ತವೆ. ಪೊಲೀಸ್ ಇಲಾಖೆ ಕೂಡ ಮತಗಟ್ಟೆಗಳ ತಪಾಸಣೆ ಮತ್ತು ಪರಿಶೀಲನೆಯಲ್ಲಿ
ತೊಡಗಿದೆ. ಕಳೆದ ಕೆಲ ಚುನಾವಣೆಗಳ ವಸ್ತುಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭದ್ರತೆ ಒದಗಿಸಲಾಗುತ್ತಿದೆ. ಅತಿಸೂಕ್ಷ್ಮ ಮತ್ತು ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತದೆ. ಮತದಾನ ಪ್ರಕ್ರಿಯೆ ಆರಂಭದಿಂದ ಮುಕ್ತಾಯದವರೆಗೆ ಪ್ರತಿ ಅರ್ಧ ಗಂಟೆಗೆ ಒಂದು ಬಾರಿ ಸಂಚಾರಿ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದು ವೃತ್ತ ಆರಕ್ಷಕ ನಿರೀಕ್ಷಕ ಶಿವಾರೆಡ್ಡಿ ತಿಳಿಸಿದ್ದಾರೆ.
ಪಥಸಂಚಲನೆ: ಚುನಾವಣಾ ಭದ್ರತೆಗೆ ನಿಯೋಜನೆಯಾಗಿರುವ ರಾಜ್ಯ ಪೊಲೀಸ್ ಸಿಬ್ಬಂದಿ ಮತ್ತು ಕೇರಳದಿಂದ ಆಗಮಿಸಿರುವ ಕ್ಷಿಪ್ರ ಕಾರ್ಯಾಚರಣೆ ಪಡೆ ತುಕಡಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಂತೆ ಸಾರ್ವಜನಿಕ ರಸ್ತೆಗಳಲ್ಲಿ ಪೊಲೀಸ್ ಪಥಸಂಚಲನೆ ಭಾನುವಾರ ನಡೆಯಿತು. ಚುನಾವಣಾ ಸಂದರ್ಭದ ಕಾನೂನು ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಸಾರ್ವಜನಿಕವಾಗಿ ಅರಿವು ಮತ್ತು ಭದ್ರತೆ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಪೊಲೀಸರ ಪಥ ಸಂಚಲನೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement