ಏಜೆಂಟರ ದರ್ಬಾರ್
ಕ.ಪ್ರ.ವಾರ್ತೆ , ರಾಮನಗರ , ಮೇ 3
ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಏಜೆಂಟರ ದರ್ಬಾರ್ ಮಿತಿ ಮೀರಿದೆ. ಅವರಿಗೆ ಮಣೆ ಹಾಕಿರುವ ಅಧಿಕಾರಿಗಳು ಕಚೇರಿಯಲ್ಲಿ ಕೂರಲು ಏಜೆಂಟರಿಗೆ ಆಸನ ಮತ್ತು ಮೇಜು ಒದಗಿಸಿ, ಕಡತಗಳ ವಿಲೇವಾರಿ ಅಧಿಕಾರವನ್ನೂ ಅವರಿಗೇ ಒಪ್ಪಿಸಿರುವುದು ಬೆಳಕಿಗೆ ಬಂದಿದೆ.
ಸಾಕಷ್ಟು ಸಿಬ್ಬಂದಿ ಇದ್ದಾಗ್ಯೂ ಏಜೆಂಟರಿಗೆ ಮಣೆ, ಮನ್ನಣೆ ನೀಡಿರುವ ಹಿಂದೆ ವಸೂಲಿಬಾಜಿಯ ವಿನಃ ಬೇರೆ ಯಾವುದೇ ಉದ್ದೇಶವೂ ಇರದು. ಈ ದಂಧೆಯ ಕುರಿತು ಲಂಚದ ಹಾವಳಿಗೆ ತುತ್ತಾದವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದರು.
ಕಚೇರಿ ಬಳಿ ಕ್ಯಾಮೆರಾದೊಂದಿಗೆ ತೆರಳಿದ ಸುದ್ದಿಗಾರರನ್ನು ಕಂಡೊಡನೆ ನೌಕರರ ಸೋಗಿನಲ್ಲಿದ್ದ ಏಜೆಂಟರು ಪರಾರಿಯಾದರು. ಈ ವಿಷಯವನ್ನು ಗಮನಕ್ಕೆ ತಂದರೆ, ನನಗೇನೂ ಗೊತ್ತಿಲ್ಲ ಎನ್ನುವುದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ.ಡಿ.ಮಹಮದ್ ಅಬೀಬುಲ್ಲಾ ಖಾನ್ ಪ್ರತಿಕ್ರಿಯಿಸುತ್ತಾರೆ.
ಕಚೇರಿಯಲ್ಲಿ ಲಂಚಾವತಾರ: ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಹೆಜ್ಜೆ ಹೆಜ್ಜೆಗೂ ಲಂಚಾವತಾರ ತಾಂಡವಾಡುತ್ತಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಿಂತಲೂ ಏಜೆಂಟರ ಕರಾಮತ್ತು ಬಲು ಜೋರಾಗಿದೆ. ಲಂಚ ನೀಡದಿದ್ದರೆ ಯಾವ ಕಡತವೂ ಕದಲದು ಎನ್ನುವ ಆರೋಪ ವ್ಯಾಪಕವಾಗಿದೆ. ಚಾಲನಾ ಕಲಿಕಾ ಪರವಾನಗಿ, ಚಾಲನಾ ಪರವಾನಗಿ, ವಾಹನ ನೊಂದಣಿ, ಮಾಲೀಕತ್ವ ಬದಲಾವಣೆ ಮತ್ತು ವಾಹನ ಸಾಮರ್ಥ್ಯ ದೃಢೀಕರಣ, ತೆರಿಗೆ ಪಾವತಿ ಸೇರಿದಂತೆ ಪ್ರತಿಯೊಂದು ಕೆಲಸಕ್ಕೂ ಲಂಚದ ಮೊತ್ತವನ್ನು ಏಜೆಂಟರೇ ನಿಗದಿಪಡಿಸಿಕೊಂಡು, ವಸೂಲಿಬಾಜಿಗೆ ಇಳಿದಿದ್ದಾರೆ.
ಕಾರ್ಡ್ ತಲುಪುವುದಿಲ್ಲ: ವಾಹನ ಮಾಲೀಕತ್ವ ಮತ್ತು ಚಾಲನಾ ಪರವಾನಗಿಯ ಸ್ಮಾರ್ಟ್ ಕಾರ್ಡ್ ನೀಡುವಿಕೆಯಲ್ಲೂ ಲಂಚಗುಳಿತನ ಮನೆ ಮಾಡಿದೆ. ಸ್ಮಾರ್ಟ್ ಕಾರ್ಡ್ಗಾಗಿ ಹಣ ಪಾವತಿಸಿದ ಸಾರ್ವಜನಿಕರಿಗೆ ಅಂಚೆ ಮೂಲಕ ಕಳುಹಿಸುವ ವ್ಯವಸ್ಥೆಯನ್ನೇನೋ ಜಾರಿಗೆ ತರಲಾಗಿದೆ. ಆದರೆ, ಲಂಚ ಕೊಡದಿದ್ದರೆ ಅದು ಟಪಾಲು ವಿಭಾಗದಿಂದ ಆಚೆ ಹೋಗುವುದಿಲ್ಲ.
ಕಾರ್ಡ್ ಬಂದಿಲ್ಲವೆಂದು ರಶೀದಿ ಹಿಡಿದು ಬಂದ ಸಾರ್ವಜನಿಕರಿಗೆ ಸಿಬ್ಬಂದಿಗಿಂತ ಮೊದಲೇ ಏಜೆಂಟರು ದಬಾಯಿಸಿ ಕಳುಹಿಸಲು ಮುಂದಾಗುತ್ತಾರೆ.
ಈಗಾಗಲೇ ಕಾರ್ಡ್ ಕಳುಹಿಸಿದ್ದು, ಅಂಚೆ ಇಲಾಖೆಯವರು ತಲುಪಿಸಿಲ್ಲ ಎಂದು ಅವರ ಮೇಲೆ ಗೂಬೆ ಕೂರಿಸುತ್ತಾರೆ. ಡೂಪ್ಲಿಕೇಟ್ ಕಾರ್ಡ್ ಕೊಡುತ್ತೇವೆಂದು ಲಂಚ ಪಡೆದು, ಅಸಲಿ ಕಾರ್ಡ್ ಕೊಟ್ಟು ಸಾಗ ಹಾಕುವುದು ಮಾಮೂಲಾಗಿದೆ.
ಸಿಬ್ಬಂದಿ ಕೊರತೆ ನೆಪ: ರಾಮನಗರದ ಸಾರಿಗೆ ಕಚೇರಿಯಲ್ಲಿ ಅಗತ್ಯದಷ್ಟು ಸಿಬ್ಬಂದಿ ಇಲ್ಲ. ಹೊರಗುತ್ತಿಗೆ ಸಿಬ್ಬಂದಿ ನೇಮಿಸಿಕೊಂಡು ಕೆಲಸ ನಿರ್ವಹಿಸಲು ಅವಕಾಶವಿದೆ. ಆದರೆ, ಅಧಿಕಾರಿಗಳು ಏಜೆಂಟರನ್ನೇ ಕೆಲಸಕ್ಕೆ ಅನಧಿಕೃತವಾಗಿ ನೇಮಿಸಿಕೊಂಡು, ಕಡತಗಳನ್ನು ಒಪ್ಪಿಸಿರುವುದು ಯಾವ ನ್ಯಾಯ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಏಜೆಂಟರು ಕೆಲಸ ಮಾಡುತ್ತಿರುವುದು ಗೊತ್ತಿಲ್ಲ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಳಿದರೆ, ಸಿಬ್ಬಂದಿ ಕೊರತೆ ನೀಗಿಸಿಕೊಳ್ಳಲು ಏಜೆಂಟರುಗಳನ್ನೇ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಅಧೀನ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. ಅಧಿಕಾರಿಗಳ ಮಟ್ಟದಲ್ಲೇ ಇರುವ ಈ ದ್ವಂದ್ವ ಮಾತುಗಳು ಸಹಜವಾಗಿಯೇ ಅನುಮಾನಕ್ಕೆಡೆ ಮಾಡಿವೆ.
ಭಾರಿ ಭ್ರಷ್ಟಾಚಾರ, ಲಂಚಾವತಾರ
ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಣ್ಣಪುಟ್ಟ ದಾಖಲೆಯಿಂದಿಡಿದು ಎಲ್ಲ ವ್ಯವಹಾರಗಳೂ ಸಿಬ್ಬಂದಿ ಸೋಗಿನ ಏಜೆಂಟರ ಮೂಲಕವೇ ನಡೆಯುತ್ತಿವೆ. ಕಲಿಕಾ ಇಲ್ಲವೇ ಚಾಲನಾ ಪರವಾನಗಿಗೆ ಏಜೆಂಟರು, ಚಾಲನಾ ಕಲಿಕೆ ಶಾಲೆಗಳ ಮೂಲಕ ಹೋಗದಿದ್ದರೆ ಅಧಿಕಾರಿಗಳು ಅನುತ್ತೀರ್ಣಗೊಳಿಸುತ್ತಾರೆ ಎಂಬ ಆರೋಪವಿದೆ. ಅನುತ್ತೀರ್ಣರಾದವರು ವಿಧಿಯಿಲ್ಲದೆ ಏಜೆಂಟರನ್ನೇ ಆಶ್ರಯಿಸುತ್ತಾರೆ. ಹೀಗೆ ಪ್ರತಿ ಹಂತದಲ್ಲೂ ಹಣ ಕೀಳುವ ದಲ್ಲಾಳಿಗಳು ಪಾಲು ನೀಡದೆ ಇದ್ದರೆ ಅವರನ್ನು ಅಧಿಕಾರಿಗಳು ಇಷ್ಟು ಮಟ್ಟಕ್ಕೆ ಬಿಟ್ಟುಕೊಳ್ಳಲು ಸಾಧ್ಯವಾದರೂ ಹೇಗೆ ನಿತ್ಯವೂ ಲಂಚದ ಹಂಚಿಕೆ ಸುಸೂತ್ರವಾಗಿ ನಡೆಯುತ್ತಿರುವುದೇ ಕಚೇರಿ ವಾತಾವರಣ ಅಷ್ಟೊಂದು ಹದಗೆಡಲು ಕಾರಣ ಎನ್ನುವ ಮಾತು ಸತ್ಯ.
-ವಿಶೇಷ ವರದಿ