ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಟೋಲ್ ಪ್ಲಾಜಾದ ಹಗಲು ದರೋಡೆ

Vishwanath S
Updated On : 5 May 2014, 12:55 pm

ಕ.ಪ್ರ.ವಾರ್ತೆ , ದೇವನಹಳ್ಳಿ , ಮೇ 4
ದೇವನಹಳ್ಳಿ ಟೋಲ್ ಪ್ಲಾಜಾದಲ್ಲಿ ನವಯುಗ ಸಂಸ್ಥೆಯವರು ಈಗಿರುವ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚು  ಸುಂಕವನ್ನು ಭಾನುವಾರ ಮಧ್ಯರಾತ್ರಿಯಿಂದಲೇ ವಸೂಲಿ ಮಾಡುತ್ತಿರುವುದನ್ನು ಟ್ಯಾಕ್ಸಿ ಚಾಲಕರ ಸಂಘ ಹಾಗೂ ಸಾರ್ವಜನಿಕರು ವಿರೋಧಿಸಿ, ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.
 ದೇವನಹಳ್ಳಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನವಯುಗ ಸಂಸ್ಥೆಯವರು ಅಂತಾರಾಷ್ಟ್ರೀಯ  ವಿಮಾನ ನಿಲ್ದಾಣದಿಂದ ಹೆಬ್ಬಾಳದವರೆಗೆ ಅಭಿವೃದ್ಧಿಪಡಿಸಿದ ಪ್ಲೈ ಓವರ್ ನಿರ್ಮಿಸಿದ್ದಾರೆ. ಆದರೆ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಒಂದು ವರ್ಷ ಮೊದಲಿನಿಂದಲೇ ಸುಂಕ ವಸೂಲು ಮಾಡುತ್ತಿದ್ದರು. ಹಲವಾರು ಬಾರಿ ಲಾರಿ ಮಾಲೀಕರ ಸಂಘ ಹಾಗೂ ಟ್ಯಾಕ್ಸಿ ಚಾಲಕರ ಸಂಘ ವಿರೋಧಕ್ಕೆ ಸಂಸ್ಥೆಯವರು ನಿರ್ಲಕ್ಷಿಸಿದರು. ಒಂದು ಹಂತದಲ್ಲಿ  ದೇವನಹಳ್ಳಿ ವಕೀಲರ ಸಂಘದವರು ನ್ಯಾಯಾಲಯದ ಮೂಲಕ ಸುಂಕ ವಸೂಲಾತಿಗೆ ತಡೆಯಾಜ್ಞೆ ತಂದಿದ್ದರು. ಹತ್ತಾರು ತಿಂಗಳು ನಿರಾಳವಾಗಿ ಎಲ್ಲ ಚಾಲಕರು ನಿಟ್ಟುಸಿರು ಬಿಟ್ಟಿದ್ದರು.
 ಆದರೆ ನವಯುಗ ಸಂಸ್ಥೆ ಮತ್ತೆ ನ್ಯಾಯಾಲಯದ ಮೂಲಕವೇ ಹಣ ವಸೂಲಿ ಮಾಡಲು ಅನುಮತಿ ಪಡೆದುಕೊಂಡಿತು. ಯಾವುದೇ ಅಡ್ಡಿ ಆತಂಕ ಇಲ್ಲದೆ ಸುಂಕ ವಸೂಲುಮಾಡಲು ತೊಡಗಿದರು. ಜನ ಮತ್ತೆ ತಲೆ ಕೆಡಿಸಿಕೊಳ್ಳದೆ ಸುಂಕ ಪಾವತಿಸಿದರು.
ಮನವಿ: ಇತ್ತೀಚೆಗೆ ಮುಖ್ಯಮಂತ್ರಿಗಳು ನೂತನ ಪ್ಲೈ ಓವರ್ ರಸ್ತೆಯ ಪ್ರಾರಂಭೋತ್ಸವ ಮಾಡಿದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಸುಂಕ ಹೆಚ್ಚು ಮಾಡಬಾರದು ಎಂದು ಮನವಿಯನ್ನು ಮುಖ್ಯಮಂತ್ರಿಗಳಿಗೂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೂ ನೀಡಲಾಗಿತ್ತು. ಅದಕ್ಕೆ ಅವರು ಪೂರಕವಾಗಿ ಸ್ಪಂದಿಸಿದ್ದರು ಎನ್ನಲಾಗಿದೆ. ಭಾನುವಾರ ಬೆಳಗಿನಿಂದಲೇ ಟ್ಯಾಕ್ಸಿ ಚಾಲಕರು ಟೋಲ್ ಪ್ಲಾಜಾ ಬಳಿ ಜಮಾಯಿಸಿದರು. ಇವರೊಂದಿಗೆ ಕರ್ನಾಟ ರಕ್ಷಣಾ ವೇದಿಕೆ ಕಾರ್ಯಕರ್ತರು  ಕೂಡಿಕೊಂಡು ಪ್ರತಿಭಟನೆ ಮಾಡುವಷ್ಟರಲ್ಲಿಯೇ ಪೊಲೀಸರು ಅವರನ್ನು ಚದುರಿಸಿದರು. ಸ್ಥಳಕ್ಕೆ ಡಿಸಿಪಿ ಟಿ.ಆರ್. ಸುರೇಶ್ ಆಗಮಿಸಿ ಪರಿಶೀಲನೆ ನಡೆಸಿದರು.
ನಮಗೆ ಬೇಕಿಲ್ಲ: ಈ ಸಂದರ್ಭದಲ್ಲಿ ಬ್ಯಾಟರಾಯನಪುರ ವಿಭಾಗ ಕರವೇ ಅಧ್ಯಕ್ಷ ಆರ್. ಸುರೇಶ್ ಹಾಗೂ ದೇವನಹಳ್ಳಿ ವಿಭಾಗದ ಶಿವಪ್ರಸಾದ್ ಮಾತನಾಡಿ ನವಯುಗ ಸಂಸ್ಥೆಯವರು ಇದ್ದಕ್ಕಿದ್ದ ಹಾಗೆ ಯಾವುದೇ ಮುನ್ಸೂಚನೆ ನೀಡದೆ ನಾಲ್ಕು ಪಟ್ಟು ದರ ಏರಿಕೆ ಮಾಡಿರುವುದು ಖಂಡನೀಯ. ಅಲ್ಲದೆ ಈ ಸಂಸ್ಥೆಯವರು ನಿರ್ಮಿಸಿರುವ ರಸ್ತೆ ನಮಗೆ ಬೇಕಾಗಿಲ್ಲ. ನಮಗೆ  ಕೇಂದ್ರ ಸರ್ಕಾರ ಮೊದಲು ನಿರ್ಮಿಸಿದ್ದ ಹಿಂದಿನ ರಸ್ತೆ ಬಿಟ್ಟುಕೊಡಿ ಇಲ್ಲವಾದರೆ ಹೊಸ ಪ್ಲೈಓವರ್ನ್ ಎರಡು ಬದಿಯಲ್ಲೂ ಸರ್ವೀಸ್ ರಸ್ತೆ ಮಾಡಿಕೊಡಲೇ ಬೇಕು ಎಂದು ಒತ್ತಾಯಿಸಿದರಲ್ಲದೆ ನಮ್ಮ ಬೇಡಿಕೆ ಈಡೇರಿಸದೇ ಇದ್ದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯ ಕರವೇ ಅಧ್ಯಕ್ಷ ಎಂ.ನಾರಾಯಣಗೌಡ ನೇತತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ಪಿಳ್ಳಮುನಿಶಾಮಪ್ಪ ಬೆಂಬಲ
ಸ್ಥಳಕ್ಕೆ ಶಾಸಕ ಪಿಳ್ಳಮುನಿಶಾಮಪ್ಪ ಆಗಮಿಸಿ ನವಯುಗ ಸಂಸ್ಥೆಯವರು ಸ್ಥಳೀಯ ಶಾಸಕರನ್ನು ಗಣನೆಗೆ ತೆದುಕೊಳ್ಳದೇ ಇರುವುದು ಖಂಡನೀಯ. ಏಕಾಏಕಿ ದರ ಏರಿಕೆ ಮಾಡಿರುವುದರ ಬಗ್ಗೆ ಖಂಡನೆ ವ್ಯಕ್ತಪಡಿಸಿದರಲ್ಲದೆ ನಿಮ್ಮ ನ್ಯಾಯಯುತ ಹೋರಾಟಕ್ಕೆ ನನ್ನ ಬೆಂಬಲ ಇರುತ್ತದೆ ಎಂದು ತಿಳಿಸಿದರು. ನಂತರ  ಡಿಸಿಪಿ ಟಿ.ಆರ್. ಸುರೇಶ್, ಶಾಸಕ ಪಿಳ್ಳಮುನಿಶಾಮಪ್ಪ, ನವಯುಗ ಸಂಸ್ಥೆಯ ಅಧಿಕಾರಿ ಶ್ರೀನಿವಾಸನ್ ಹಾಗೂ ದೇವನಹಳ್ಳಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್. ಶ್ರೀನಿವಾಸಮೂರ್ತಿ, ಕರವೇ ಕಾರ್ಯಕರ್ತರು ಸಭೆ ನಡೆಸಿ ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿಗಳು ಎರಡು ದಿನದೊಳಗೆ ಸಭೆ ಕರೆಯಲಿದ್ದಾರೆ ಎಂದು ತಿಳಿಸಿದರಲ್ಲದೆ ಮುಂದಿನ ಸಭೆಯಲ್ಲಿ ತೀರ್ಮಾನವಾಗುವವರೆಗೂ  ದೇವನಹಳ್ಳಿ ತಾಲೂಕಿನಲ್ಲಿ ವಾಸಿಸುವವರು ತಮ್ಮ ಯಾವುದೇ ಗುರುತಿನ ಚೀಟಿ ತೋರಿಸಿ ಟೋಲ್ ಮೂಲಕ ಉಚಿತವಾಗಿ ಸಂಚರಿಸಲು ನವಯುಗ ಸಂಸ್ಥೆ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದರು.
ಮುಖ್ಯಮಂತ್ರಿ ಆದೇಶಿಸಲಿ
ನವಯುಗ ಸಂಸ್ಥೆಯವರು ದೇವನಹಳ್ಳಿಯಿಂದ ಬೆಂಗಳೂರುವರೆಗೆ ಅಭಿವೃದ್ಧಿ ಪಡಿಸಿದ ಹೆದ್ದಾರಿಯ ಎರಡೂ ಕಡೆ ಸರ್ವೀಸ್ ರಸ್ತೆ ನಿರ್ಮಾಣ ಮಾಡುವವರೆಗೂ ಯಾವುದೇ ರೀತಿಯ ಶುಲ್ಕ ವಸೂಲು ಮಾಡದಂತೆ ಮುಖ್ಯಮಂತ್ರಿಗಳು ಆದೇಶ ನೀಡಬೇಕು. ಮೊದಲಿನ ದರದಲ್ಲೇ ಸುಂಕ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳಿಗೆ ಲೋಕೋಪಯೋಗಿ ಇಲಾಖೆ ಸಚಿವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಲ್ಲದೆ ಕೇಂದ್ರ ಸಚಿವರಿಗೂ ಎಲ್ಲ ನಾಗರಿಕರ ಪರವಾಗಿ ಮನವಿ ಮಾಡುವುದಾಗಿ  ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.
ವಿವಿಧ ಸಂಘಟನೆಗಳ ಖಂಡನೆ
ಹಗಲು ದರೋಡೆ ಮಾಡುತ್ತಿರುವ ನವಯುಗ ಸಂಸ್ಥೆಯವರ ಕ್ರಮವನ್ನು ವಿಶ್ವನಾಥಪುರ ಕಾಲೇಜಿನ ಉಪನ್ಯಾಸಕ ಚಂದ್ರಶೇಖರ್, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ದೇ.ಸೂ.ನಾಗರಾಜ್, ಖಾಸಗೀ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಖಂಡಿಸಿದರಲ್ಲದೆ ಹೊಸ ವಾಹನಗಳ ನೋಂದಣಿ, ಪ್ರತಿ ವರ್ಷ ಸರಕು ಸಾಗಣೆ ವಾಹನಗಳಿಗೆ ತೆರಿಗೆ ಅಲ್ಲದೆ ಪ್ರಮುಖವಾಗಿ ಪೆಟ್ರೋಲ್, ಡೀಸಲ್ ಮೇಲಿನ ತೆರಿಗೆ ಲಕ್ಷಾಂತರ ಕೋಟಿ ರು. ಸರ್ಕಾರಗಳ ಬೊಕ್ಕಸ ತುಂಬುತ್ತಿದೆ. ಈ ತೆರಿಗೆಗಳ ಜೊತೆಯಲ್ಲಿ ಸುಂಕ ವಸೂಲಿ ಯಾವ ನ್ಯಾಯ, ಇದಕ್ಕೆ ಸಂವಿಧಾನದಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement