ಗಾಯಗೊಂಡಿದ್ದ ಗ್ರಾಮಸಹಾಯಕ ಸಾವು
ಸೂಲಿಬೆಲೆ: ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಮಾರ್ಚಂಡಹಳ್ಳಿಯಲ್ಲಿ ಏ.24 ರಂದು ಫಿಲ್ಟರ್ ಮರಳು ತಯಾರಿಕೆ ಅಡ್ಡೆಗಳ ಮೇಲಿನ ದಾಳಿಯ ವೇಳೆ ಗಾಯಗೊಂಡಿದ್ದ ನಂದಗುಡಿ ಹೋಬಳಿಯ ಗ್ರಾಮ ಸಹಾಯಕ ಡಿ. ಶೆಟ್ಟಿಹಳ್ಳಿ ಗಂಗಾಧರ್ (25) ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಇಲ್ಲದಷ್ಟು ಅಕ್ರಮ ಫಿಲ್ಟರ್ ಮರಳು ತಯಾರಿಕೆ ಕೇಂದ್ರಗಳು ನಂದಗುಡಿ ಹೋಬಳಿಯಲ್ಲಿ ಇವೆ. ಎಷ್ಟೇ ದಾಳಿಗಳು ನಡೆದರೂ ಪೊಲೀಸರ ಕಣ್ತಪ್ಪಿಸಿ ದಂಧೆಯನ್ನು ಮಾಡುವ ವ್ಯಕ್ತಿಗಳು ರಾಜಕಾರಣಿಗಳ ಕೃಪಾ ಕಟಾಕ್ಷದಿಂದ ಬಲಿಷ್ಠವಾಗಿ ಬೆಳೆದು ನಿಂತಿದ್ದಾರೆ. ಏ.24 ರಂದು ಮೂರು ಹೋಬಳಿಯ ಕಂದಾಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳ ಜೊತೆಗೂಡಿ ಪೊಲೀಸರು ಫಿಲ್ಟರ್ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿ ವಾಹನಗಳನ್ನು ಜಪ್ತಿ ಮಾಡಿದ್ದರು. ಈ ವೇಳೆ ಮರಳು ತಯಾರಿಕೆಗೆ ಬಳಿಸುತ್ತಿದ್ದ ಸಾಮಗ್ರಿಗಳನ್ನು ಒಂದಡೆ ಹಾಕಿ ಬೆಂಕಿ ಹಚ್ಚಿ ಸುಟ್ಟು ನಾಶ ಮಾಡುವಾಗ ಡಿಸೇಲ್ ಇಂಜಿನ್ ಸಿಡಿದು ಜಡಿಗೇನಹಳ್ಳಿ ಹೋಬಳಿ ಉಪತಹಸೀಲ್ದಾರ್ ಕೃಷ್ಣಪ್ಪ ಹಾಗೂ ನಂಗದುಡಿ ಗ್ರಾಮಸಹಾಯಕ ಗಂಗಾಧರ್ ಗಾಯಗೊಂಡಿದ್ದರು. ಗಂಭೀರ ಗಾಯಗೊಂಡ ಗಂಗಾಧರ ಅವರನ್ನು ಬೆಂಗಳೂರಿನ ವಿಕ್ಟೋರಿಯ ನಂತರ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರ.
ಅಪರ ಜಿಲ್ಲಾಧಿಕಾರಿ ಉಪಸ್ಥಿತಿ: ಗಂಗಾಧರ್ ಅಂತಿಮ ಸಂಸ್ಕಾರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಾದ ವಾಸಂತಿ, ಹೊಸಕೋಟೆ ತಹಸೀಲ್ದಾರ್ ಕುಮಾರಸ್ವಾಮಿ ಸೇರಿದಂತೆ ನಾಡ ಕಚೇರಿಯ ಉಪತಹಸೀಲ್ದಾರ್‌ಗಳು, ಗ್ರಾಮ ಲೆಕ್ಕಿಗರು ಭಾಗವಹಿಸಿದ್ದರು.
ಮುನ್ನೆಚ್ಚರಿಕೆ ವಹಿಸುವಲ್ಲಿ ಎಡವಿದರೇ: ಫಿಲ್ಟರ್ ಮರಳು ತಯಾರಿಕೆ ಅಡ್ಡೆಗಳ ಮೇಲಿನ ದಾಳಿ ವೇಳೆಯಲ್ಲಿ ಸಿಕ್ಕ ಸಾಮಗ್ರಿಗಳನ್ನು ನಾಶ ಮಾಡುವಾಗ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸದೇ ಇದಿದ್ದು ಅಮಾಯಕನ ಸಾವಿಗೆ ಕಾರಣವಾಯಿತು ಎಂದು ಶೆಟ್ಟಿಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಭೂಮಿಯಿಂದ ಮಣ್ಣನ್ನು ಮೇಲೆತ್ತಿ ಅದನ್ನು ಶೋಧಿಸಲು ಫಿಲ್ಟರ್ ಮರಳು ತಯಾರಿಕೆದಾರರು ಡೀಸೆಲ್ ಹಾಗೂ ಪೆಟ್ರೋಲ್ ಇಂಜಿನ್‌ಗಳನ್ನು ಬಳಿಸುತ್ತಾರೆ.ಇತರೇ ಸಾಮಗ್ರಿಗಳ ಜೊತೆ ಸುಡುವಾಗ ಇಂಜಿನ್ ಸ್ಫೋಟವಾಗುತ್ತೇ ಎಂಬ ಸಾಮಾನ್ಯ ಜ್ಞಾನ ಅಧಿಕಾರಿಗಳ ತಲೆಗೆ ಹೊಕ್ಕಿದ್ದರೆ ಈ ದುರಂತ ನಡೆಯುತ್ತಿರಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು.