ಓದಿನ ಜೊತೆ ಸಾಂಸ್ಕೃತಿಕ ಕ್ರಿಯಾಶೀಲತೆ ಮುಖ್ಯ
ದೊಡ್ಡಬಳ್ಳಾಪುರ: ಮಕ್ಕಳಿಗೆ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅಗತ್ಯವಾಗಿದ್ದು, ಸಾಂಸ್ಕೃತಿಕ ಚಟುವಟಿಕೆಗಳು ಕ್ರಿಯಾಶೀಲತೆ ಬೆಳೆಸಲು ಸಹಕಾರಿ ಎಂದು ಕನ್ನಡ ಜಾಗೃತ ಪರಿಷತ್ತಿನ ಅಧ್ಯಕ್ಷ ಡಿ.ವಿ.ಅಶ್ವತ್ಥಪ್ಪ ಹೇಳಿದರು.
ಇಲ್ಲಿನ ಭಗವಾನ್ ಬುದ್ಧ ಸಮುದಾಯ ಅಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ಬಡ ಮಕ್ಕಳಿಗಾಗಿ ನಡೆದ 10 ದಿನಗಳ ರಂಗ ತರಬೇತಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳಿಗೆ ಆಸಕ್ತಿಯಿರುವ ಕಲೆ ಮತ್ತು ಕ್ರೀಡೆಗಳಲ್ಲಿ ಭಾಗವಹಿಸಲು ಪೋಷಕರು ಉತ್ತೇಜನ ನೀಡಬೇಕು. ಅವರ ಸುಪ್ತ ಪ್ರತಿಭೆಯ ಅನಾವರಣಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು. ಪಠ್ಯದ ಓದು, ಕ್ರಮ ಬದ್ಧ ಅರ್ಥೈಸುವಿಕೆ ಮತ್ತು ವಿಶ್ಲೇಷಣಾ ಮನೋಭಾವ ಮಕ್ಕಳಿಗೆ ಹೊಸ ಆಲೋಚನೆಗಳನ್ನು ಬೆಳೆಸಲು ಉತ್ತೇಜನಕಾರಿಯಾಗಿರುತ್ತವೆ. ಈ ಬಗೆಯ ರಂಗ ಶಿಬಿರಗಳು ಈ ಬಗೆಯ ಚಿಂತನೆಗಳಿಗೆ ಹೆಚ್ಚು ಅವಕಾಶಗಳನ್ನು ಕೊಡಬೇಕು ಎಂದರು.
ನಗರಸಭಾ ಮಾಜಿ ಸದಸ್ಯ ಸುಬ್ರಹ್ಮಣ್ಯ ಮಾತನಾಡಿ ಬೇಸಿಗೆ ಶಿಬಿರಗಳು ಸಮಾಜಮುಖಿ ಚಿಂತನೆ ಪ್ರಚೋದಿಸಲು ಬಳಕೆಯಾಗುತ್ತಿರುವುದು ಸ್ತುತ್ಯಾರ್ಹ. ಮಕ್ಕಳ ಪ್ರತಿಭೆಯನ್ನು ಹೊರತರಲು ಉತ್ತಮ ವೇದಿಕೆಯಾಗಿ ಈ ಶಿಬಿರ ರೂಪಗೊಂಡಿರುವುದು ವಿಶೇಷ. ಇದೇ ರೀತಿ ಟ್ರಸ್ಟ್ ನೇತೃತ್ವದಲ್ಲಿ ಕಳೆದ 7 ವರ್ಷಗಳಿಂದ ಉತ್ತಮ ಶಿಬಿರಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಇದೊಂದು ಉತ್ತಮ ಕೆಲಸ. ಸಮಾಜದ ಸಹಕಾರದಲ್ಲಿ ಅಗತ್ಯವಿರುವ ಮಕ್ಕಳನ್ನು ಗುರ್ತಿಸಿ ಈ ಬಗೆಯ ಶಿಬಿರದಲ್ಲಿ ಮಾರ್ಗದರ್ಶನ ಮಾಡುವುದು ಗಣನೀಯ ಎಂದರು.
ಸಂಸ್ಥೆಯ ಅಧ್ಯಕ್ಷೆ ಜಿ.ಸವಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಸರ್ಗ ಯೋಗ ಕೇಂದ್ರದ ಎ.ನಟರಾಜ್, ಕಸಾಪ ತಾ.ಅಧ್ಯಕ್ಷ ಡಿ.ಶ್ರೀಕಾಂತ, ದಲಿತ ಮುಖಂಡ ವೆಂಕಟೇಶ್, ರಮೇಶ್, ಮಹೇಶ್, ಭಗವಾನ್ ಬುದ್ಧ ಸಮುದಾಯ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಾಜು ಸಣ್ಣಕ್ಕಿ, ಗೌತಮ್ ಕವಿತ ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಬಿರದ ಮಕ್ಕಳು ಕಲಿತ ಪ್ರಗತಿಯ ಪಥ ನಾಟಕ ಪ್ರದರ್ಶನ ನಡೆಯಿತು.