ನೀರು ಯೋಜನೆ ಅವ್ಯವಹಾರ ತನಿಖೆಗೆ
ಕ.ಪ್ರ.ವಾರ್ತೆ ಚನ್ನಪಟ್ಟಣ ಮೇ 13
ತಾಲೂಕಿನಾದ್ಯಂತ ಕುಡಿಯುವ ನೀರಿಗಾಗಿ ಕೈಗೊಂಡಿರುವ ಎನ್‌ಆರ್‌ಡಿಡಬ್ಲ್ಯೂಪಿ ಯೋಜನೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದ್ದು ಈ ಸಂಬಂಧ ತನಿಖೆಗೆ ಆದೇಶಿಸುವುದಾಗಿ ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ಕಾರ್ಯಪಡೆ ಸಭೆಯಲ್ಲಿ ಮಾತನಾಡಿ, ಈ ಯೋಜನೆಯಡಿ ತಾಲೂಕಿಗೆ ರು.10 ಕೋಟಿಗೂ ಅಧಿಕ ಹಣ ಮಂಜೂರಾಗಿದ್ದು, ಈ ಹಣವನ್ನು ಅಧಿಕಾರಿಗಳು ದುರ್ಬಳಕೆ ಮಾಡಿದ್ದರಿಂದ ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಅಭಿಪ್ರಾಯಪಟ್ಟರು.
ತಾಲೂಕಿನ ಮಾಕಳಿ, ಅಬ್ಬೂರು, ಜೆ. ಬ್ಯಾಡರಹಳ್ಳಿ, ಯಲಿಯೂರು ಮೊದಲಾದ ಗ್ರಾಮಗಳಲ್ಲಿ ಹಣ ಪಾವತಿಯಾಗಿದ್ದರೂ, ಕಾಮಗಾರಿ ಪೂರ್ಣಗೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ, ಕೆಲಸ ಮಾಡದೆ ಬಿಲ್ ಪಾವತಿ ಮಾಡಿರುವ ಅಧಿಕಾರಿಗಳ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ಅನ್ಯಾಯ ಅಕ್ರಮ ಸಹಿಸುವುದಿಲ್ಲ: ಸರ್ಕಾರಿ ಯೋಜನೆಗಳನ್ನ ಸಮರ್ಪಕವಾಗಿ ಜನತೆಗೆ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿ. ಯೋಜನೆಗಳ ಅನುಷ್ಠಾನದಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ನಾನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದ ಯೋಗೇಶ್ವರ್ ಪಪಂ ಎಂಜಿನಿಯರಿಂಗ್ ವಿಭಾಗದಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೇವಲ 1.30 ಕಿಮೀ ಪೈಪ್‌ಲೈನ್ ಮಾಡಿ ರು.33 ಲಕ್ಷ ಹಣ ಡ್ರಾಮಾಡಿರುವ, ಸಾಕಷ್ಟು ಕಡೆ ಪಂಪು ಮೋಟರ್‌ಗಳನ್ನು ಅಳವಡಿಸದೆ ಬಿಲ್ ಪಾವತಿ ಮಾಡಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. 10 ಕೋಟಿ ಹಣವನ್ನು ಅಧಿಕಾರಿಗಳು ದುರ್ಬಳಕೆ ಮಾಡಿದ ಪರಿಣಾಮ, ಟಾಸ್ಕ್‌ಪೋರ್ಸ್‌ನಲ್ಲಿರುವ ರು. 50 ಲಕ್ಷ ಗಳಲ್ಲಿ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದೇವೆ ಎಂದು ವಿಷಾದಿಸಿದರು.
ಕೇಳದಿದ್ದರೂ ಕಾಮಗಾರಿ: ತಾಲೂಕಿನ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ, ಯಾರೂ ಕೇಳದಿದ್ದರೂ ಒಂದೇ ಊರಿಗೆ ಎರಡೆರಡು ಪ್ಯಾಕೇಜ್ ನೀಡಿರುವುದು ಯಾಕೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡ ಶಾಸಕ ಅನಗತ್ಯವಾಗಿ ಕಾಮಗಾರಿ ಕೈಗೊಳ್ಳಲು ಮಂಜೂರು ಮಾಡಿರುವ ಹಣವನ್ನು ಕೂಡಲೇ ಅಗತ್ಯವಿರುವ ಗ್ರಾಮಗಳಿಗೆ ವರ್ಗಾವಣೆ ಮಾಡುವಂತೆ ತಾಕೀತು ಮಾಡಿದರು. ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಬೇಕಾಬಿಟ್ಟಿ ಕಾಮಗಾರಿ ನಿರ್ವಹಣೆ ಮಾಡಿದ್ದು, ಅಧಿಕಾರಿಗಳ ತಪ್ಪಿನಿಂದಾಗಿ ಸರ್ಕಾರಿ ಹಣ ದುರ್ಬಳಕೆಯಾಗುವ ಜತೆಗೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೇ ಉಳಿದಿದೆ ಎಂದು ಕಿಡಿಕಾರಿದರು.
ಕ್ರಿಯಾ ಯೋಜನೆ: ಕುಡಿಯುವ ನೀರಿನ ಕಾರ್ಯಪಡೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಇರುವ ಗ್ರಾಮಗಳಲ್ಲಿ ಕೈಗೊಳ್ಳ ಬೇಕಾದ ಕುಡಿಯುವ ನೀರಿನ ಕಾಮಗಾರಿಯ ಬಗ್ಗೆ ಗ್ರಾಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಿದ ಯೋಗೇಶ್ವರ್ ಅಗತ್ಯವಿರುವ ಗ್ರಾಮಗಳಿಗೆ ಕಾರ್ಯಪಡೆ ಅನುದಾನ ನೀಡಲಿದ್ದು ಸಣ್ಣ-ಪುಟ್ಟ ಸಮಸ್ಯೆ ಇದ್ದಲ್ಲಿ ಪಂಚಾಯಿತಿ ಮಟ್ಟದಲ್ಲೇ ಬಗೆಹರಿಸಿ ಕೊಳ್ಳುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಜಿ.ಪಂ ಇಂಜಿನಿಯರಿಂಗ್ ವಿಭಾಗದ ಎಇಇ ಶ್ರೀನಿವಾಸ್ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವುದಕ್ಕಾಗಿ ತಾಲೂಕಿಗೆ ರು.10 ಲಕ್ಷ ಹಣ ಬಿಡುಗಡೆಗೊಂಡಿದ್ದು, ನಿಯಮಾನುಸಾರ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವವರಿಂದ ಟೆಂಡರ್ ಕರೆದು ಕುಡಿಯುವ ನೀರು ಪೂರೈಕೆಗೆ ಮುಂದಾಗಬೇಕೆಂದು ಸೂಚಿಸಿದರು.
ಸಭೆಯಲ್ಲಿ ತಾಪಂ ಪ್ರಭಾರ ಅಧ್ಯಕ್ಷ ಭಾನುಪ್ರಕಾಶ್, ಕಾರ್ಯನಿರ್ವಹಣಾಧಿಕಾರಿ ಜಯರಂಗ, ತಹಸೀಲ್ದಾರ್ ಅರುಣಪ್ರಭ ಮತ್ತಿತರರು ಉಪಸ್ಥಿತರಿದ್ದರು.