ಮತದಾರರೇ ಕಡ್ಡಾಯ ಮತದಾನ ಮಾಡಿ
ಆನೇಕಲ್ಲು: ಏ.17ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಮತದಾರರೂ ಕಡ್ಡಾಯ ಮತದಾನದಲ್ಲಿ ಭಾಗವಹಿಸುವ ಮೂಲಕ ತಮ್ಮ ಅಮೂಲ್ಯ ಹಕ್ಕನ್ನು ಜಾರಿ ಮಾಡಬೇಕೆಂದು ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಶಿವಲಿಂಗಯ್ಯ ಮನವಿ ಮಾಡಿದ್ದಾರೆ. ಅವರು ತಾಲೂಕಿನ ಚಂದಾಪುರದಲ್ಲಿ ಕಡ್ಡಾಯ ಮತದಾನ ಜಾಗೃತಿ ಜಾಥಾಕ್ಕೆ ಮತದಾನ ಮಹತ್ವ ಮಾಹಿತಿ ಉಳ್ಳ ಕರಪತ್ರವನ್ನು ಹಂಚುವ ಮೂಲಕ ಚಾಲನೆ ನೀಡಿ ಮಾತನಾಡಿ ವಿದ್ಯಾವಂತ ಸಮುದಾಯ ಮತದಾನದಲ್ಲಿ ಭಾಗವಹಿಸದೇ ಆಲಸ್ಯ ತೋರುತ್ತಾರೆ. ಇದು ಸಂವಿದಾನಕ್ಕೆ ತೋರುವ ಅಪಚಾರ. ಕಡ್ಡಾಯವಾಗಿ ಮತಾದಾನದಲ್ಲಿ ಪಾಲ್ಗೊಂಡು ಕುಟುಂಬ ಸದಸ್ಯರನ್ನೂ ಹಾಗೂ ಗೆಳೆಯರನ್ನು ಪಾಲ್ಗೊಳ್ಳಲು ಪ್ರೇರೇಪಿಸಬೇಕೆಂದರು.
ದೊಡ್ಡಬಳ್ಳಾಪುರ: ಬಿಎಸ್ಪಿಗೆ ಸೇರ್ಪಡೆ
ದೊಡ್ಡಬಳ್ಳಾಪುರ: ಇಲ್ಲಿನ ಡಿಕ್ರಾಸ್ ಬಳಿ ಇರುವ ಬಿಎಸ್ಪಿ ಪಕ್ಷದ ಕಚೇರಿಯಲ್ಲಿ ಭಾನುವಾರ ಸಂಜೆ ವಿವಿಧ ಪಕ್ಷಗಳ ಕಾರ್ಯಕರ್ತರು ಬಿಎಸ್ಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಪಕ್ಷದ ತಾಲೂಕು ಅಧ್ಯಕ್ಷ ಬಸವರಾಜು ಮತ್ತು ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ಸಮ್ಮುಖದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ 13 ಮಂದಿ ಕಾರ್ಯಕರ್ತರು ಪಕ್ಷ ಸೇರಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಬಿಎಸ್ಪಿ ಜನರ ಪಕ್ಷ. ಜನರೇ ಹಣ ನೀಡಿ ಓಟು ಕೊಡುವ ಉದಾರತೆ ಹೊಂದಿದ್ದಾರೆ. ಭ್ರಷ್ಚಾಚಾರ ಮುಕ್ತ ಮತ್ತು ಬಹುಜನಸ್ನೇಹಿ ಆಡಳಿತಕ್ಕಾಗಿ ದೇಶದಲ್ಲಿ ಬಿಎಸ್ಪಿ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಪಾರದರ್ಶಕ ಆಡಳಿತಕ್ಕಾಗಿ, ಸಂವಿಧಾನದ ಮೌಲ್ಯಗಳ ಜಾರಿಗಾಗಿ ಬಿಎಸ್ಪಿ ಬೆಳೆಯಬೇಕಿದ್ದು, ಮತಗಟ್ಟೆ ಹಂತದಿಂದ ಸಂಘಟನೆ ಮಾಡಲಾಗುತ್ತಿದೆ ಎಂದರು. ಸೇರ್ಪಡೆಗೊಂದ ಕಾರ್ಯಕರ್ತರಾದ ಚಂದ್ರಪ್ಪ, ಅಪ್ರೋಜ್ ಪಾಷಾ, ಶ್ರೀನಿವಾಸ್, ಫಾತೀಮಾ, ಕಮಲಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.