ಇಎಸ್‌ಐ ಆಸ್ಪತ್ರೆ ಬಾಡಿಗೆ ಬಾಕಿ: ಕಟ್ಟಡಕ್ಕೆ ಬೀಗ
ಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ, ಮೇ 5
ಇಲ್ಲಿನ ಚಿಕ್ಕಪೇಟೆಯ ಮಹಾತ್ಮಗಾಂಧಿ ವೃತ್ತದಲ್ಲಿರುವ ತಾಲೂಕು ಕಾರ್ಮಿಕ ಕಲ್ಯಾಣ ಆಸ್ಪತ್ರೆ (ಇಎಸ್‌ಐ ಆಸ್ಪತ್ರೆ) ಬಾಡಿಗೆ ಕಟ್ಟಡದಲ್ಲೇ ಹತ್ತಾರು ವರ್ಷಗಳಿಂದ ನಡೆಯುತ್ತಿದೆ. ಬಾಡಿಗೆ ಬಾಕಿ ಉಳಿಸಿಕೊಂಡಿದ್ದ ಕಾರಣ ಆಸ್ಪತ್ರೆಗೆ ಬೀಗ ಜಡಿದ ಪ್ರಸಂಗ ಸೋಮವಾರ ನಡೆದ ಹಿನ್ನೆಲೆಯಲ್ಲಿ ರೋಗಿಗಳು ಪರದಾಡುವಂತಾಯಿತು.
ಕಳೆದ ಫೆಬ್ರವರಿ ತಿಂಗಳಲ್ಲಿ ಕೂಡ ಇದೇ ರೀತಿಯ ಪ್ರಸಂಗ ನಡೆದಿತ್ತು. ಆದರೆ ಮತ್ತೆ ಪ್ರಕರಣ ಮರುಕಳಿಸಿದೆ. ಬಾಡಿಗೆ ಕರಾರು ಸಮಯ ಮುಗಿದಿದ್ದು ಕಟ್ಟಡ ಖಾಲಿ ಮಾಡಿ ಎಂದು ಮಾಲೀಕ ದೇವರಾಜ್ ಕಟ್ಟಡಕ್ಕೆ ಬೀಗ ಜಡಿದಿದ್ದಾರೆ. ನಂತರ ನಗರ ಠಾಣೆ ಎಸೈ ಕೃಷ್ಣಕುಮಾರ್ ಮಧ್ಯ ಪ್ರವೇಶಿಸಿ ಬೀಗ ತೆರವು ಮಾಡಿ ರೋಗಿಗಳ ಚಿಕಿತ್ಸೆಗೆ ಅನುವು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಕಾರ್ಮಿಕರನೇಕರು, ತಾಲೂಕಿನಲ್ಲಿ ನೂರಾರು ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದೆ. ಆದರೆ ಇರುವುದೊಂದೇ ಕಾರ್ಮಿಕರ ಆಸ್ಪತ್ರೆ. ಇದು ಈ ಬಗೆಯ ದುಸ್ಥಿತಿಯಲ್ಲಿದೆ. ಹತ್ತಾರು ಸಾವಿರ ಸಂಖ್ಯೆಯಲ್ಲಿರುವ ಕಾರ್ಮಿಕರಿಗೆ ಇದರಿಂದ ನಿರ್ದಿಷ್ಟ ಆರೋಗ್ಯ ಭದ್ರತೆ ಇಲ್ಲದಾಗಿದೆ. ಜೊತೆಗೆ ಕಾರ್ಮಿಕ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ನಿರ್ಲಕ್ಷ್ಯದಿಂದ ನಾವು ಪರಿತಪಿಸುವಂತಾಗಿದೆ. ಇದಕ್ಕೆ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಇಲಾಖೆಗಳ ಮುಖ್ಯಸ್ಥರುಗಳೇ ನೇರ ಹೊಣೆ. ಕೂಡಲೇ ಆಸ್ಪತ್ರೆ ಬಾಡಿಗೆ ಪಾವತಿಸಿ ಬೀಗಮುದ್ರೆ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಕಟ್ಟಡವನ್ನು ಬೇರೆಡೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಭರವಸೆ ಈಡೇರಿಲ್ಲ. ಈ ಕುರಿತು ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದರೆ ಬಾಡಿಗೆ ಕಟ್ಟಡ ಹುಡುಕುವ ಕಾರ್ಯ ಪ್ರಗತಿಯಲ್ಲಿದೆ ಎಂದಷ್ಟೇ ಹೇಳುತ್ತಾರೆ. ಈ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ನೀರು ಮತ್ತು ಇತರೆ ವ್ಯವಸ್ಥೆಗಳು ಸರಿಯಿಲ್ಲ.
ಹಾಗಾಗಿ ಆಸ್ಪತ್ರೆಯನ್ನು ಈ ಕಟ್ಟಡದಿಂದ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸುವ ಕುರಿತು ಪ್ರಸ್ತಾವನೆಗೆ ಮಂಜೂರಾತಿ ಸಿಕ್ಕಿದೆ. ಕೆಲವೇ ದಿನಗಳಲ್ಲಿ ಆಸ್ಪತ್ರೆ ಸ್ಥಳಾಂತರ ಮಾಡುವ ಉದ್ದೇಶವಿದೆ ಎಂದು ವಿವರಿಸಿದರು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಡೆದ ಈ ಪ್ರಸಂಗ ಅನೇಕ ಕಾರ್ಮಿಕ ರೋಗಿಗಳ ಪಾಲಿಗೆ ಅಸಹನೆ ಪ್ರಚೋದಿಸಿತು. ಕೆಲಕಾಲ ವಾಗ್ವಾದವೂ ನಡೆಯಿತು.
ಹೈಟೆಕ್ ಆಸ್ಪತ್ರೆ ಎಲ್ಲಿ: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಜ್ಯದ ಮಾದರಿ ಹೈಟೆಕ್ ಇಎಸ್‌ಐ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆದ 1 ವರ್ಷ ಕಳೆದರೂ ಇನ್ನೂ ಕಾಮಗಾರಿ ಆರಂಭವಾಗುವ ಸುಳಿವೂ ದೊರೆತಿಲ್ಲ. ಸಿಎಂ ಸಿದ್ಧರಾಮಯ್ಯ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ವೀರಪ್ಪಮೊಯ್ಲಿ ಮತ್ತಿತರರು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ 2 ವರ್ಷದಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡುತ್ತದೆ ಎಂದಿದ್ದರು. ಆದರೆ ಕಾಮಗಾರಿಯೇ ಆರಂಭವಾಗದೇ ಕಾರ್ಯರಂಭ ಹೇಗೆ ಎಂಬ ಪ್ರಶ್ನೆ ಕಾರ್ಮಿಕರನ್ನು ಕಾಡುತ್ತಿದೆ.