46 ದಿನ ಕಳೆದರೂ ಕಾರ್ಮಿಕರ ಸ್ಥಿತಿ ಕೇಳೋರಿಲ್ಲ
ದೊಡ್ಡಬಳ್ಳಾಪುರ: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಬಾಂಬೆ ರೇಯಾನ್ ಫ್ಯಾಷನ್ ಲಿಮಿಟೆಡ್ನ ಪ್ರಾಸೆಸಿಂಗ್ ಘಟಕವನ್ನು ಲಾಕ್ಔಟ್ ಮಾಡಿರುವುದರ ವಿರುದ್ಧ ಕಾರ್ಮಿಕರು ನಡೆಸುತ್ತಿರುವ ಹೋರಾಟ 46ನೇ ದಿನಕ್ಕೆ ಕಾಲಿಟ್ಟಿದೆ.
ಕಾರ್ಖಾನೆಯ ಮುಂದೆ 500ಕ್ಕೂ ಹೆಚ್ಚು ಕಾರ್ಮಿಕರು ಹಗಲು-ಇರುಳು ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಹೋರಾಟ ಕಾರ್ಮಿಕರ ದಿನದಂದೂ ಮುಂದುವರೆದಿತ್ತು. ಈ ಮಧ್ಯೆ ಕಂಪನಿ ಕಾರ್ಮಿಕರ ಬೇಡಿಕೆಗಳಿಗೆ ಪೂರಕವಾಗಿ ಪ್ರತಿಕ್ರಿಯಿಸಿಲ್ಲ. ಕೆಲ ಬಾರಿ ಮಾತುಕತೆ ನಡೆದಿದೆಯಾದರೂ ಬೇಡಿಕೆಯ ವಿಚಾರದಲ್ಲಿ ಕಾರ್ಮಿಕರ ಹಿತಾಸಕ್ತಿಗಳನ್ನು ಕಂಪನಿ ಪರಿಗಣಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕಾರ್ಮಿಕರ ಒತ್ತಾಯಗಳಿಗೆ ಕಿವಿಗೊಡದ ಆಡಳಿತಶಾಹಿ ಧೋರಣೆ ಖಂಡನೀಯ. ಕನಿಷ್ಠ ಮಾನವೀಯ ಪ್ರಜ್ಞೆ ಮೆರೆಯದ ಅಧಿಕಾರಶಾಹಿ ಬಡಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಕಾರ್ಖಾನೆ ಮುಚ್ಚುವ ವಿಚಾರದಲ್ಲಿ ಕಾರ್ಮಿಕರನ್ನು ಗಣನೆಗೆ ತೆಗೆದುಕೊಂಡಿಲ್ಲ. ಕಾರ್ಮಿಕ ಕಾನೂನುಗಳನ್ನು ಕಂಪನಿ ಸ್ಪಷ್ಟವಾಗಿ ಉಲ್ಲಂಘಿಸಿದೆ. ಯಾವುದೇ ಮುನ್ಸೂಚನೆಯನ್ನೂ ನೀಡದೆ ದಿಢೀರನೇ ಕಾರ್ಖಾನೆ ಮುಚ್ಚಿರುವುದರಿಂದ ಸುಮಾರು 520 ಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ. ಕಾರ್ಮಿಕರ ಮೇಲೆ ಆಡಳಿತ ಮಂಡಲಿ ಅನಗತ್ಯವಾಗಿ ಕ್ಷುಲ್ಲಕ ಆರೋಪಗಳನ್ನು ಹೊರಿಸುತ್ತಿದೆ. ಇದಾವುದೂ ವಾಸ್ತವ ಅಲ್ಲ. ಅಧಿಕಾರಿಗಳ ಮತ್ತು ಆಡಳಿತ ವರ್ಗದ ಧೋರಣೆ ಸರಿಯಲ್ಲ ಎಂದರು.
ದೇಗುಲಗಳ ನೆಮ್ಮದಿ ತಾಣ: ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ
ಆನೇಕಲ್ಲು: ಭಾರತ ದೇಶವು ದೇವರ ಆರಾಧನೆ ಮತ್ತು ಯೋಗ ಪುರುಷರ ಧ್ಯಾನ ಸಾಧನೆಯಿಂದಾಗಿ ವಿಶ್ವದಲ್ಲೇ ವಿಶಿಷ್ಟ ಸ್ಥಾನ ಪಡೆದಿದೆ. ದೇಗುಲ ನಿರ್ಮಾಣ ಪೂಜೆ ಪುನಸ್ಕಾರ ನಮ್ಮ ಸಂಸ್ಕೃತಿಯ ಹೆಗ್ಗುರುತಾಗಿದೆ ಎಂದು ರಾಜಾಪುರ ಮಠದ ರಾಜೇಶ್ವರ ಶಿವಾಚಾಯ ಸ್ವಾಮೀಜಿ ತಿಳಿಸಿದ್ದಾರೆ. ಅವರು ತಾಲೂಕಿನ ಹೆಗ್ಗೊಂಡಹಳ್ಳಿಯ ಬಸವೇಶ್ವರಸ್ವಾಮಿ ದೇಗುಲ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿ ಸಂಸ್ಕಾರ ಸಂಸ್ಕೃತಿಯು ದೇಶ ವಾಸಿಗಳಲ್ಲಿ ಒಗ್ಗಟ್ಟು ಮತ್ತು ಸಹೋದರತಾ ಭಾವನೆಯನ್ನು ಸೃಷ್ಟಿಸಿ ಅನ್ಯೋನ್ಯ ಬಾಳುವೆಗೆ ದಾರಿ ಮಾಡುತ್ತದೆ.
ದೇವರ ಆರಾಧನೆಯಿಂದ ಮಾತ್ರ ಐಕ್ಯತೆ ಸಾಧಿಸಲು ಸಾಧ್ಯ ಎಂಬುದನ್ನು ಸಾರಿ ಹೇಳಲಾಗಿದೆ. ಗ್ರಾಮಗಳಲ್ಲಿ ಜನರು ಒಂದೆಡೆ ಕಲೆತು ಗ್ರಾಮದ ಅಭಿವೃದ್ಧಿಗಾಗಿ ಶಿಕ್ಷಣ, ಆರೋಗ್ಯ ಹಾಗೂ ಸಾರಿಗೆ ಕ್ಷೇತ್ರದಲ್ಲಿನ ಸವಲತ್ತುಗಳನ್ನು ಪಡೆದುಕೊಂಡು ಸಹ ಬಾಳ್ವೆ ನಡೆಸಬೇಕೆಂದು ತಿಳಿಸಿದರು. ದೇಗುಲ ಸಮಿತಿಯ ಶ್ರೀನಾಥರೆಡ್ಡಿ ಮಾತನಾಡಿದರು.
ಪತ್ನಿ ಆತ್ಮಹತ್ಯೆ: ಪತಿ ಬಂಧನ
ಹೊಸಕೋಟೆ: ಜೀವನದಲ್ಲಿ ಜಿಗುಪ್ಸೆಗೊಂಡು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ವಿನಾಯಕನಗರದ ವಾಸಿ ರಾಜರಾಜೇಶ್ವರಿ (23) ಮೃತಳು. ಮೂಲತಃ ವಿಜಯಪುರ ಬಳಿಯ ಎ. ರಂಗನಾಥಪುರದ ವಾಸಿ, ಪ್ರಸ್ತುತ ಬೆಂಗಳೂರಿನ ಸಿಟಿ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿದ್ದ ರಾಜೇಶ ಬಂಧಿತ ವ್ಯಕ್ತಿ. 2 ವರ್ಷದ ಹಿಂದೆ ಇಬ್ಬರ ವಿವಾಹ ನಡೆದಿದ್ದು ಮಕ್ಕಳಾಗಿರಲಿಲ್ಲ. ಕ್ಷುಲ್ಲಕ ಕಾರಣಗಳಿಗೆ ಮನಸ್ತಾಪ ಉಂಟಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತು ಮನೆಯಲ್ಲಿ ನೇಣುಹಾಕಿಕೊಂಡು ರಾಜರಾಜೇಶ್ವರಿ ಮೃತಪಟ್ಟಿರುತ್ತಾಳೆ. ಚಿಕ್ಕತಿಗಳರಪೇಟೆಯ ಮೃತಳ ಸೋದರಮಾವ ರಮೇಶ ನೀಡಿರುವ ದೂರಿನನ್ವಯ ಪೊಲೀಸರು ರಾಜೇಶನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಆನೇಕಲ್ಲಿನಲ್ಲಿ ಶಂಕರ ಜಯಂತಿ ಇಂದು
ಆನೇಕಲ್ಲು: ಆನೇಕಲ್ ಪಟ್ಟಣದ ಪುರಾತನ ಶ್ರೀ ಶಂಕರ ಮಠದಲ್ಲಿ ಶಂಕರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ರಂಗನಾಥಭಟ್, ಡಾ. ಆನಂದ್ ತಿಳಿಸಿದ್ದಾರೆ. ಅಮೃತ ಶಿಲೆಯ ಶ್ರೀ ಶಂಕರಾಚಾರ್ಯರು ಹಾಗೂ ದೇವಿ ಶಾರದಾ ದೇವಿಯವರ ವಿಗ್ರಹ ಬಲು ಅಪರೂಪದ ಶಿಲೆಯಾಗಿದೆ. ಮೂಲ ದೇವರು ಹಾಗೂ ಆವರಣವನ್ನು ಭಕ್ತಾದಿಗಳ ಸಹಕಾರದಿಂದ ನವೀಕರಿಸಲಾಗಿದೆ. ಪುಷ್ಪಾಲಂಕಾರ, ಉತ್ಸವ ಮೂರ್ತಿಗೆ ಅಲಂಕಾರ, ಪುರ ಮೆರವಣಿಗೆ, ಉಪನ್ಯಾಸ ಮತ್ತು ಅರವಂಟಿಕೆ ಸೇವೆಯನ್ನು ಸಮಿತಿಯ ವತಿಯಿಂದ ನೆರವೇರಿಸಲಾಗುವುದು ಎಂದು ಸಮಿತಿಯ ರವಿ ಶಾಸ್ತ್ರಿ ತಿಳಿಸಿದ್ದಾರೆ.
ಜೆಡಿಎಸ್ನಿಂದ ಹಲ್ಲೆ: ಮಂಜು ಆರೋಪ
ಮಾಗಡಿ: ಹುಲೀಕಲ್ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು ಅಮಾಯಕ ಕಾಂಗ್ರೆಸ್ ಕಾರ್ಯಕರ್ತರ ಮನೆಗಳಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಎ.ಮಂಜು ಆರೋಪಿಸಿದರು. ಅವರು ಮಾಗಡಿ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಶಾಸಕರ ಕುಮ್ಮಕ್ಕಿನಿಂದ ನಡೆದಿದೆ ಎಂದು ಆರೋಪಿಸಿದರು. ಹಲ್ಲೆ ನಡೆಸಿದವರ ವಿರುದ್ಧ ಕುದೂರು ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಗಂಭೀರವಾಗಿ ಗಾಯಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರ ಮೇಲೂ ಪ್ರಕರಣ ದಾಖಲಿಸಿರುವುದನ್ನು ತೀವ್ರವಾಗಿ ಖಂಡಿಸಿದ ಎ.ಮಂಜು ಅವರು ಕಳೆದ ತಿಂಗಳು ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರಿಗೆ ಹುಲೀಕಲ್ ಗ್ರಾಮದಲ್ಲಿ ಹೆಚ್ಚಿನ ಮತಗಳು ಬಂದಿರಬಹುದು ಎಂಬ ಅನುಮಾನದಿಂದ ಶಾಸಕರು ಕಾರ್ಯಕರ್ತರಿಗೆ ಹಿಂಬಾಲಕರಿಂದ ಗ್ರಾ.ಪಂ. ಕಾರ್ಯದರ್ಶಿ ವೆಂಕಟೇಶ್, ರಾಜಣ್ಣ, ಶಶಿ ಎಂಬುವರ ಮೂಲಕ ಸಂಚು ರೂಪಿಸಿ ಹಲ್ಲೆ ನಡೆಸಲು ಕಾರಣಕರ್ತರಾಗಿದ್ದಾರೆ ಎಂದು ದೂರಿದರು.
ಬನ್ನೇರುಘಟ್ಟಕ್ಕೆ ಮಂಗಳವಾರ ರಜೆ ಇಲ್ಲ
ಆನೇಕಲ್ಲು: ಬೇಸಿಗೆ ರಜೆ ಪ್ರಯುಕ್ತ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೆಚ್ಚು ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಮಂಗಳವಾರದ ರಜೆಯನ್ನು ರದ್ದು ಮಾಡಲಾಗಿದ್ದು ಮೇ 6, 13, 20 ಮತ್ತು 27ರಂದು ಪಾರ್ಕ್ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಸಿಸಿಎಫ್ ರಂಗಸ್ವಾಮಿ ತಿಳಿಸಿದ್ದಾರೆ. ಪಾರ್ಕ್ಗೆ ಹೊಸ ಅತಿಥಿಗಳಾಗಿ ನೂತನ ಪ್ರಾಣಿಗಳು ಬರುವ ಸಂಭವವಿದ್ದು ಜನತೆಗೆ ಅಚ್ಚರಿ ಕಾದಿದೆ ಎಂದರು.
ರಜನಿಕಾಂತ್ ಚಿತ್ರದ ಚಿತ್ರೀಕರಣಕ್ಕೆ ರಾಜ್ಯದಲ್ಲಿ ಅವಕಾಶ: ಆಕ್ರೋಶ, ಪ್ರತಿಭಟನೆ
ರಾಮನಗರ: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕನ್ನಡಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ನಟ ರಜನಿಕಾಂತ್ ಚಿತ್ರದ ಚಿತ್ರೀಕರಣಕ್ಕೆ ರಾಜ್ಯದಲ್ಲಿ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ನಗರದ ಐಜೂರು ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ನಟ ರಜನಿಕಾಂತ್ ವಿರುದ್ಧ ಘೋಷಣೆಗಳನ್ನು ಕೂಗಿ, ಅವರ ಪ್ರತಿಕೃತಿ ದಹಿಸಿದರು. ಕನ್ನಡ ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟಿರುವ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. 2008ರಲ್ಲಿ ಕಾವೇರಿ ನೀರಿಗಾಗಿ ಉಭಯ ರಾಜ್ಯಗಳಲ್ಲಿ ಹೋರಾಟಗಳು ನಡೆಯುತ್ತಿದ್ದಾಗ ನಟ ರಜನಿಕಾಂತ್ ಕನ್ನಡಿಗರು ಕಾವೇರಿ ನೀರು ಕೊಡದಿದ್ದರೆ ಒದ್ದು ಕಿತ್ತುಕೊಳ್ಳಿ ಎಂದು ತಮಿಳರನ್ನು ಪ್ರಚೋದಿಸಿದ್ದರು. ನಂತರ ನಡೆದ ಪ್ರತಿಭಟನೆಗಳ ವೇಳೆಯೂ ಕರ್ನಾಟಕ ವಿರೋಧಿ ಧೋರಣೆ ತಳೆದಿದ್ದರು ಎಂದು ಟೀಕಿಸಿದರು. ಕನ್ನಡದ ನೆಲದಲ್ಲಿಯೇ ಹುಟ್ಟಿ, ಬೆಳೆದು ಕನ್ನಡಿಗರ ವಿರುದ್ಧವೇ ಅವಹೇಳನಕಾರಿಯಾಗಿ ಮಾತನಾಡುವ ವ್ಯಕ್ತಿಗೆ ರಾಜ್ಯದಲ್ಲಿ ಚಿತ್ರೀಕರಣಕ್ಕೆ ಸರ್ಕಾರ ಅವಕಾಶ ನೀಡಕೂಡದು. ಒಂದು ವೇಳೆ ಚಿತ್ರೀಕರಣ ಮುಂದುವರಿಸಿದರೆ ಸ್ಥಳಕ್ಕೆ ಹೋಗಿ ತಡೆ ಒಡ್ಡಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಯೋಗೇಶ್ಗೌಡ, ಪದಾಧಿಕಾರಿಗಳಾದ ರಂಜಿತ್ ಗೌಡ, ನಿಂಗೇಗೌಡ, ಹುಸೇನ್, ಮಂಗಳಮ್ಮ, ನಾಗರತ್ನಮ್ಮ ಮತ್ತಿತರರು ಭಾಗವಹಿಸಿದ್ದರು.