ನೀರಿಗಾಗಿ ಬೀದಿಗಿಳಿದ ನೀರೆಯರು
ಕ.ಪ್ರ.ವಾರ್ತೆ , ದೊಡ್ಡಬಳ್ಳಾಪುರ , ಮೇ 4
ದೊಡ್ಡಬಳ್ಳಾಪುರ ತಾಲೂಕಿನಾದ್ಯಂತ ನೀರಿನ ಸಮಸ್ಯೆ ಬಿಗಡಾಯಿಸಿದೆ. ಬೇಸಿಗೆಯ ಆರಂಭದ ದಿನಗಳಲ್ಲೇ ನೀರಿನ ತೀವ್ರ ಬರ ಕಂಡು ಬಂದಿದ್ದು, ಜನ ಕಂಗಾಲಾಗಿದ್ದಾರೆ. ಸಮರ್ಪಕ ನೀರು ಪೂರೈಕೆಗೆ ಒತ್ತಾಯಿಸಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆಗಿಳಿದ್ದಾರೆ.
ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿದ್ದ ನೂರಾರು ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ನೀರು ಸರಬರಾಜು ವ್ಯವಸ್ಥೆ ಸರಿಪಡಿಸದಿದ್ದರೆ ಉಗ್ರಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಸುಮಾರು 4 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ನೀರು ಸರಬರಾಜು ಸರಿಯಿಲ್ಲ. ಬೋರ್ವೆಲ್ನಲ್ಲಿ ಉತ್ತಮವಾದ ನೀರು ಲಭ್ಯವಿದ್ದರೂ ಗ್ರಾ.ಪಂ ಅಧಿಕಾರಿಗಳು ಸಮರ್ಪಕವಾಗಿ ಅದನ್ನು ಬಳಕೆ ಮಾಡಿಕೊಂಡು ಸರಬರಾಜು ಮಾಡುತ್ತಿಲ್ಲ. ನೀರು ಮಾರಾಟಗಾರರ ಜೊತೆ ಶಾಮೀಲಾಗಿದ್ದು, ಗ್ರಾಮದಲ್ಲಿ ನೀರಿನ ಕೃತಕ ಅಭಾವ ಸೃಷ್ಟಿಸಿದ್ದಾರೆ. ಪ್ರಭಾವಿ ವ್ಯಕ್ತಿಗಳಿರುವ ಪ್ರದೇಶಗಳಿಗೆ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಸಾಮಾನ್ಯ ಜನಕ್ಕೆ ನೀರಿನ ಸಮರ್ಪಕ ವಿತರಣೆ ನಡೆಯುತ್ತಿಲ್ಲ. ವಾರದಲ್ಲಿ ಒಂದು ದಿನ ಮಾತ್ರ ಸರಬರಾಜು ನಡೆಯುತ್ತಿದೆ ಎಂದು ಆರೋಪಿಸಿದರು.
ಟ್ಯಾಂಕರ್ಗಳ ಮೂಲಕ: ಅಲ್ಲದೆ ಗ್ರಾಮದ ಸುತ್ತಮುತ್ತಲ ಗುಂಡಮಗೆರೆ, ಸೊಣ್ಣೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನೀರಿನ ಬವಣೆ ನೀಗಿಸಲು ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ನಡೆಯುತ್ತಿದೆ. ಇದೇ ಮಾದರಿಯನ್ನು ಹೊಸಹಳ್ಳಿಗೂ ಅಳವಡಿಸಿಕೊಳ್ಳಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಇದರಿಂದ ಸುಮಾರು 2 ಕಿ.ಮೀ ದೂರದ ತೋಟಗಳ ಮಾಲೀಕರ ಬಳಿ ಮನವಿ ಮಾಡಿ ನೀರು ತರಬೇಕಾದ ಅನಿವಾರ್ಯತೆ ಉಂಟಾಗಿದೆ. ಸರಿಯಾಗಿ ನೀರು ಸರಬರಾಜು ಮಾಡಲು ನಿರ್ಲಕ್ಷ್ಯವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಾಲೂಕು ಆಡಳಿತವನ್ನು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕೆಲ ಜನಪ್ರತಿನಿಧಿಗಳು ಸೇರಿದಂತೆ ನೂರಾರು ನಾಗರೀಕರು, ಮಹಿಳೆಯರು ಭಾಗವಹಿಸಿದ್ದರು.
ಆರೋಪ
ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ನೀಡದೆ ಶಾಸಕರೂ ಕೂಡ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಎಲ್ಲ ಹೋಬಳಿಗಳಲ್ಲಿಯೂ ಶುದ್ಧಕುಡಿಯುವ ನೀರಿನ ಘಟಕ ಮಂಜೂರು ಮಾಡಿರುವ ಅವರ, ಸಾಸಲು ಹೋಬಳಿಯನ್ನು ಮಾತ್ರ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.