ಸಂಜೆ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಅಭಿನಂದನೆ
ದೊಡ್ಡಬಳ್ಳಾಪುರ: ಇಲ್ಲಿನ ಮಾಳವ ಸಂಜೆ ಪದವಿ ಕಾಲೇಜಿನಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರೊ.ಚಂದ್ರಪ್ಪ, ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಮತ್ತು ವಿಷಯವಾರು ಹೆಚ್ಚಿನ ಅಂಕಗಳನ್ನು ಪಡೆಯಲು ಶ್ರಮಿಸಿದ ಪ್ರಾಧ್ಯಾಪಕರುಗಳನ್ನು ಅಭಿನಂದಿಸುತ್ತಿರುವುದು ಸ್ತುತ್ಯಾರ್ಹ.
ಸಂಜೆ ಕಾಲೇಜುಗಳಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಂಬಲ ಇತರರಿಗಿಂತ ಹೆಚ್ಚಿನದಾಗಿರುತ್ತದೆ ಎಂದರು.
ಆಡಳಿತ ಮಂಡಲಿ ನಿರ್ದೇಶಕ ಬ್ಯಾಂಕ್ ರಾಮಕೃಷ್ಣಪ್ಪ ಮಾತನಾಡಿ ಮುಂದಿನ ದಿನಗಳಲ್ಲಿ ಕಾಲೇಜಿನ ಶ್ರೇಯೋಭಿವೃದ್ಧಿಗೆ ಈ ಸಾಧನೆ ಮಾರ್ಗದರ್ಶಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲ ಪ್ರೊ.ಜಿ.ಕೆ.ಅನಂತಪ್ರಕಾಶ್, ಉಪನ್ಯಾಸಕ ಬಿ.ಎನ್.ನರಸಿಂಹಮೂರ್ತಿ ಸೇರಿದಂತೆ ಅನೇಕರು ಹಾಜರಿದ್ದರು.