ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಾಲ್ಯ ವಿವಾಹ ಪಿಡುಗು ದುರಂತ: ಮಂಜಪ್ಪ ವಿಷಾದ

Rashmi Kasaragodu
Updated On : 8 May 2014, 2:15 am


ರಾಮನಗರ: ಬಾಲ್ಯ ವಿವಾಹದಿಂದ ಆಗುವ ದುಷ್ಪರಿಣಾಮಗಳ ಅರಿವಿದ್ದಾಗ್ಯೂ ನಮ್ಮ ಸಮಾಜದಲ್ಲಿ ಆ  ಪಿಡುಗು ತಪ್ಪದಿರುವುದು ದುರಂತದ ಸಂಗತಿಯೇ ಸರಿ ಎಂದು ತಹಸೀಲ್ದಾರ್ ಎಚ್.ಟಿ.ಮಂಜಪ್ಪ ವಿಷಾದಿಸಿದರು.
ಜಿಲ್ಲಾಡಳಿತ, ಜಿ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಗರದಲ್ಲಿರುವ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಬುಧವಾರ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯ ವಿವಾಹ ತಡೆ ನಿಟ್ಟಿನಲ್ಲಿ ಇನ್ನಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅರಿವು ಮೂಡಿಸುವ ಪ್ರಯತ್ನ ಸರ್ಕಾರ ಮತ್ತು ಸಂಘ-ಸಂಸ್ಥೆಗಳಿಂದ ಆಗಬೇಕಿದೆ ಎಂದು ಅವರು ಸಲಹೆ ನೀಡಿದರು.    ಬಾಲ್ಯ ವಿವಾಹಕ್ಕೆ ಅಲ್ಪ ಮಟ್ಟಿಗೆ ಅರಿವಿನ ಕೊರತೆ, ಬಡತನ, ಅನಕ್ಷರತೆ, ಮೂಢನಂಬಿಕೆ, ಸಂಬಂಧದಲ್ಲಿ ಕಟ್ಟು ಬೀಳುವಿಕೆ, ಬೇಗನೆ ಜವಬ್ದಾರಿ ಕಳೆದುಕೊಳ್ಳಬೇಕೆನ್ನುವ ತುಡಿತವೇ ಪ್ರಮುಖ ಕಾರಣಗಳಾಗಿವೆ ಎಂದು ಮಂಜಪ್ಪ ವಿವರಿಸಿದರು.
ಬಾಲ್ಯ ವಿವಾಹ ತಡೆಗಟ್ಟಲು ಸರ್ಕಾರ ಹಲವು ಕಾಯ್ದೆಗಳನ್ನು ಜಾರಿಗೆ ತಂದಿದೆ. ಇಷ್ಟಾಗಿಯೂ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ವಿವಾಹ ನಡೆಯುತ್ತಿವೆ. ನೆರೆ ಹೊರೆಯವರು ಈ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿಲ್ಲ ಎಂದರು.  
ಅನಿಷ್ಠ ಪದ್ಧತಿ ತೊಲಗಲಿ: ಹೆಣ್ಣನ್ನು ಅನಿಷ್ಠ, ಪೀಡೆ ಎಂದೆಲ್ಲಾ ಭಾವಿಸುವವರೇ ಬಾಲ್ಯ ವಿವಾಹಕ್ಕೆ ಉತ್ತೇಜಿಸುತ್ತಿದ್ದಾರೆ. ಇಂತಹ ಪಿಡುಗೆ ತೊಲಗಬೇಕು ಎಂದು  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಯೂಬ್ ಷರೀಫ್ ಹೇಳಿದರು.  
ಗಂಡಿಗೆ 21 ಮತ್ತು ಹೆಣ್ಣಿಗೆ 18 ವರ್ಷ ತುಂಬದ ಹೊರತು ಅದನ್ನು ಬಾಲ್ಯ ವಿವಾಹವೆಂದು ಪರಿಗಣಿಸಲಾಗುವುದು. ಹೆಣ್ಣು ಮಕ್ಕಳಿಗೆ 18 ತುಂಬುವ ಮುನ್ನವೇ ಮದುವೆ ಮಾಡಿ, ಅಪ್ರಾಪ್ತ ವಯಸ್ಸಿಗೆ ಕುಟುಂಬದ ಜವಬ್ದಾರಿ ಹೇರುವುದು ತಪ್ಪು ಎಂದರು.
ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಮಾನಸಿಕ, ದೈಹಿಕವಾಗಿ ಸಬಲರಾಗಿರುವುದಿಲ್ಲ. ಅಂತಹವರು  ಗರ್ಭಿಣಿಯಾದರೆ, ಹುಟ್ಟುವ ಮಗು ಆರೋಗ್ಯವಂತವಾಗಿರಲು ಸಾಧ್ಯವಿರದು. ಅಂತಹ ಮಗುವಿನ ಭವಿಷ್ಯಕ್ಕೂ ನಾವೇ ಕೊಳ್ಳಿ ಇಟ್ಟಂತಾಗುತ್ತದೆ ಎಂದು ಎಚ್ಚರಿಸಿದರು.
ನೊಂದಣಿ ಕಡ್ಡಾಯವಾಗಲಿ: ಬಾಲ್ಯ ವಿವಾಹ ಊರ್ಜಿತವಲ್ಲ. ಕಾನೂನು ರೀತ್ಯ ಅಪರಾಧವಾಗಿರುವ ಬಾಲ್ಯ ವಿವಾಹಕ್ಕೆ ಸಜೆ ಅನುಭವಿಸಬೇಕಾಗುತ್ತದೆ. ಮದುವೆಯನ್ನು ನೊಂದಣಿ ಮಾಡಿಸುವುದು ಕಡ್‌ಡಾಯ ಎನ್ನುವ ಕಾಯ್ದೆ ಜಾರಿಗೆ ಬಂದರೆ ಸಹಜವಾಗಿಯೇ ಬಾಲ್ಯ ವಿವಾಹ ತಡೆ ಸಾಧ್ಯ ಎಂದು ಅಯೂಬ್ ಷರೀಫ್ ಅಭಿಪ್ರಾಯಪಟ್ಟರು. ತಾಲೂಕು ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಳಿನಾ ಸಿ. ಕಾಗೆನೆಲೆ ಮಾತನಾಡಿ, ಬಾಲ್ಯ ವಿವಾಹಗಳಿಗೆ ಸಂಪೂರ್ಣವಾಗಿ ನಿಲ್ಲಿಸಲು ಗ್ರಾಮ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳ ಸಹಕಾರ ಅತಿ ಮುಖ್ಯ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿ ಆರ್.ಸೋಮಲತಾ, ಮಕ್ಕಳ ರಕ್ಷಣಾಧಿಕಾರಿ ಕಚೇರಿಯ ಸಹಾಯಕ ಅಧಿಕಾರಿ ಖಾನ್, ಕಂದಾಯ, ಗ್ರಾ.ಪಂ., ಶಿಕ್ಷಣ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ದಾದಿಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement