ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದಲಿತರ ಮನೆ ತೆರವು: ಧರಣಿ

Rashmi Kasaragodu
Updated On : 13 May 2014, 2:37 am

ಕ.ಪ್ರ.ವಾರ್ತೆ    ಚನ್ನಪಟ್ಟಣ    ಮೇ 12
ಹೊಂಗನೂರು ಗ್ರಾಮದಲ್ಲಿ ಅಕ್ರಮವಾಗಿ ದಲಿತರ ಮನೆಗಳನ್ನು ತೆರವು ಗೊಳಿಸಲು ಮುಂದಾದ ತಾಲೂಕು ಆಡಳಿತವು ದಲಿತರ ಮೇಲೆ ದೌರ್ಜನ್ಯ ನಡೆಸಿದೆ ಎಂದು ಆರೋಪಿಸಿ ಗ್ರಾಮದ ದಲಿತ ಸಂಘ ಹಾಗೂ ತಾಲೂಕು ದಲಿತಪರ ಸಂಘಟನೆಗಳು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದವು. ಮೇ. 9ರಂದು ತಹಸೀಲ್ದಾರ್ ಮತ್ತು ಗ್ರಾಮಾಂತರ
ವೃತ್ತ ನಿರೀಕ್ಷಕರು ಗ್ರಾಮಕ್ಕೆ ಭೇಟಿ ನೀಡಿ, ದಲಿತರ ಮೇಲೆ ದೈಹಿಕ ಹಲ್ಲೆ ಮಾಡಿರುವುದಲ್ಲದೆ, ಅಂಬೇಡ್ಕರ್ ಭಾವಚಿತ್ರ ಮತ್ತು ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಅಂಬೇಡ್ಕರ್ ಭವನ ತೆರವು ಮಾಡುವ ಮೂಲಕ ದಲಿತರ ಆತ್ಮಾಭಿಮಾನಕ್ಕೆ ಧಕ್ಕೆ ಮಾಡಿದ್ದು, ಕೂಡಲೇ ಈ ಇಬ್ಬರು ಅಧಿಕಾರಿಗಳನ್ನು ಅಮಾನತ್ತಿನಲ್ಲಿಟ್ಟು, ಉನ್ನತ ಮಟ್ಟದ ತನಿಖೆಗೆ ಆದೇಶಿಸ ಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅನ್ಯರಿಗೆ ಜಮೀನು ನೀಡುವ ಹುನ್ನಾರ: ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜೀವಿಕಾ ಸಂಚಾಲಕ ಪಿ.ಜೆ.ಗೋವಿಂದರಾಜು, ತಾಲೂಕು ಆಡಳಿತ ದಲಿತರ ಜತೆ ಚಲ್ಲಾಟವಾಡುತ್ತಿದ್ದು, ಯಾವುದೇ ಆದೇಶ ಇಲ್ಲದಿದ್ದರೂ ಅಧಿಕಾರಿಗಳು ನಿಯಮಬಾಹೀರವಾಗಿ ಸ್ಥಳಕ್ಕೆ ತೆರಳಿ ದಲಿತರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಾಖಲೆಗಳಿವೆ: 700 ವರ್ಷಗಳಿಂದ ಗ್ರಾಮದಲ್ಲಿ ದಲಿತರು ವಾಸವಾಗಿರುವ ಬಗ್ಗೆ ದಾಖಲೆಗಳಿದ್ದು, ದಲಿತರು ವಾಸಿಸುತ್ತಿರುವ 56 ಗುಂಟೆ ಭೂಮಿಯಲ್ಲಿ ವಾಸವವಾಗಿದ್ದು ಇದನ್ನು ಮಂಜೂರು ಮಾಡಿಕೊಡುವಂತೆ ತಾಲೂಕು ಮತ್ತು ಜಿಲ್ಲಾಡಳಿತಕ್ಕೆ 1983 ರಿಂದ ಮನವಿ ಸಲ್ಲಿಸಿ ಕೊಂಡು ಬರಲಾಗುತ್ತಿದೆ ಆದರೆ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಆದರೆ ದೇವಾಲಯ ಟ್ರಸ್ಟ್‌ಗೆ 2003ರಲ್ಲಿ ಏಕಾಏಕಿ 1.18 ಏಕರೆ ಭೂಮಿ ಮಂಜೂರು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವಾಲಯ ಟ್ರಸ್ಟ್‌ಗೆ ನೀಡಿರುವ ಜಾಗವನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದ್ದು, ಈ ಸ್ಥಳದಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಇದನ್ನು ಪರಿಗಣನೆ ಮಾಡದ ಸರ್ವೇ ಅಧಿಕಾರಿಗಳು ದಲಿತರ ಜಮೀನು ಕಸಿಯಲು ಮುಂದಾಗಿದ್ದಾರೆ. ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಅಧಿಕಾರಿಗಳನ್ನು ಕೂಡಲೇ ಎತ್ತಂಗಡಿ ಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಕರೆಸಲು ಪಟ್ಟು: ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದ ತಹಸೀಲ್ದಾರ್ ಅರುಣ ಪ್ರಭ, ಸೋಮವಾರ ಈ ವಿವಾದಕ್ಕೆ ಸಂಬಂಧಿಸಿದಂತೆ ನಡೆಯಬೇಕಿದ್ದ ಸಭೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಟ್ಟಿದ್ದು ಮಂಗಳವಾರ ಬೆಳಗ್ಗೆ 11 ಗಂಟೆಗೆ ಸಭೆ ನಿಗದಿ ಪಡಿಸಲಾಗಿದೆ. ಶಾಸಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ವಿವಾದಕ್ಕೆ ಸಂಬಂಧಿಸಿದಂತೆ ಪರಿಹಾರ ಕಲ್ಪಿಸಲಾಗುವುದು. ಯಾವುದೇ ಕಾರಣಕ್ಕೂ ದಲಿತರಿಗೆ ಅನ್ಯಾಯ ವಾಗದಂತೆ ನೋಡಿ ಕೊಳ್ಳುವುದಾಗಿ ಭರವಸೆ ನೀಡದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಪ್ರತಿಭಟನಾ ಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ನಮ್ಮ ಸಮಸ್ಯೆ ಪರಿಹರಿಸುವ ಭರವಸೆ ನೀಡುವ ವರೆಗೆ ನಾವು ಸ್ಥಳದಿಂದ ಕದಲುವುದಿಲ್ಲ ಎಂದು ತಿಳಿಸಿ, ತಹಸೀಲ್ದಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತಹಸೀಲ್ದಾರ್ ಮತ್ತು ದಲಿತ ಮುಖಂಡರ ನಡುವೆ ಈ ಸಂಬಂಧ ಸಂಧಾನ ಸಭೆ ನಡೆಯಿತಾದರೂ ಒಮ್ಮತದ ನಿರ್ಧಾರಕ್ಕೆ ಬರುವಲ್ಲಿ ವಿಫಲಗೊಂಡಿತು. ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವ ವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ದಲಿತ ಮುಖಂಡರಾದ ವೆಂಕಟಾಚಲಯ್ಯ, ಸಿದ್ದರಾಮಯ್ಯ, ಮಾಜಿ ಜಿ.ಪಂ ಸದಸ್ಯ ಸದಾನಂದ, ಸೋಮಶೇಖರ್ ಮತ್ತಿತ ರರು ಪ್ರತಿಭಟನೆ ನೇತೃತ್ವವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement