'ಬಮೂಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ'
ಚನ್ನಪಟ್ಟಣ : ಬಮೂಲ್ ನಿರ್ದೇಶಕ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ನಾನು ಕಣಕ್ಕಿಳಿಯಲು ಇಚ್ಛಿಸಿದ್ದು ಪಕ್ಷದ ಹೈಕಮ್ಯಾಂಡ್ ನನಗೆ ಅವಕಾಶ ನೀಡುತ್ತದೆ ಎಂದು ಒಕ್ಕಲಿಗರ ಸಂಘದ ನಿರ್ದೇಶಕ ಎಚ್.ಸಿ. ಜಯಮುತ್ತು ಪ್ರಕಟಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರ ಜತೆಗೆ ನಾನು ಈಗಾಗಲೇ ಮಾತನಾಡಿದ್ದು, ಕಳೆದ ಬಾರಿ ಪರಾಜಿತ ಗೊಂಡಿದ್ದ ಬೋರ್ವೆಲ್ ರಾಮಚಂದ್ರು ಸಹ ನನಗೆ ಬೆಂಬಲ ನೀಡಲಿದ್ದಾರೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಬೆಂಬಲ ನನಗೆ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಅರ್ಹ: ಈ ಬಾರಿಯ ಚುನಾವಣೆಯಲ್ಲಿ ನಾನು ಸ್ಪರ್ಧೆಗೆ ಅರ್ಹನಲ್ಲ ಎಂದು ಬಿಂಬಿಸಲಾಗುತ್ತಿದೆ. ಆದರೆ ಚುನಾವಣೆ ನಡೆಯುತ್ತಿರುವುದು ಹಿಂದಿನ ಸಾಲಿಗೆ 2013-14ನೇ ಸಾಲಿನಲ್ಲಿ ನಮ್ಮ ಸಂಘ ವರ್ಷ ಪೂರ್ತಿ ಹಾಲು ಪೂರೈಕೆ ಮಾಡಿರುವುದರಿಂದ ನಾನು ಸ್ಪರ್ಧೆಗಿಳಿಯಲು ಅರ್ಹನಾಗಿದ್ದು ನನ್ನ ಸ್ಪರ್ಧೆಗೆ ಯಾವುದೇ ಕಾನೂನು ತೊಡಕಿಲ್ಲ ಎಂದರು.
ಹೈಕಮ್ಯಾಂಡ್ ಜತೆ ನಾನು ಮಾತನಾಡಿದ್ದು ನನಗೆ ಅವಕಾಶ ನೀಡುವುದಾಗಿ ತಿಳಿಸಿದ್ದು, ಎಲ್ಲವನ್ನು ಸರಿಪಡಿಸಲು 2 ದಿನಗಳ ಕಾಲಾವಕಾಶ ಕೇಳಿದೆ. ಇನ್ನೆರಡು ದಿನಗಳಲ್ಲಿ ನನ್ನನ್ನೇ ಅಧಿಕೃತ ಅಭ್ಯರ್ಥಿ ಎಂದು ಪಕ್ಷ ಘೋಷಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜತೆ ಕೈ ಜೋಡಿಸಿಲ್ಲ: ಅಧಿಕಾರಿಗಳು ಪಕ್ಷಪಾತ ಮಾಡುತ್ತಿದ್ದರಿಂದ ನಾವೆಲ್ಲ ಒಕ್ಕೂಟಕ್ಕೆ ಅರ್ಜಿ ನೀಡಿರುವುದು ನಿಜವಾದರೂ, ನಮ್ಮ ಪತ್ರದ ಮೇಲೆ ವರ್ಗಾವಣೆ ನಡೆದಿಲ್ಲ. ಶಾಸಕ ಯೋಗೇಶ್ವರ್ಗೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ನೀಡಿರುವ ದೂರಿನ ಮೇರೆಗೆ ವರ್ಗಾವಣೆ ಮಾಡಲಾಗಿದೆ ಎಂದರು.
ಲಿಂಗೇಶ್ ಕುಮಾರ್ ಪಕ್ಷದ ಬೆಳವಣಿಗೆಗೆ ಯಾವುದೇ ಕೊಡುಗೆ ನೀಡಿಲ್ಲ, ಅಧಿಕಾರವನ್ನು ದುರ್ಬಳಕೆ ಮಾಡಿ ಕೊಂಡಿದ್ದಾರೆ. ಅವರ ವಿರುದ್ಧವಾಗಿ ನಮಗೆ ಬೆಂಬಲ ಸಿಗಲಿದ್ದು ಅವರು ಒಕ್ಕೂಟದ ಕೊಡುಗೆಯನ್ನು ತಮ್ಮದೆಂದು ಬಿಂಬಿಸಿ ಕೊಳ್ಳುತ್ತಿದ್ದಾರೆ. ಮತದಾನದ ಹಕ್ಕು ಪಡೆದವರನ್ನು ಹೈಜಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಂಪೂರ್ಣ ಬೆಂಬಲ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ಬೋರ್ವೆಲ್ ರಾಮಚಂದ್ರು ಈ ಬಾರಿಯ ಚುನಾವಣೆಯಲ್ಲಿ ನಾನು ಜಯಮುತ್ತುಗೆ ಬೆಂಬಲಿಸುತ್ತೇನೆ. ನಾನೇ ಅಭ್ಯರ್ಥಿ ಎಂದು ಕೊಂಡು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ನಾವೆಲ್ಲ ಪಕ್ಷ ನಿಷ್ಠರಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ಜಿ.ಪಂನಲ್ಲಿ ನನಗೆ ಕಾಂಗ್ರೆಸ್ ಬೆಂಬಲ ನೀಡಿತ್ತೇ ವಿನಾ ನಾನು ಕಾಂಗ್ರೆಸ್ಗೆ ಹೋಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಸುದ್ದಿ ಗೋಷ್ಠಿಯಲ್ಲಿ ಗೋವಿಂದಹಳ್ಳಿ ನಾಗರಾಜು, ಅರಳಾಳುಸಂದ್ರ ಶಿವಪ್ಪ, ಎಂಜಿಕೆ ಪ್ರಕಾಶ್, ಮಳೂರುಪಟ್ಟಣ ರವಿ ಉಪಸ್ಥಿತರಿದ್ದರು.