ನೀರಿನ ಸಂಪ್ಗೆ ಬಿದ್ದು 3 ವರ್ಷದ ಬಾಲಕ ಸಾವು
ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಬಳಿ ನೀರಿನ ಸಂಪಿಗೆ ಬಿದ್ದು 3 ವರ್ಷದ ಬಾಲಕ ಮೃತಪಟ್ಟ ಘಟನೆ ಪೀಣ್ಯ ಮಾರುತಿನಗರದಲ್ಲಿ ನಡೆದಿದೆ.
ಆಂಧ್ರಪ್ರದೇಶ ಅನಂತಪುರ ಮೂಲದ ಮಲ್ಲಿಕಾರ್ಜುನ ಹಾಗೂ ರಾಜೇಶ್ವರಿ ದಂಪತಿ ಪುತ್ರ ಯಶವಂತ (3) ಮೃತ ಬಾಲಕ.
ಮಲ್ಲಿಕಾರ್ಜನ ಅವರು ಗೊರಗುಂಟೆಪಾಳ್ಯದಲ್ಲಿರುವ ಗಾರ್ಮೆಂಟ್ಸ್ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಪತ್ನಿ ರಾಜೇಶ್ವರಿ ಅದೇ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮೃತಪಟ್ಟಿರುವ ಯಶವಂತ ಹಾಗೂ ಮಾತು ಬಾರದ ಮತ್ತೊಬ್ಬ ಮಗನನ್ನು ನೋಡಿಕೊಳ್ಳಲು ಊರಿನಿಂದ ಅಜ್ಜಿಯನ್ನು ಕರೆತಂದಿದ್ದರು.
ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಅಜ್ಜಿ ನೀರು ಕುಡಿಯಲು ಹೋಗಿದ್ದಾರೆ. ಈ ವೇಳೆ ಯಶವಂತ ಆಟವಾಡುತ್ತಾ ನಿರ್ಮಾಣ ಹಂತದ ಕಟ್ಟಡದ ಬಳಿ ತೆರಳಿ ಆಕಸ್ಮಿಕವಾಗಿ ನೀರಿನ ಸಂಪಿಗೆ ಬಿದ್ದಿದ್ದಾನೆ.
ಹೊರಗೆ ಬಂದ ಅಜ್ಜಿ ಮಗುವಿಗಾಗಿ ಹುಡುಕಾಟ ನಡೆಸಿದರು ಸಿಕ್ಕಿಲ್ಲ. ಕೆಲಸದಿಂದ ಬಂದ ಮಲ್ಲಿಕಾರ್ಜುನ ಸುತ್ತ ಮುತ್ತ ಹುಡುಕಾಟ ನಡೆಸಿ ನಿರ್ಮಾಣ ಹಂತದ ಕಟ್ಟಡದ ಸಂಪಿನ ಬಳಿ ತೆರಳಿದಾಗ ಯಶವಂತನ ಶವ ಪತ್ತೆಯಾಗಿದೆ.
ಆನಂದ ಬಾಬು ಎಂಬುವರಿಗೆ ಸೇರಿದ ಕಟ್ಟಡದಲ್ಲಿ ಶನಿವಾರ ಮಧ್ಯಾಹ್ನದವರೆಗೂ ಕೆಲಸ ಮಾಡಿದ ಕಾರ್ಮಿಕರು ಹೊರಟು ಹೋಗಿದ್ದರು. ಘಟನೆ ಸಂಬಂಧ ಕಟ್ಟಡ ಮಾಲೀಕ ಆನಂದಬಾಬು ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷ್ಯತನ ಪ್ರಕರಣ ದಾಖಲಿಸಲಾಗಿದೆ.