943 ಮಂದಿ ಡಿಎಲ್ ರದ್ದು ; ಸಾರಿಗೆ ಇಲಾಖೆಗೆ ಸೂಚನೆ
ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸಿದ 943 ವಾಹನ ಸವಾರರು, ಚಾಲಕರ ವಿರುದ್ಧ ಪ್ರಕರಣ ದಾಖಲಿಸಿರುವ ಸಂಚಾರ ಪೊಲೀಸರು ಚಾಲನಾ ಪರವಾನಗಿ (ಡಿಎಲ್) ರದ್ದುಗೊಳಿಸಲು ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡಿದ್ದಾರೆ.
ಶನಿವಾರ ರಾತ್ರಿ 9ರಿಂದ 2 ಗಂಟೆವರೆಗೂ ನಗರದ 129 ಸ್ಥಳಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ 12,517 ವಾಹನಗಳ ತಪಾಸಣೆ ನಡೆಸಲಾಗಿದೆ. 2 ಬಸ್, 11 ಲಾರಿ, 58 ಆಟೋ, 174 ಕಾರು, 667 ದ್ವಿಚಕ್ರ ವಾಹನಗಳು, 5 ಮ್ಯಾಕ್ಸಿಕ್ಯಾಬ್ ಮತ್ತು 26 ಟೆಂಪೋ ವಾಹನಗಳು ಇವೆ. ಒಟ್ಟು 939 ಪುರುಷರು ಹಾಗೂ ನಾಲ್ವರು ಮಹಿಳಾ ಚಾಲಕರು ಸಿಕ್ಕಿ ಬಿದ್ದಿದ್ದಾರೆ. ಪೀಣ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೇ 67 ಪ್ರಕರಣಗಳು ದಾಖಲಾಗಿವೆ. 16 ಚಾಲಕರಲ್ಲಿ ಗರಿಷ್ಠ 550 ಎಂಎಲ್ ಮದ್ಯಪಾನ ಪತ್ತೆಯಾಗಿದೆ. ಎಲ್ಲಾ ವಾಹನ ಸವಾರರ ಡಿಎಲ್ ರದ್ದುಗೊಳಿಸಲು ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡಲಾಗಿದೆ.
24 ವಾಹನ ತೆರವು
ಬೆಂಗಳೂರು: ದುರಸ್ತಿ ಇರುವ, ನಿರುಪಯುಕ್ತ ವಾಹನಗಳನ್ನು ಪಾದಚಾರಿ ಮಾರ್ಗದಲ್ಲಿ ಹಾಗೂ ರಸ್ತೆಯಲ್ಲಿ ನಿಲ್ಲಿಸಿರುವ ಬಸ್ಸು, ಟೆಂಪೋ, ಕಾರು, ಆಟೋ ದ್ವಿಚಕ್ರ ವಾಹನಗಳು ಸೇರಿದಂತೆ 24 ವಾಹನಗಳನ್ನು ಸಂಚಾರ ಪೊಲೀಸರು ಶನಿವಾರ ತೆರವುಗೊಳಿಸಿದ್ದಾರೆ.
ಇಲಾಖಾ ಪರೀಕ್ಷೆಗೆ ಅರ್ಜಿ ಆಹ್ವಾನ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು 2014ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗೆ ಅರ್ಹ ಸರ್ಕಾರಿ ನೌಕರರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಮೇ 8 ರಿಂದ ಜೂನ್ 6ರೊಳಗಾಗಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಯಾವುದೇ ಗಣಕೀಕೃತ ಅಂಚೆ ಕಚೇರಿ ಶಾಖೆಗಳಲ್ಲಿ ಶುಲ್ಕ ಪಾವತಿಸಲು ಜೂನ್ 7 ಅಂತಿಮ ದಿನವಾಗಿದೆ.