ಹಲ್ಲೆ ಮಾಡಿ ಕುಟುಂಬಕ್ಕೆ ಬಹಿಷ್ಕಾರ!
ಕ.ಪ್ರ.ವಾರ್ತೆ ನಾಗಮಂಗಲ ಮೇ 14
ರಸ್ತೆ, ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಬಿಂಡಿಗನವಿಲೆ ಹೋಬಳಿ ರಾಮಚಂದ್ರ ಅಗ್ರಹಾರ ಗ್ರಾಮಸ್ಥರು ಕುಟುಂಬಮೊಂದನ್ನು ಬಹಿಷ್ಕರಿಸಿ, ನಂತರ ಕಬ್ಬಿಣದ ಸಲಾಕೆ ಮತ್ತು ದೊಣ್ಣೆಯಿಂದ ಕುಟುಂಬದ 6 ಮಂದಿ ಮೇಲೆ ಹಲ್ಲೆ ನಡೆಸಿದ್ದಾರೆ.
ಗ್ರಾಮದ ಕೆಂಪೇಗೌಡ (70), ಪತ್ನಿ ಹುಚ್ಚಮ್ಮ (65), ಮಗ ಪಾಪೇಗೌಡ (38), ಮಗಳು ಲೀಲಮ್ಮ(50), ಮೊಮ್ಮಗಳು ಪುಷ್ಪ(28) ಹಾಗೂ ಐಶ್ವರ್ಯ (9) ಹಲ್ಲೆಗೊಳಗಾದವರು. ಈಗ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಿಡ್ಡೇಗೌಡ, ಬೋರೇಗೌಡ ಹಾಗೂ ನಂಜಪ್ಪ ಎಂಬ ಮೂರು ಕುಟುಂಬದ 24 ಮಂದಿ ಸೇರಿ ಹಲ್ಲೆ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹಲ್ಲೆಗೊಳಗಾದವರು ಆಸ್ಪತ್ರೆ ಸೇರಿದ ನಂತರ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಈ ರಸ್ತೆ, ಜಮೀನು ವಿವಾದ ಸಂಬಂಧಿಸಿ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಈವರೆಗೆ ಆರು ಪ್ರಕರಣಗಳು ದಾಖಲಾಗಿವೆ. ಗ್ರಾಮದಲ್ಲಿ ಒಂದೇ ಸಮುದಾಯಕ್ಕೆ ಸೇರಿದ 12 ಕುಟುಂಬಗಳ ಪೈಕಿ ಕೆಂಪೇಗೌಡ ಕುಟುಂಬವನ್ನು ಒಬ್ಬಂಟಿ ಮಾಡಿ ಬಹಿಷ್ಕರಿಸಲಾಗಿದೆ. ಗಿಡ್ಡೇಗೌಡ ಕುಟುಂಬಕ್ಕೆ ಸಹಕರಿಸುತ್ತಿರುವ ಇತರೆ 11 ಕುಟುಂಬದವರು ಗ್ರಾಮದ ಸಾರ್ವಜನಿಕ ಕೊಳಾಯಿಯಲ್ಲಿ ನೀರು ತೆಗೆದುಕೊಳ್ಳಬಾರದು. ಯಾರೊಂದಿಗೂ ಮಾತನಾಡಬಾರದು ಎಂದು ಕೆಂಪೇಗೌಡ ಕುಟುಂಬಕ್ಕೆ ತಾಕೀತು ಮಾಡಿದ್ದಾರೆ.