ರಾಜ್ಯದಲ್ಲಿರುವ ಎಲ್ಲ ಟೋಲ್ ಧ್ವಂಸ
ಕ.ಪ್ರ. ವಾರ್ತೆ ದೇವನಹಳ್ಳಿ ಮೇ 7
ಟೋಲ್ ಶುಲ್ಕ ನಾಲ್ಕು ಪಟ್ಟು ಏರಿಕೆ ವಿರುದ್ಧ ಜೆಡಿಎಸ್, ಕನ್ನಡ ಸಂಘಟನೆಗಳು ಹಾಗೂ ಕರ್ನಾಟಕ ರಾಜ್ಯ ವಾಹನ ಚಾಲಕರ ಸಂಘಗಳ ಸಾವಿರಾರು ಕಾರ್ಯಕರ್ತರು ಬುಧವಾರವೂ ಪ್ರತಿಭಟನೆ ನಡೆಸಿದರು.
ಟೋಲ್ ಶುಲ್ಕ ಏರಿಕೆ ವಿರುದ್ಧ ನಾಲ್ಕು ದಿನದಿಂದಲೂ ರಾಜಕೀಯ ಪಕ್ಷಗಳ ಮತ್ತು ವಿವಿಧ ಸಂಘಟನೆಗಳ ಸಾವಿರಾರು ಕಾರ್ಯಕರ್ತರಿಂದ ಭಾರಿ ಪ್ರತಿಭಟನೆ ಮುಂದುವರಿದಿದೆ. ಬುಧವಾರ ಕನನಡ ಸಂಘಟನೆ ಕಾರ್ಯಕರ್ತರು ಟೋಲ್ ಕೇಂದ್ರದ ಗಾಜು ಪುಡಿ ಪುಡಿ ಮಾಡಿದ್ದಲ್ಲದೇ ಏರಿಕೆ ಶುಲ್ಕ ಹಿಂಪಡೆಯದಿದ್ದರೆ ರಾಜ್ಯದಲ್ಲಿರುವ ಎಲ್ಲ ಟೋಲ್ ಧ್ವಂಸ ಮಾಡುವ ಎಚ್ಚರಿಕೆ ನೀಡಿದರು. ಜೆಡಿಎಸ್ ಕೂಡ ಬುಧವಾರ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು. ಪಕ್ಷದ ಕಾರ್ಯಕರ್ತರು ಬೆಂಗಳೂರು ನಗರದ ಪಕ್ಷದ ಕಚೇರಿಯಿಂದಲೇ ರ್ಯಾಲಿ ನಡೆಸಿ ಟೋಲ್‌ವರೆಗೆ ಆಗಮಿಸಿದರಲ್ಲದೆ ಸಾವಿರಾರು ಮಂದಿ ಕಾರ್ಯಕರ್ತರು ಜಮಾಯಿಸಿ ಟೋಲ್ ಕೇಂದ್ರಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸರು ಅವರನ್ನೆಲ್ಲಾ 500 ಮೀಟರ್ ದೂರದಲ್ಲೆ ತಡೆದರು.
ಜನಪರ ಕೆಲಸ ಮಾಡಿ
ಸುಮಾರು ಎರಡು ಗಂಟೆ ತಡವಾಗಿ ಆಗಮಿಸಿದ ದೇವೇಗೌಡರು ಮಾತನಾಡಿ, ನಾವು ಯಾವುದೇ ಪಕ್ಷದ ವಿರುದ್ಧ ಮಾತನಾಡುವುದಿಲ್ಲ. ಯಾವುದೇ ಪಕ್ಷದ ಸರ್ಕಾರವಿರಲಿ ಅದು ಜನರ ಪರವಾಗಿ ಕೆಲಸ ಮಾಡಬೇಕು ಎಂದರಲ್ಲದೆ ಒಬ್ಬ ಟ್ಯಾಕ್ಸಿ ಚಾಲಕ ನಾಲ್ಕೈದು ಬಾರಿ ಈ ಟೋಲ್ ಮೂಲಕ ಸಂಚರಿಸಿದರೆ ಅವನು ಸಂಪಾದಿಸಿದ ಹಣವನ್ನೆಲ್ಲಾ ಟೋಲ್‌ಗೆ ಸುರಿದು ಬರೀ ಕೈಲಿ ಮನೆಗೆ ಹೋಗಬೇಕಾಗುತ್ತದೆ. ಚುನಾವಣೆ ಫಲಿತಾಂಶ ಬಂದ ನಂತರ ಸಂಸತ್ತಿನಲ್ಲಿ ನಾವು ಶುಲ್ಕ ಏರಿಕೆ ಮತ್ತು ಸರ್ವೀಸ್ ರಸ್ತೆ ಮಾಡದೇ ಇರುವುದರ ಬಗ್ಗೆ ಹೋರಾಟ ಮಾಡುತ್ತೇವೆ ಎಂದರು. ಇಷ್ಟೆಲ್ಲಾ ಹೋರಾಟ ಪ್ರತಿಭಟನೆ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ತನ್ನ ಅಸಾಯಕತೆ ತೋರಿರುವುದು ಸರಿಯಲ್ಲ ಎಂದರು.
ಶಾಂತಿಯುತ ಹೋರಾಟ
ಮಹಾರಾಷ್ಟ್ರದಲ್ಲಿ ಟೋಲ್‌ಗಳ ಮೇಲೆ ಆಕ್ರಮಣ ಆದಂತೆ ಇಲ್ಲಿ ಆಗಬಾರದು. ನಾವು ಶಾಂತಿಯಿಂದ ಹೋರಾಟ ಮಾಡುತ್ತೇವೆ ಎಂದು ದೇವೇಗೌಡ ತಿಳಿಸಿದರು. ಪ್ರತಿಭಟನೆ ಸಂದರ್ಭದಲ್ಲಿ ಜೆಡಿಎಸ್ ಹಂಗಾಮಿ ರಾಜ್ಯಾಧ್ಯಕ್ಷ ಎಂ.ಎಸ್. ನಾರಾಯಣರಾವ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಂ, ನಗರ ಅಧ್ಯಕ್ಷ ಆರ್. ರತನ್‌ಸಿಂಗ್, ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ, ಶಿಡ್ಲಘಟ್ಟ ಶಾಸಕ ರಾಜಣ್ಣ, ಪುಲಿಕೇಶಿ ನಗರ ಶಾಸಕ ಎ. ಶ್ರೀನಿವಾಸ್, ಜಿಲ್ಲಾ ಖಜಾಂಚಿ ಬಿ.ಮುನೇಗೌಡ ಹಾಗೂ ದೇವನಹಳ್ಳಿ ತಾಲೂಕಿನ ಎಲ್ಲ ಪ್ರಮುಖ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಸಂವಿಧಾನ ಬಾಹಿರ
ಕನ್ನಡ ಸಂಘಟನೆಗಳ ಪ್ರತಿನಿಧಿಗಳು ಮಾತನಾಡಿ ಟೋಲ್ ದರ ನಾಲ್ಕು ಪಟ್ಟು ಹೆಚ್ಚು ಮಾಡಿರುವುದು ಸಂವಿಧಾನಬಾಹಿರ. ಆದ್ದರಿಂದ ನವಯುಗ ಟೋಲ್ ಕಂಪನಿ ಜೊತೆಯ ಒಪ್ಪಂದ ರದ್ದು ಮಾಡಿ ಆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು, ಟೋಲ್ ದರ ನಿಯಂತ್ರಣ ಸರ್ಕಾರವೇ ನಿರ್ವಹಿಸಬೇಕು ಎಂದು ಒತ್ತಾಯಿಸಿದರು. ಪೊಲೀಸರ ಸರ್ಪಗಾವಲಿದ್ದರೂ ಕಾರ್ಯಕರ್ತರೊಬ್ಬರು ಎರಡು ಟೋಲ್‌ಗಳಲ್ಲಿನ ಗಾಜುಗಳನ್ನು ಪುಡಿಪುಡಿ ಮಾಡಿದರು. ನಂತರ ಆತನನ್ನು ಬಂಧಿಸಲಾಯಿತು. ರಾಜ್ಯ ವಾಹನ ಚಾಲಕರ ಸಂಘದ ಅಧ್ಯಕ್ಷ ಜಿ. ನಾರಾಯಣಸ್ವಾಮಿ, ಕಾರ್ಯದರ್ಶಿ ಗುರುಮೂರ್ತಿ ಮಾತನಾಡಿದರು.