ಕಲಾವಿದರಿಂದ ಅರ್ಜಿ ಆಹ್ವಾನ
ರಾಮನಗರ: ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ವ್ಯಾಪ್ತಿಯ ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಸುಗಮ ಸಂಗೀತ, ನೃತ್ಯ, ಕಥಾಕೀರ್ತನ ಮತ್ತು ಗಮಕ ಕಲಾಪ್ರಕಾರಗಳಿಗೆ ಸಂಬಂಧಿಸಿದಂತೆ, 18 ರಿಂದ 30 ವರ್ಷದೊಳಗಿನ ಯುವ ಕಲಾವಿದರಿಂದ ಸಂಕ್ಷಿಪ್ತ ಪರಿಚಯ ಹಾಗೂ ಭಾವಚಿತ್ರ ಒಳಗೊಂಡಂತೆ ಒಂದು ಪುಸ್ತಕ ಹೊರತರಲು ಅಕಾಡೆಮಿ ತೀರ್ಮಾನಿಸಿದೆ.ಅಕಾಡೆಮಿ ವ್ಯಾಪ್ತಿಯ ಕಲಾಪ್ರಕಾರಗಳಿಗೆ ಸಂಬಂಧಿಸಿದಂತೆ, ಯುವ ಕಲಾವಿದರ ಹೆಸರು, ವಿಳಾಸ (ದೂರವಾಣಿ, ಮೊಬೈಲ್, ಇ-ಮೇಲ್), ಜನ್ಮದಿನಾಂಕ ಪ್ರಮಾಣ ಪತ್ರ, ಗುರುಗಳ ಹೆಸರು, ವಿಳಾಸ, ವಿದ್ಯಾರ್ಹತೆ, ಕಲಾಕ್ಷೇತ್ರದಲ್ಲಿ ಪಡೆದ ಅರ್ಹತೆ, ಅನುಭವ, ಸಾಧನೆ ಇತ್ಯಾದಿಗಳ ಬಗ್ಗೆ ಸಂಕ್ಷಿಪ್ತವಾಗಿ ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ, ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560 002, ದೂ. 080-22215072 ಇಲ್ಲಿಗೆ ಮೇ 31ರೊಳಗೆ ಕಳುಹಿಸಬೇಕೆಂದು ಅಕಾಡೆಮಿಯ ರಿಜಿಸ್ಟ್ರಾರ್ ಜಿ.ನರಸಿಂಹಮೂರ್ತಿ ತಿಳಿಸಿದ್ದಾರೆ.
ಅಂಧರ ಶಾಲೆಗೆ
ನೂರಕ್ಕೆ ನೂರು
ರಾಮನಗರ: ನಗರದ ಹೊರ ವಲಯದಲ್ಲಿರುವ ಬಾಲಗಂಗಾಧರನಾಥ ಅಂಧರ ಉಚಿತ ವಸತಿಯುತ ಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಬಂದಿದೆ. ಒಟ್ಟು 37 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಈ ಪೈಕಿ 6 ಉನ್ನತ ಶ್ರೇಣಿ ಮತ್ತು 31 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ನಾಗರತ್ನಮ್ಮ 554, ಬಿ.ಪಿ.ಸತೀಶ 546, ಪ್ರಕಾಶ 545, ರಾಕೇಶ ಮಧು ತೇಲಿ 538, ಜಿ.ಸರಸ್ವತಿ 532, ವಿ.ಸುನಿತಾ 532 ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಶಾಲಾ ಕಾರ್ಯದರ್ಶಿ ಅನ್ನದಾನೇಶ್ವರನಾಥ ಸ್ವಾಮೀಜಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಅಭಿನಂದಿಸಿದ್ದಾರೆ.
ಪಟೇಲ್‌ಶಾಲೆಗೆ
ಶೇ.96 ಫಲಿತಾಂಶ
ರಾಮನಗರ: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಗರದ ಪಟೇಲ್ ಆಂಗ್ಲಶಾಲೆಗೆ ಶೇ.96ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದಿದ್ದ ಒಟ್ಟು 22 ವಿದ್ಯಾರ್ಥಿಗಳ ಪೈಕಿ 4 ಅತ್ಯುನ್ನತ ಶ್ರೇಣಿ, 10 ಪ್ರಥಮ ದರ್ಜೆ ಹಾಗೂ 7 ವಿದ್ಯಾರ್ಥಿಗಳು ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದರೆ ಒಬ್ಬ ವಿದ್ಯಾರ್ಥಿ ಅನುತ್ತೀರ್ಣನಾಗಿದ್ದಾನೆ ಎಂದು ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಸಿ.ರಾಜು ತಿಳಿಸಿದ್ದಾರೆ.
ಪುರಷನ ಶವ ಪತ್ತೆ
ಸೂಲಿಬೆಲೆ: ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾಪುರ ಗೇಟ್‌ಬಳಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಸುಮಾರು 40 ರಿಂದ 45 ವರ್ಷವಾಗಿದ್ದು, ಎತ್ತರ 5.3 ಅಡಿ, ದುಂಡು ಮುಖ, ಎಣ್ಣೆಗೆಂಪು ಬಣ್ಣ, ದೃಢಕಾಯ ಶರೀರ, ಹಣೆಯ ಮೇಲೆ ಮತ್ತು ಬಲ ಮೊಣಕೈ ಮೇಲೆ ತರಚಿದ ಗಾಯವಾಗಿರುತ್ತದೆ. ನೀಲಿ ಟೀ ಶರ್ಟ್, ಕಪ್ಪು ಪ್ಯಾಂಟ್ ಮತ್ತು ಅರ್ಧ ತೋಳಿನ ಬಳಿಯ ಬನಿಯಾನ್ ಧರಿಸಿರುತ್ತಾನೆ. ವಾರಸುದಾರರಿದ್ದಲ್ಲಿ ನಂದಗುಡಿ ಪೊಲೀಸ್ ಠಾಣೆ ದೂ.080-27961250 ಸಂಪರ್ಕಿಸಲು ಕೋರಿದೆ.
ತರಬೇತಿ ಶಿಬಿರ
ಮಾಗಡಿ: ಸಿದ್ದರಾಮೇಶ್ವರ ಎಜುಕೇಷನ್ ಅಂಡ್ ಚಾರಿಟಬಲ್ ಟ್ರಸ್ಟ್ ಮತ್ತು ಸಂಕಲ್ಪ ವಿದ್ಯಾಕೇಂದ್ರ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಂತರ ಮುಂದೇನು? ಎಂಬ ವಿಚಾರದಲ್ಲಿ ಭವಿಷ್ಯದಲ್ಲಿ ಉತ್ತಮ ಶಿಕ್ಷಣ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಕಾರಿಯಾಗುವ ತರಬೇತಿ ಶಿಬಿರ 22 ರಿಂದ ಆರಂಭಗೊಳ್ಳಲಿದೆ. ಆಸಕ್ತ ವಿದ್ಯಾರ್ಥಿಗಳು ಮೇ.18ರೊಳಗೆ ಇಲ್ಲಿನ ಎನ್. ಇ.ಎಸ್ ಬಡಾವಣೆಯಲ್ಲಿರುವ ಸಂಕಲ್ಪ ವಿದ್ಯಾ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ಮಾಹಿತಿಗೆ, ಮೊ.9742015799.
ಜೀವ ಉಳಿಸಿದ ವಕೀಲ
ಮಳವಳ್ಳಿ: ವಕೀಲರೊಬ್ಬರ ಸಮಯ ಪ್ರಜ್ಞೆಯಿಂದ ವ್ಯಕ್ತಿಯೊಬ್ಬ ಪಟ್ಟಣದ ಮದ್ದೂರು-ಬೆಂಗಳೂರು ಹೆದ್ದಾರಿಯಲ್ಲಿ ಕುಸಿದುಬಿದ್ದು ಕ್ಷಣಮಾತ್ರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮಂಗಳವಾರ ಮುಂಜಾನೆ 6ರ ಸುಮಾರಿನಲ್ಲಿ ಪಟ್ಟಣದ ಗಂಗಾಮತ ಬೀದಿಯ ವಕೀಲರಾದ ರಮೇಶ್ ಜಾಗಿಂಗ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು.