ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಾರ್ವಜನಿಕ ಸ್ಥಳಗಳಲ್ಲಿ ಕಸ ವಿಲೇವಾರಿ

Mainashree
Updated On : 2 May 2014, 12:59 pm

ಕ.ಪ್ರ.ವಾರ್ತೆ ರಾಮನಗರ ಮೇ 1
ಬಿಬಿಎಂಪಿ ಕಸಕ್ಕೆ ರಾಮನಗರವನ್ನು ತೊಟ್ಟಿಯಾಗಿಸುವ ಪ್ರಸ್ತಾಪವನ್ನು ಸರ್ಕಾರ ಕೈಬಿಟ್ಟಿರಬಹುದು. ಆದರೆ, ಬೆಂಗಳೂರಿನ ಕಸವನ್ನಲ್ಲದೆ ಕಾರ್ಖಾನೆ ಮತ್ತಿತರೆ ತ್ಯಾಜ್ಯವನ್ನು ಇಲ್ಲಿನ ಕೃಷಿ ಜಮೀನು, ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿ ವಿಲೇವಾರಿ ಮಾಡುವುದು ಅವ್ಯಾಹತವಾಗಿ ಮುಂದುವರೆದಿದೆ.
ಚನ್ನಪಟ್ಟಣದ ಪುರಾಣ ಪ್ರಸಿದ್ಧ ಕೆಂಗಲ್ ದೇಗುಲದ ಮಗ್ಗುಲಲ್ಲೇ ಇರುವ ಪೌಳಿದೊಡ್ಡಿ ಗ್ರಾಮದ ಕೃಷಿ ಜಮೀನಲ್ಲಿ ಚಪ್ಪಲಿ ಮತ್ತು ಶೂ ಕಾರ್ಖಾನೆಯ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ. ಅದರಿಂದ ಸುತ್ತಮುತ್ತ ಇರುವ ಕೃಷಿ ಮತ್ತು ತೋಟಗಾರಿಕೆ ಬೆಳೆಗೆ ಪ್ರತಿಕೂಲ ಪರಿಣಾಮ ಬೀರುವ ಆತಂಕವಿದೆ.
ಪ್ಯೂಪಕ್ಕೂ ಅಡ್ಡಿಯಿಲ್ಲ: ಚಪ್ಪಲಿ ಕಾರ್ಖಾನೆ ತ್ಯಾಜ್ಯ ವಿಲೇವಾರಿ ಸ್ಥಳ ವಂದಾರಗುಪ್ಪೆ ಗ್ರಾ.ಪಂ. ವ್ಯಾಪ್ತಿಗೆ ಸೇರುತ್ತದೆ. ಈಚೆಗೆ ವಿವಾದಕ್ಕೀಡಾಗಿಯೂ ತಲೆ ಎತ್ತಿರುವ ರೇಷ್ಮೆ ನೂಲು ಬಿಚ್ಚಾಣಿಕೆ ನಂತರ ಉಳಿಯುವ ಸತ್ತ ಹುಳು ಸಹಿತ ತ್ಯಾಜ್ಯವಾದ ಪ್ಯೂಪದ ಸಂಸ್ಕರಣ ಘಟಕಕ್ಕೂ ಇದೇ ಗ್ರಾ.ಪಂ. ಅನುಮತಿ ನೀಡಿದೆ.  ಬೆಂಗಳೂರು ಮಗ್ಗುಲಲ್ಲಿದೆ, ರಸ್ತೆ ಸಂಪರ್ಕವಿದೆ ಎನ್ನುವ ಕಾರಣಕ್ಕೆ ಈ ಜಿಲ್ಲೆಯನ್ನು ಬೆಂಗಳೂರಿಗರು, ಕಾರ್ಖಾನೆಗಳು ಕಸದ ತೊಟ್ಟಿ ಮಾಡಿಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ. ಬೆಂಗಳೂರು ಕೊಳಚೆ ನೀರಿನಿಂದ ತುಂಬಿದ ವೃಷಭಾವತಿಯ ವಿಷವನ್ನೂ ಈ ಜಿಲ್ಲೆ ಜನತೆಗೆ ಉಣಿಸಲಾಗುತ್ತಿದೆ.
ಆದೇಶ ಲೆಕ್ಕಕ್ಕಿಲ್ಲ: ರಾಮನಗರ ಮತ್ತು ಚನ್ನಪಟ್ಟಣ ನಗರಸಭೆ ಆಡಳಿತಗಳು ಹೆದ್ದಾರಿ ಇಕ್ಕೆಲ, ನಗರ ಪರಿಮಿತಿಯಲ್ಲಿ ಅಪಾಯಕಾರಿ ತ್ಯಾಜ್ಯ ವಿಲೇವಾರಿ ಮಾಡಕೂಡದು ಎಂದು ಆದೇಶ ಹೊರಡಿಸಿವೆ. ತಪ್ಪಿತಸ್ಥರಿಗೆ ರು.25 ಸಾವಿರ ದಂಡ, ಕ್ರಿಮಿನಲ್ ಮೊಕದ್ದಮೆ ಬೆದರಿಕೆ ಹಾಕಿದ್ದಾಗ್ಯೂ ಕಿಡಿಗೇಡಿಗಳ ಉಪಟಳಕ್ಕೆ ಕಡೆಯೇ ಇಲ್ಲದಂತಾಗಿದೆ.   ಮಾಂಸದ ಅಂಗಡಿಗಳು, ಹೋಟೆಲ್ ಮತ್ತು ರೇಷ್ಮೆ ನೂಲು ಬಿಚ್ಚಾಣಿಕೆ ಕೇಂದ್ರಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಮನಸೋ ಇಚ್ಛೆ ವಿಲೇವಾರಿ ಮಾಡಲಾಗುತ್ತಿದೆ. ಕೆಡವಲ್ಪಟ್ಟ ಮನೆಗಳ ತ್ಯಾಜ್ಯ ವಿಲೇವಾರಿಯೂ ರಸ್ತೆ ಬದಿಯೇ ಆಗುತ್ತಿದೆ. ಇದೆಲ್ಲವನ್ನೂ ಗಮನಿಸಿದರೆ ಅಧಿಕಾರಿಗಳ ಆದೇಶ ಲೆಕ್ಕಕ್ಕಿಲ್ಲ ಎನ್ನುವುದು ಸ್ಪಷ್ಟ.
ವಿಷಯುಕ್ತ ರಾಸಾಯನಿಕ: ಬಟ್ಟೆಗೆ ಬಣ್ಣ ಹಚ್ಚುವ ಕಾರ್ಖಾನೆಗಳು ರಾಮನಗರ, ಬಿಡದಿ, ಹಾರೋಹಳ್ಳಿ ಭಾಗದಲ್ಲಿ ಸಾಕಷ್ಟಿವೆ. ಆ ಕಾರ್ಖಾನೆಗಳಿಂದ ಹೊರ ಬರುವ ವಿಷಯುಕ್ತ ರಾಸಾಯನಿಕದ ತ್ಯಾಜ್ಯ ವಿಲೇವಾರಿ ಕಾರ್ಖಾನೆಗಳು ಸೂಕ್ತ ವ್ಯವಸ್ಥೆ ಮಾಡಿಕೊಂಡಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬರುತ್ತಲೇ ಇದೆ.   ಹೀಗೆ ರಾಮನಗರ ಜಿಲ್ಲೆಯಲ್ಲಿ ಪರಿಸರಕ್ಕೆ ಅವ್ಯಾಹತವಾಗಿ ಧಕ್ಕೆ ಉಂಟಾಗುತ್ತಲೇ ಇದ್ದರೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಣ್ಮುಚ್ಚಿ ಕುಳಿತಿದೆ. ಜಿಲ್ಲಾಡಳಿತ, ಜಿಲ್ಲೆಯ ಜನಪ್ರತಿನಿಧಿಗಳೂ ತಮಗೇನೂ ಸಂಬಂಧವೇ ಇಲ್ಲವೆನ್ನುವಂತೆ ಕೈಕಟ್ಟಿ ಕುಳಿತಿರುವುದು ದುರಂತವೇ ಸರಿ.

 ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement