ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಯೋಗ ಗುರು ರಾಮದೇವ್ ಕೂಡಲೇ ಬಂಧಿಸಿ

Vishwanath S
Updated On : 6 May 2014, 1:17 am

ನೆಲಮಂಗಲ: ದಲಿತ ಸಮುದಾಯವನ್ನು ನಿಕೃಷ್ಟವಾಗಿ ಕಾಣುತ್ತಿರುವ ಮತ್ತು ಅವಹೇಳನಕಾರಿ ಹೇಳಿಕೆ ನೀಡಿರುವ ಯೋಗ ಗುರು ರಾಮದೇವ್ ಅವರನ್ನು ಕೂಡಲೇ ಬಂಧಿಸಿ ದೇಶದಿಂದ ಗಡಿಪಾರು ಮಾಡಬೇಕೆಂದು ತಾಲೂಕು ದಲಿತ ಸಂಘಟನೆ ಒಕ್ಕೂಟ ಅಗ್ರಹಿಸಿ ಪ್ರತಿಭಟನೆ ನಡೆಸಿತು.
ಅವರು ಸೋಮವಾರ ಪಟ್ಟಣದ  ಜಯನಗರದಿಂದ ರಾಮದೇವ್ ಅಣಕು ಶವಯಾತ್ರೆಯ ಮೆರವಣಿಗೆ ನಡೆಸಿ ರಾಮದೇವ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿ ಆವರಣಕ್ಕೆ ಬಂದು ವಿಶೇಷ
ತಹಸೀಲ್ದಾರ್ ರಾಮಕೃಷ್ಣಯ್ಯ ಮೂಲಕ ಸರ್ಕಾರಕ್ಕೆ  ಮನವಿ ಸಲ್ಲಿಸಿ ದಲಿತ ಸಂಘಟನೆ ಒಕ್ಕೂಟದ ಅಧ್ಯಕ್ಷ ಭಾಸ್ಕರ್ ಪ್ರಸಾದ್ ಮಾತನಾಡಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಭಾಸ್ಕರ್, ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡುವ ರಾಹುಲ್ ಗಾಂಧಿ ಪಿಕ್ ನಿಕ್ ಅಥವಾ ಹನಿಮೂನ್‌ಗಾಗಿ ಹೋಗುತ್ತಾರೆಂದು ಹೇಳುವ ಮೂಲಕ ಸಮುದಾಯವನ್ನು ಕಡೆಗಣಿಸಿದ್ದಾರೆ. ಉನ್ನತ ಸ್ಥಾನಮಾನದಲ್ಲಿರುವ ವ್ಯಕ್ತಿಯ ಹೇಳಿಕೆ ಗೌರವಕ್ಕೆ ತಕ್ಕದ್ದಲ್ಲ. ಈ ರೀತಿ ರಾಮದೇವ್ ತಮ್ಮ ಸ್ಥಾನಮಾನದ ಬಗ್ಗೆ ಅರಿವಿಟ್ಟುಕೊಂಡು ಹೇಳಿಕೆಯನ್ನು ನೀಡಬೇಕು. ಕೇವಲ ಬಿಟ್ಟಿ ಪ್ರಚಾರ ಪಡೆಯುವುದಕ್ಕಾಗಿ ಮನಸೋ  ಇಚ್ಛೆ ಹೇಳಿಕೆಗಳನ್ನು ನೀಡುವ ಮೂಲಕ ಸಮುದಾಯಗಳನ್ನು ಕಡೆಗಣಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಾಬಾ ರಾಮದೇವ್ ಅಣಕು ಶವಯಾತ್ರೆಯನ್ನು ಹೊತ್ತು ಬಂದ ಪ್ರತಿಭಟನಾ ನಿರತರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ನಂತರ ಪಟ್ಟಣ ಪೊಲೀಸ್ ಠಾಣೆಗೆ ಶವಯಾತ್ರೆ ನಡೆಸಿ ಕೂಡಲೇ ರಾಮದೇವ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಸಬ್‌ಇನ್ಸ್‌ಪೆಕ್ಟರ್ ಸಂದೀಪ್ ಅವರಿಗೆ ಮನವಿ ನೀಡಿದರು. ಶವಯಾತ್ರೆ ಮಾಡಿರುವ ನಾವು ಹನ್ನೊಂದು ದಿನಕ್ಕೆ ಸರಿಯಾಗಿ ತಿಥಿ ಕಾರ್ಯ ಮಾಡುತ್ತೇವೆ ಎಂದು ಹೇಳಿ ಅಣಕು ಶವಕ್ಕೆ  ತಾಲೂಕು ಕಚೇರಿ ಮುಂಭಾಗದಲ್ಲಿಯೇ ಅಗ್ನಿ ಸ್ಪರ್ಶ ಮಾಡಲಾಯಿತು. ಮನವಿ ಸ್ವೀಕರಿಸಿದ ವಿಶೇಷ ತಹಸೀಲ್ದಾರ್ ರಾಮಕೃಷ್ಣಯ್ಯ ಸರ್ಕಾರಕ್ಕೆ ಒಕ್ಕೂಟದ ಮನವಿಯನ್ನು ತಲುಪಿಸುವುದಾಗಿ ಹೇಳಿದರು. ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ನಾಗರಾಜ್, ದಲಿತ ಕೂಲಿ ಮತ್ತು ಕಾರ್ಮಿಕರ ಸಂಘದ ಅಧ್ಯಕ್ಷ ಗಂಗಬೈಲಪ್ಪ, ಪದಾಧಿಕಾರಿಗಳಾದ ಛಲವಾದಿ ನಾಗೇಂದ್ರ, ಶಿವಕುಮಾರ್, ನಂದಕುಮಾರ್, ಕೃಷ್ಣಮೂರ್ತಿ, ಮಂಜುನಾಥ್, ಗುಡೇಮಾರನಹಳ್ಳಿ ನಾಗರಾಜ್, ಗಂಗಮ್ಮ ಸೇರಿದಂತೆ ಒಕ್ಕೂಟ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement