ಬಯಲುಸೀಮೆಗೆ ಕುಡಿವ ನೀರು ಕಲ್ಪಿಸಿಯೇ ಸಿದ್ಧ: ಮೊಯ್ಲಿ
ಮಾಗಡಿ: ಚಿಕ್ಕಬಳ್ಳಾಪುರ ಸೇರಿದಂತೆ ಇತರೆ ಬಯಲು ಸೀಮೆಗೆ ಕುಡಿಯುವ ನೀರು ಕಲ್ಪಿಸದಿದ್ದರೆ ನನ್ನಂತ ಅಯೋಗ್ಯ ರಾಜಕಾರಣಿ ಮತ್ತೊಬ್ಬ ಸಿಗಲಾರ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ತಿಳಿಸಿದರು.
ಅವರು ತಾಲೂಕಿನ ಸೋಲೂರು ಹೋಬಳಿ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿ ಮತನಾಡುತ್ತಾ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಕಲ್ಪಿಸಲು ಈಗಾಗಲೇ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಹೇಮಾವತಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹಾಗೂ ಬಯಲು ಸೀಮೆ ನೀರು ಹರಿಸುವುದನ್ನು ವಿರೋಧಿಸುವವರು ಬೇರೆ ಯಾರು ಇಲ್ಲ, ಮಾಜಿ ಪ್ರಧಾನಿ ಕುಟುಂಬದವರು ಮಾತ್ರ ವಿರೋಧಿಸಿಕೊಂಡು ಬಂದಿದ್ದಾರೆ. ಇಂತಹ ಕುಟುಂಬದಿಂದ ಬಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಿಕ್ಕಬಳ್ಳಾಪುರದ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇವರಿಗೆ ಮತ ಕೇಳುವ ನೈತಿಕತೆ ಇದೆಯೇ ಎಂದುಪ್ರಶ್ನಿಸಿದರು. ಈ ಬಾರಿ ಮತದಾರರು ನನ್ನನ್ನು ಕೈಬಿಡುವುದಿಲ್ಲಎಂದು ವಿಶ್ವಾಸ ವ್ಯಕ್ತಪಡಿಸಿದರು