ವಿದ್ಯುತ್ ದರ ಏರಿಕೆ ಖಂಡಿಸಿ ಪ್ರತಿಭಟನೆ
ಆನೇಕಲ್ಲು: ರೈತ ಪರ ಹಾಗೂ ಜನಪರ ಆಡಳಿತ ನೀಡುವ ಭರವಸೆಯೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರ ತನ್ನಅಸಲಿತನವನ್ನು ಜನತೆ ಮೇಲೆ ಹೇರುತ್ತಿರುವುದು ಖಂಡನೀಯ ಎಂದು ಭಾರತೀಯ ಜನಸೇವಾ ಸಂಘಟನೆ ರಾಜ್ಯಾಧ್ಯಕ್ಷ ಡಿ.ವೆಂಕಟೇಶ್ ಕಿಡಿ ಕಾರಿದರು.
ರಾಜ್ಯ ಸರ್ಕಾರ ದಿಢೀರ್ ಎಂದು ಸಾರಿಗೆ ಹಾಗೂ ವಿದ್ಯುತ್ ದರ ಏರಿಸಿರುವುದನ್ನು ಖಂಡಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದ್ದು, ಜನತೆ ಸರ್ಕಾರದ ವಿರುದ್ಧ ತಿರುಗಿ ಬೀಳುವ ದಿನ ದೂರವಿಲ್ಲ ಎಂದು ಎಚ್ಚರಿಸಿದರು.
ಈ ಹಿಂದಿನ ಸರ್ಕಾರಗಳು ಬೆಲೆ ಏರಿಕೆ ಅನಿವಾರ್ಯವಾದಾಗ ಜನತೆಗೆ ಕನಿಷ್ಠ ಮನವಿ ಮಾಡಿ ಅಸಹಾಯಕತೆ ತೋರುತ್ತಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಹಿಟ್ಲ ರ್ ಧೋರಣೆಯಂತೆ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದೆ. ಡೀಸೆಲ್ ಮೇಲಿನ ತೆರಿಗೆ ಹಾಗೂ ಜನ ಸಾಮಾನ್ಯರು ಬಳಸುವ ವಿದ್ಯುತ್ ದರ ಇಳಿಸದಿದ್ದಲ್ಲಿ ಸಂಘಟನೆ ಪ್ರತಿಭಟನೆ ತೀವ್ರಗೊಳಿಸುತ್ತದೆ ಎಂದರು.
ಪುರಸಭೆ ಮಾಜಿ ಸದಸ್ಯ ಬಿ.ಪಿ.ಮರಿಯಪ್ಪ ಮಾತನಾಡಿ, ಸರ್ಕಾರ ಕೋಟ್ಯಂತರ ರುಪಾಯಿ ಲಾಭ ಪಡೆವ ಕೈಗಾರಿಕೆಗಳಿಗೆ ಸೋಡಿ ದರದಲ್ಲಿ ನಿರಂತರ ವಿದ್ಯುತ್ ಪೂರೈಸುತ್ತದೆ.
ಗ್ರಾಮೀಣ ಭಾಗದಲ್ಲಿ ಲೋಡ್ ಶೆಡ್ಡಿಂಗ್ ಮಾಡಿ, ವಿದ್ಯುತ್ ಸರಬರಾಜು ಮಾಡದೇ ತಾರತಮ್ಯ ನೀತಿ ಅನುಸರಿಸುತ್ತಿದೆ. ಸರ್ಕಾರ ತನ್ನ ದ್ವಿಮುಖ ನೀತಿ ಬದಿಗಿಟ್ಟು ಜನಪರ ಆಡಳಿತ ನೀಡಲಿ ಎಂದು ಕಿವಿಮಾತು ಹೇಳಿದರು.
ಪಿವಿಸಿಎಂ ರಾಜ್ಯ ಕಾರ್ಯದರ್ಶಿ ಆದೂರು ಪ್ರಕಾಶ್ ಮತ್ತಿತರರು ಮಾತನಾಡಿದರು.