ಬೆಂಗಳೂರು ಗ್ರಾಮಾಂತರದಲ್ಲಿ ಬೆಟ್ಟಿಂಗ್ ಭರಾಟೆ ಇಲ್ಲ
ರಾಮನಗರ: ಬೆಂಗಳೂರು ಗ್ರಾಮಾಂತರದಲ್ಲಿ ಬೆಟ್ಟಿಂಗ್ ಭರಾಟೆ ಕಾಣುತ್ತಿಲ್ಲ. ಅಲ್ಲಲ್ಲಿ ವಿಧಾನಸಭಾ ಕ್ಷೇತ್ರವಾರು ಮುನ್ನಡೆ, ಗೆಲವಿನ ಅಂತರದ ಮೇಲಷ್ಟೇ ಅಲ್ಪ ಮಟ್ಟಿನ ಬಾಜಿ ನಡೆಯುತ್ತಿದೆ. ಸ್ಥಳೀಯ ಬಾಜಿದಾರರು ನೆರೆಯ ಚಿಕ್ಕಬಳ್ಳಾಪುರ, ಮಂಡ್ಯ ಕ್ಷೇತ್ರಗಳ ಮೇಲೆ ಬೆಟ್ಟಿಂಗ್ಗೆ ಇಳಿದಿದ್ದಾರೆ.
ತ್ರಿಕೋನ ಸ್ಪರ್ಧೆ ಎದುರಾಗಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸೋಲು-ಗೆಲವಿನ ಮೇಲೆ ಬಾಜಿ ಕಟ್ಟುವವರೇ ಕಾಣುತ್ತಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ 1 ಲಕ್ಷಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ರು.1ಕ್ಕೆ 1ರಂತೆ ಬಾಜಿ ನಡೆಯುತ್ತಿದೆ.
ಕ್ಷೇತ್ರ ಮುನ್ನಡೆಗೂ ಬಾಜಿ: ಕಳೆದ ಉಪ ಚುನಾವಣೆಯಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ಅವರಿಗೆ 52 ಸಾವಿರ ಮುನ್ನಡೆ ಲಭಿಸಿತ್ತು. ಅದೀಗ 60 ಸಾವಿರ ದಾಟಲಿದೆ ಎಂದು ಕಾಂಗ್ರೆಸ್ ಪರ ಪಂಟರ್ಗಳು ರು.2ಕ್ಕೆ 1ರಂತೆ ಬಾಜಿ ಕರೆಯುತ್ತಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ಮುನ್ನಡೆ ವಿಷಯವಾಗಿ ಮಾಗಡಿಯಲ್ಲೇ ಬೆಟ್ಟಿಂಗ್ ಭರಾಟೆ ಜೋರು. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ರು.1ಕ್ಕೆ 1ರಂತೆ ಈಗಾಗಲೇ ಸುಮಾರು ರು.40 ಲಕ್ಷಕ್ಕೂ ಹೆಚ್ಚು ಮೊತ್ತದ ಹಣವನ್ನು ಪಣಕ್ಕಿಡಲಾಗಿದೆ. ಇದನ್ನು ಹೊರತುಪಡಿಸಿ ಉಳಿದೆಲ್ಲೂ ಬೆಟ್ಟಿಂಗ್ ಅಷ್ಟಾಗಿಲ್ಲ.
ರಾಮನಗರ, ಚನ್ನಪಟ್ಟಣ, ಕುಣಿಗಲ್ ಕ್ಷೇತ್ರಗಳ ಮುನ್ನಡೆ ವಿಷಯದಲ್ಲಿ ಬೆಟ್ಟಿಂಗ್ ಕೇಳುವವರೇ ಇಲ್ಲದಂತಾಗಿದೆ. ಬೆಂಗಳೂರು ನಗರ ಜಿಲ್ಲೆಯ 3 ಕ್ಷೇತ್ರಗಳ ಉದ್ದ, ಆಳ ತಿಳಿದವರು ಬೆಟ್ಟಿಂಗ್ ಕಟ್ಟುವ ಗೋಜಿಗೆ ಹೋಗುತ್ತಿಲ್ಲ. ಅರಿಯದವರಷ್ಟೇ ಹಳ್ಳಕ್ಕೆ ಬೀಳುತ್ತಾರೆ.
ನೆರೆ ಕ್ಷೇತ್ರಗಳಿಗೆ ಬಾಜಿ: ಎಚ್.ಡಿ.ಕುಮಾರಸ್ವಾಮಿ ಅವರ ಸ್ಪರ್ಧೆಯ ಕಾರಣಕ್ಕೆ ರಾಮನಗರದವರ ಚಿತ್ತ ಸಹಜವಾಗಿಯೇ ನೆರೆಯ ಚಿಕ್ಕಬಳ್ಳಾಪುರದತ್ತ ನೆಟ್ಟಿದೆ. ಇದರೊಟ್ಟಿಗೆ ಮತ್ತೊಂದು ನೆರೆಯ ಕ್ಷೇತ್ರ ಮಂಡ್ಯದ ಫಲಿತಾಂಶದ ಮೇಲೆ ಇಲ್ಲಿನ ಬಾಜಿದಾರರು ಬ್ಲೈಂಡ್ ಆಗಿ ಬಾಜಿ ಹೂಡುತ್ತಿದ್ದಾರೆ.
ಚಿಕ್ಕಬಳ್ಳಾಪುರದ ಫಲಿತಾಂಶಕ್ಕೆ ರು.1ಕ್ಕೆ 1ರಂತೆ ಬಾಜಿ ನಡೆಯುತ್ತಿದ್ದು, ಇಲ್ಲಿನ ಬಾಜಿದಾರರ ಹಾಟ್ ಫೇವರಿಟ್ ಕುಮಾರಸ್ವಾಮಿ ಆಗಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಪರವಾಗಿ ಪಂಟರ್ಗಳು ರು.1ಕ್ಕೆ 75 ಪೈಸೆಯಂತೆ ಬಾಜಿ ಕರೆಯುತ್ತಿದ್ದಾರೆ.
ಕಳೆದ ಬಾರಿ ಮಿಶ್ರ ಫಲ: ಕಳೆದ ಉಪ ಚುನಾವಣೆಯಲ್ಲಿ ಈ ಭಾಗದ ಬಾಜಿದಾರರು ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್ ಪರ ಮತ್ತು ನೆರೆಯ ಮಂಡ್ಯದಲ್ಲಿ ಪುಟ್ಟರಾಜು ಪರ ಬೆಟ್ಟಿಂಗ್ ಆಡಿದ್ದರು. ಎರಡೂ ಕಡೆ ಸೋಡಿ ಕೊಟ್ಟಿದ್ದು, ಮಿಶ್ರ ಫಲಿತಾಂಶ ಕಂಡಿದ್ದರು.
ಈ ಭಾಗದಲ್ಲಿ ಚುನಾವಣೆ ಬಂತೆಂದರೆ ಸಾಕು. ಭಾರಿ ಮೊತ್ತದ ಹಣವನ್ನು ಪಣಕ್ಕಿಡುವುದನ್ನೇ ದಂಧೆಯಾಗಿಸಿಕೊಂಡ ಮಂದಿ ಇಲ್ಲಿ ಸಾಕಷ್ಟಿದ್ದಾರೆ. ಬೆಂಗಳೂರಿನ ಬಾಜಿದಾರರು 2008ರ ವಿಧಾನಸಭೆ ಚುನಾವಣೆಯಿಂದಲೂ ಬೆಟ್ಟಿಂಗ್ನಲ್ಲಿ ಸಾಕಷ್ಟು ಹಣ ಮಾಡಿಕೊಂಡ ನಿದರ್ಶನಗಳಿವೆ.
ಕ್ರಿಕೆಟ್ ಬುಕ್ಕಿಗಳ ನಂಟು
ರಾಜ್ಯ ರಾಜಧಾನಿ ಮಗ್ಗುಲಲ್ಲೇ ಇರುವ ರಾಮನಗರ ಜಿಲ್ಲೆಗೆ ಬೆಂಗಳೂರಿನ ಬುಕ್ಕಿಗಳ ನಂಟು ಸಾಕಷ್ಟಿದೆ. ಚುನಾವಣೆ ಮುಗಿದ ಬೆನ್ನಲ್ಲೇ ಐಪಿಎಲ್ 20 ಹಂಗಾಮದ ಬೆಟ್ಟಿಂಗ್ ಆಟದಲ್ಲಿ ಹಣದ ಹೊಳೆಯೇ ಹರಿಸಲಾರಂಭಿಸಿದೆ. ಬುಕ್ಕಿಗಳ ಏಜೆಂಟರು ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಸಂಪರ್ಕಕ್ಕೆ ಲಭ್ಯವಿದ್ದಾರೆ. ಮೊಬೈಲ್ ಕರೆಯ ಮೂಲಕವೇ ಬೆಟ್ಟಿಂಗ್ ವ್ಯವಹಾರ ಕುದುರುತ್ತಿದೆ. ಪಂದ್ಯದ ಮಾರನೆ ದಿನವೇ ಬಟವಾಡೆ ನಡೆಯುತ್ತದೆ. ಸೋತವರು ಹಣ ಕಟ್ಟದಿದ್ದರೆ, ಬುಕ್ಕಿಗಳು ರೌಡಿ ಪಡೆ ಅಟ್ಟುತ್ತಾರೆ. ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ಸಾಕಷ್ಟು ಘರ್ಷಣೆ, ಕೊಲೆ, ಅತ್ಮಹತ್ಯೆಯಂತಹ ಪ್ರಕರಣಗಳು ಸಂಭವಿಸಿದ್ದವು. ಈ ಬಾರಿಯ ಆವೃತ್ತಿ ಮುಗಿಯುವಷ್ಟರಲ್ಲಿ ಅದೆಷ್ಟು ಅಹಿತಕರ ಮತ್ತು ಅಪರಾಧ ಪ್ರಕರಣಗಳು ಸಂಭವಿಸುತ್ತವೋ ಕಾದು ನೋಡಬೇಕಿದೆ.
-ಮತ್ತೀಕೆರೆ ಜಯರಾಮ್