3 ತಿಂಗಳಲ್ಲಿ 60 ಪ್ರಕರಣಗಳ ಪತ್ತೆ
ರಾಮನಗರ: ಕಳೆದ ಮೂರು ತಿಂಗಳ ಅವಧಿಯಲ್ಲಿ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 14 ಕೊಲೆ ಸೇರಿದಂತೆ 209 ಅಪರಾಧ ಪ್ರಕರಣಗಳು ದಾಖಲಾಗಿದ್ದು, 60 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ವಶಪಡಿಸಿಕೊಂಡಿರುವ 79.83 ಲಕ್ಷ ಮೌಲ್ಯದ ಮಾಲುಗಳಲ್ಲಿ ರು.71.38 ಲಕ್ಷದಷ್ಟು ಮೌಲ್ಯದ್ದನ್ನು ಫಿರ್ಯಾದುದಾರರಿಗೆ ಹಿಂತಿರುಗಿಸಲಾಗಿದೆ.
ಪ್ರಸಕ್ತ 2014ನೇ ಸಾಲಿನ ಜ.1 ರಿಂದ ಮಾ.31ರವರೆಗಿನ ತ್ರೈ ಮಾಸಿಕ ಅಪರಾಧ, ಅಪಘಾತ, ಕೊಲೆ, ಸುಲಿಗೆ, ದರೋಡೆ ಸಹಿತ ಪ್ರಕರಣಗಳ ವಿವರಗಳನ್ನು ಶನಿವಾರ ಸುದ್ದಿಗೋಷ್ಠಿಯಲ್ಲಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್, ಸಹೋದ್ಯೋಗಿಗಳ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದರು.
13 ಕೊಲೆ ಪತ್ತೆ: 14 ಕೊಲೆ ಪ್ರಕರಣಗಳಲ್ಲಿ 13 ಪ್ರಕರಣ ಪತ್ತೆಯಾಗಿವೆ. ರು.2.40 ಲಕ್ಷ ಮೌಲ್ಯದ ಮಾಲು ದೋಚಲಾಗಿತ್ತು. ಅಷ್ಟನ್ನೂ ಪೂರ್ಣ ಪ್ರಮಾಣದಲ್ಲಿ ವಶಪಡಿಸಿಕೊಂಡು, ರು.80 ಸಾವಿರ ಮೌಲ್ಯದ್ದನ್ನು ವಾರಸುದಾರರ ವಶಕ್ಕೆ ಒಪ್ಪಿಸಲಾಗಿದೆ. ಲಾಭಕ್ಕಾಗಿ ನಡೆದ 1 ಕೊಲೆಯನ್ನೂ ಪತ್ತೆ ಮಾಡಲಾಗಿದೆ. ರು.54.50 ಲಕ್ಷ ಮಾಲು ವಶಪಡಿಸಿಕೊಂಡು, ರು.50 ಲಕ್ಷದ ಮಾಲನ್ನು ದೂರುದಾರರ ವಶಕ್ಕೆ ನೀಡಲಾಗಿದೆ ಎಂದರು.
ದರೋಡೆ ಪ್ರಕರಣ: ಡಕಾಯಿತಿ ಮತ್ತು ದರೋಡೆಯ 23 ಪ್ರಕರಣಗಳಲ್ಲಿ 13 ಪತ್ತೆಯಾಗಿವೆ. ರು.16 ಲಕ್ಷದ ಮಾಲನ್ನು ದೂರುದಾರರು ಕಳೆದುಕೊಂಡಿದ್ದರು. ಅದರಲ್ಲಿ ರು.4.50 ಲಕ್ಷದಷ್ಟನ್ನು ವಶಪಡಿಸಿಕೊಂಡು, ರು.3.60 ಲಕ್ಷದಷ್ಟನ್ನು ಹಿಂತಿರುಗಿಸಲಾಗಿದೆ. 11 ಸರಗಳ್ಳತನ ಪ್ರಕರಣಗಳಲ್ಲಿ 2 ಪತ್ತೆಯಾಗಿದ್ದು, ರು.1.60 ಲಕ್ಷದ ಮಾಲನ್ನು ಮಾಲೀಕರಿಗೆ ನೀಡಲಾಗಿದೆ ಎಂದು ಅನುಪಮ್ ಅಗ್ರವಾಲ್ ವಿವರಿಸಿದರು.
ಕಳವು ಪ್ರಕರಣಗಳು: ಹಲಗು ಮನೆ ದರೋಡೆಯ 6, ರಾತ್ರಿ ಮನೆ ದರೋಡೆಯ 38, 12 ಮನೆ ಕಳ್ಳತನ, 104 ಸಾಮಾನ್ಯ ಕಳವು ಪ್ರಕರಣಗಳು ಸಂಭವಿಸಿವೆ. ಇವುಗಳಲ್ಲಿ ಕ್ರಮವಾಗಿ 1, 5, 5, 20 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಇವುಗಳಿಂದ ನಗದು ಸಹಿತ ರು.17 ಲಕ್ಷದಷ್ಟು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, ರು.16.50 ಲಕ್ಷದಷ್ಟನ್ನು ಮಾಲೀಕರಿಗೆ ಹಿಂತಿರುಗಿಸಲಾಗಿದೆ ಎಂದರು.
141 ಮಂದಿ ದಸ್ತಗಿರಿ: ಎಲ್ಲ 209 ಪ್ರಕರಣಗಳಲ್ಲಿ 141 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಕೊಲೆ ಪ್ರಕರಣಗಳಲ್ಲಿ 26, ಡಕಾಯಿತಿ ಪ್ರಕರಣಗಳಲ್ಲಿ 38, ದರೋಡೆ ಪ್ರಕರಣಗಳಲ್ಲಿ 19, ವಿವಿಧ ಕಳ್ಳತನ ಪ್ರಕರಣಗಳಲ್ಲಿ 58 ಮಂದಿ ಬಂಧಿತರಾಗಿದ್ದಾರೆ. ತಲೆಮರೆಸಿಕೊಂಡ ಇನ್ನೂ ಕೆಲವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಅನುಪಮ್ ಅಗ್ರವಾಲ್ ತಿಳಿಸಿದರು.
1.94 ಕೋಟಿ ದಂಡ : ಪರವಾನಗಿ ರಹಿತ ಚಾಲನೆ, ವಿಮೆ ಇಲ್ಲದ ವಾಹನ ಚಾಲನೆ ಸಹಿತ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಸಂಬಂಧ 8558 ಪ್ರಕರಣಗಳನ್ನು ದಾಖಲು ಮಾಡಿಕೊಂಡು, ಒಟ್ಟಾರೆ ರು.1.94 ಕೋಟಿ ದಂಡ ವಸೂಲು ಮಾಡಲಾಗಿದೆ. ಈ ಪೈಕಿ ಜನವರಿಯಲ್ಲಿ 3805, ಫೆಬ್ರವರಿಯಲ್ಲಿ 2718, ಮಾರ್ಚ್‌ನಲ್ಲಿ 2035 ಪ್ರಕರಣ ದಾಖಲಾಗಿವೆ ಎಂದು ಅವರು ಹೇಳಿದ್ದಾರೆ.
ಅಪಘಾತ ಪ್ರಕರಣ: ಜನವರಿಯಲ್ಲಿ 158, ಫೆಬ್ರವರಿಯಲ್ಲಿ 134, ಮಾರ್ಚ್‌ನಲ್ಲಿ 146 ಸೇರಿದಂತೆ ತ್ರೈಮಾಸಿಕ ಅವಧಿಯಲ್ಲಿ ಒಟ್ಟಾರೆ 438 ಅಪಘಾತ ಪ್ರಕರಣ ದಾಖಲಾಗಿವೆ. 101 ಮಂದಿ ಸಾವನ್ನಪ್ಪಿದ್ದು, 455 ಮಂದಿ ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ವಿವರಣೆ ನೀಡಿದ್ದಾರೆ.
130 ದಾಳಿ ಪ್ರಕರಣ: ಜೂಜು ಅಡ್ಡೆಗಳ ಮೇಲೆ 58, ಎಸ್ಮಾ ಕಾಯ್ದೆಯಡಿ 1, ಅಬಕಾರಿ ಸಂಬಂಧ 71 ಸೇರಿದಂತೆ ಒಟ್ಟಾರೆ 130 ದಾಳಿಗಳನ್ನು ನಡೆಸಲಾಗಿದೆ. ಜೂಜು ದಾಳಿಯಲ್ಲಿ ರು.4.77 ಲಕ್ಷ, ಅಬಕಾರಿ ದಾಳಿಯಿಂದ ರು.92538 ನಗದು ವಶಪಡಿಸಿಕೊಳ್ಳಲಾಗಿದೆ. ಮಾರ್ಚ್ ಮಾಹೆಯಲ್ಲೇ ಅತಿ ಹೆಚ್ಚು ಅಂದರೆ, 88 ದಾಳಿ ನಡೆದಿವೆ ಎಂದು ಹೇಳಿದರು.
117 ನಾಪತ್ತೆ ಪ್ರಕರಣ: ಜನವರಿಯಲ್ಲಿ 36, ಫೆಬ್ರವರಿಯಲ್ಲಿ 45, ಮಾರ್ಚ್‌ನಲ್ಲಿ 36 ಸಹಿತ 117 ನಾಪತ್ತೆ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 59 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಉಳಿದವರ ಕಾಣೆ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಮಾಹಿತಿ ನೀಡುವಂತೆ ಸಾರ್ವಜನಿಕರಿ ಪ್ರಚುರಪಡಸಿಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಕುಲದೀಪ್ ಜೈನ್, ಡಿವೈಎಸ್ಪಿ ರಾಮಲಿಂಗಪ್ಪ ಹಾಜರಿದ್ದರು.