ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪೋಷಕರ ಆಸೆ ಕೈಗೂಡಿಸುವುದು ಮಕ್ಕಳ ಕರ್ತವ್ಯ

Vishwanath S
Updated On : 5 May 2014, 12:56 pm

ಚನ್ನಪಟ್ಟಣ: ಪ್ರತಿಯೊಬ್ಬ ತಂದೆ ತಾಯಿಯರೂ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಟ್ಟಿರುತ್ತಾರೆ. ಮಕ್ಕಳ ಬಗ್ಗೆ ಸದಾಕಾಲ ನಿಗಾವಹಿಸಿ ಅವರಿಗೊಂದು ಉತ್ತಮ ಜೀವನ ರೂಪಿಸಿ ಕೊಡಬೇಕೆಂದು ತಮ್ಮ ಬದುಕನ್ನು ಮುಡುಪಾಗಿಡುವ ಆಸೆಗಳನ್ನು ಕೈಗೂಡಿಸುವುದು ಮಕ್ಕಳ ಆದ್ಯ ಕರ್ತವ್ಯ ಎಂದು ಎಸ್‌ಬಿಎಂ ಶಾಖಾ ವ್ಯವಸ್ಥಾಪಕ ಸುನಿಲ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ ಹಮ್ಮಿ ಕೊಳ್ಳಲಾಗಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ವಿದ್ಯಾರ್ಥಿ ಜೀವನ ನಮ್ಮ ಜೀವನದ ತಳಹದಿ ಇದ್ದಂತೆ. ಈ ಸಮಯವನ್ನು ನಾವು ಸದ್ಬಳಕೆ ಮಾಡಿಕೊಂಡು ಉತ್ತಮ ತಳಹದಿ ಹಾಕಿಕೊಂಡಿದ್ದೇ ಆದಲ್ಲಿ ಮುಂದಿನ ಜೀವನ ಸುಖಮಯವಾಗಿರುತ್ತದೆ ಎಂದರು. ನಮ್ಮನ್ನು ಅನಗತ್ಯ ಸಂಗತಿಗಳು ಸೆಳೆದು ನಮ್ಮ ಜೀವನದ ಗುರಿ ಮುಟ್ಟಲು ಅಡಚಣೆಯುಂಟು ಮಾಡುತ್ತಿರುತ್ತವೆ. ಆದರೆ ವಿದ್ಯಾರ್ಥಿಗಳು ಅನ್ಯ ಸಂಗತಿಯ ಬಗ್ಗೆ ಗಮನ ಹರಿಸದೆ ಉಪಯುಕ್ತ ವಿಷಯಗಳಿಗೆ ಮಾತ್ರ ಹೆಚ್ಚಿನ ಮನ್ನಣೆ ನೀಡಿ ನಮ್ಮ ಯಶಸ್ವಿ ವ್ಯಕ್ತಿಗಳಾಗಿ ಹೊರ ಹೊಮ್ಮಬೇಕು. ಶಿಕ್ಷಣ ಕ್ಷೇತ್ರದ ಜತೆಗೆ ಕ್ರೀಡಾ ಕ್ಷೇತ್ರದಲ್ಲೂ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ಹೊಂದ ಬೇಕೆಂದು ತಿಳಿಸಿದ ಅವರು ವಿದ್ಯಾರ್ಥಿನಿಯರು ಸಮಾಜದಲ್ಲಿ ಉತ್ತಮ ಅವಕಾಶಗಳನ್ನು ದೊರಕಿಸಿ ಕೊಳ್ಳುವ ಪ್ರಯತ್ನ ಮಾಡಬೇಕೆಂದು ಕರೆ ನೀಡಿದರು.
ಜಾನಪದ ಗಾಯಕ ರಾಮಚಂದ್ರ ಮಾತನಾಡಿ, ವಿದ್ಯೆಯ ಜತೆಗೆ ಕಲೆ ಮತ್ತು ಸಂಸ್ಕೃತಿಯನ್ನು ಕಲಿಯಲು ಕಾಲೇಜು ಜೀವನ ಸೂಕ್ತ ಸಮಯ ವಾಗಿದೆ. ವಿದ್ಯಾರ್ಥಿಗಳು ಯಾವುದೋ ಒಂದು ವಿಷಯಕ್ಕೆ ಸೀಮಿತವಾಗದೆ ಎಲ್ಲಾ ಬಹುಮುಖ ಪ್ರತಿಭೆಗಳಾಗಿ ಹೊರ ಹೊಮ್ಮಬೇಕೆಂದು ತಿಳಿಸಿದ ಅವರು ನಾನು ಇಂದು ಜಾನಪದ ಗಾಯಕನಾಗಿ  ರಾಷ್ಟ್ರಮಟ್ಟದಲ್ಲಿ ಗುರುತಿಸಿ ಕೊಳ್ಳಲು ನನ್ನ ಕಾಲೇಜು ದಿನಗಳೇ ಸಹಕಾರಿಯಾಗಿದ್ದು ಎಂದು ಮೆಲುಕು ಹಾಕಿದರು. ಪ್ರಾಂಶುಪಾಲ ಪ್ರೊ.ಎಸ್.ಲಿಂಗಣ್ಣಯ್ಯ ಮಾತನಾಡಿ, ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿರುವ ನಮ್ಮ ಕಾಲೇಜು ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದೆ ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಪರವಾಗಿ ಪ್ರಾಂಶುಪಾಲ ಲಿಂಗಣ್ಣಯ್ಯ ಬಹುಮಾನ ವಿತರಣೆ ಮಾಡಿದರು. ಗಾಯಕ ರಾಮಚಂದ್ರು ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು. ಸಾಂಸ್ಕೃತಿಕ ಘಟಕದ ಸಂಚಾಲಕ ಡಾ.ಅಣ್ಣಯ್ಯ ತೈಲೂರು ವರದಿ ಮಂಡಿಸಿದರು. ಕ್ರೀಡಾ ಸಂಚಾಲಕ ಐ.ಸಿ. ಜಗದೀಶಯ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಗುರುಲಕ್ಷ್ಮಿ ಪ್ರಾರ್ಥಿಸಿದರು, ವಾಣಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement