ಗ್ರಾಮಾಂತರದಲ್ಲಿ ಸುರೇಶ್ 'ಕೈ' ಮೇಲು
ಮತ್ತೀಕೆರೆ ಜಯರಾಮ್
ರಾಮನಗರ: ದೇಶದೆಲ್ಲೆಡೆ ಕಾಂಗ್ರೆಸ್ ಧೂಳೀಪಟವಾಗಿದ್ದರೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಆ ಪಕ್ಷದ ಗೆಲುವಿನ ನಾಗಾಲೋಟ ಮುಂದುವರೆದಿದೆ. ಕಳೆದ ಉಪ ಚುನಾವಣೆಯಲ್ಲಿ ಕ್ಷೇತ್ರ ಕೈವಶ ಮಾಡಿಕೊಂಡಿದ್ದ ಡಿ.ಕೆ.ಸುರೇಶ್ ಈ ಬಾರಿ ಮತ್ತೊಮ್ಮೆ ಭರ್ಜರಿ ಗೆಲುವಿನೊಂದಿಗೆ ನಗೆ ಬೀರಿದ್ದಾರೆ.
ಈ ಫಲಿತಾಂಶದೊಂದಿಗೆ ರಾಮನಗರ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಪತ್ಯ ತಾತ್ಕಾಲಿಕವಾಗಿ ಅಂತ್ಯವಾದಂತಾಗಿದೆ. ಇದೀಗ ಜಿಲ್ಲೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಸಹೋದರರ ಪಾರುಪತ್ಯಕ್ಕೆ ಯಾವುದೇ ಅಡೆತಡೆ ಇಲ್ಲದಂತಾಗಿದೆ.
ಉಪ ಕದನವೇ ವರದಾನ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೂ ಮುನ್ನ ಡಿಕೆಎಸ್ ಸಹೋದರರ ದರ್ಬಾರ್ ಕನಕಪುರಕ್ಕೆ ಮಾತ್ರ ಸೀಮಿತವಾಗಿತ್ತು. ಸರ್ಕಾರ ರಚನೆ ಮತ್ತು ನಂತರದಲ್ಲಿ ನಡೆದ ಲೋಕಸಭೆ ಉಪ ಚುನಾವಣೆಯು ಡಿಕೆಎಸ್ ಸಹೋದರರಿಗೆ ವರದಾನವಾಯಿತು.
ಆ ಉಪ ಚುನಾವಣೆ ಗೆಲುವಿನ ಪರಿಣಾಮ ಡಿ.ಕೆ.ಸುರೇಶ್ ಸಂಸದರಾಗಿದ್ದು ಮಾತ್ರವಲ್ಲದೆ, ಡಿ.ಕೆ.ಶಿವಕುಮಾರ್ ಪಾಲಿಗೆ ಮುಚ್ಚಿದ್ದ ಸಂಪುಟದ ಬಾಗಿಲೂ ತೆರೆಯಿತು. ಅಲ್ಲಿಂದ ಸಹೋದರರು ಹಿಂತಿರುಗಿನ ನೋಡಿದ್ದೇ ಇಲ್ಲ. ಕೈ ಹಾಕಿದ ಕೆಲಸಗಳೆಲ್ಲ ಫಲಿಸುತ್ತಲೇ ಇವೆ. ಎಚ್ಡಿಕೆಯಿಂದ ಲಾಭ: ಚಿಕ್ಕಬಳ್ಳಾಪುರಕ್ಕೆ ಕ್ಷೇತ್ರಾಂತರ ಮಾಡಿದ ಎಚ್.ಡಿ.ಕುಮಾರಸ್ವಾಮಿ ಅವರ ನಿರ್ಧಾರದಿಂದ ಜೆಡಿಎಸ್ ಪಕ್ಷಕ್ಕೆ ನಷ್ಟವಾಯಿತು. ಅದರ ಬಲವು ಉಪ ಚುನಾವಣೆ, ಕಳೆದ ಚುನಾವಣೆಗೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿಯೇ ಕುಸಿದಿದೆ. ಕುಮಾರಸ್ವಾಮಿ ಕ್ಷೇತ್ರಾಂತರ ಡಿಕೆಎಸ್ ಸಹೋದರರ ದಾರಿಯನ್ನು ಸುಗಮಗೊಳಿಸಿತು. ಕುಮಾರಸ್ವಾಮಿ ಅವರ ವಲಸೆಯನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಡಿಕೆಎಸ್ ಸಹೋದರರು ಮತ್ತು ಕಾಂಗ್ರೆಸ್ ಮುಖಂಡರು ಭರ್ಜರಿ ಮತಬೇಟೆಯನ್ನೇ ನಡೆಸಿದ್ದಾರೆ.ಬಿಜೆಪಿ ಎಡವಟ್ಟುಗಳು: ಈ ಕ್ಷೇತ್ರದಲ್ಲಿ ಒಮ್ಮೆ ಬಿಜೆಪಿಯೂ ಗೆದ್ದು ಅಚ್ಚರಿ ಫಲಿತಾಂಶ ನೀಡಿತ್ತು. 4 ಬಾರಿ ಬಿಜೆಪಿ ನಿಕಟ ಸ್ಪರ್ಧೆ ನೀಡಿದ ನಿದರ್ಶನವೂ ಇದೆ. ದೇಶವ್ಯಾಪಿ ಎದ್ದಿದ್ದ ನರೇಂದ್ರ ಮೋದಿ ಅಲೆಯನ್ನು ಬೆಂಗಳೂರು ಮಟ್ಟಿಗಷ್ಟೇ ಸೀಮಿತಗೊಳಿಸಿಕೊಂಡಿದ್ದು, ಇಲ್ಲಿ ಬಿಜೆಪಿ ಸೋಲನುಭವಿಸಲು ಪ್ರಮುಖ ಕಾರಣವಾಗಿದೆ.
ನರೇಂದ್ರ ಮೋದಿ ಪರ ಮತ್ತು ಕಾಂಗ್ರೆಸ್ ವಿರೋಧಿ ಅಲೆಯನ್ನು ಬಳಸಿಕೊಂಡು, ಬೆಂಗಳೂರು ನಗರ ಜಿಲ್ಲೆ ಹೊರಗಿನ 5 ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಧುರೀಣರು ಪ್ರಯತ್ನಿಸಲೇ ಇಲ್ಲ ಎನ್ನುವುದು ಸ್ಪಷ್ಟವಾಗಿದೆ.
ಸುಳಿಯದ ಪ್ರಮುಖರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮೆ ಸಭೆ ನಡೆಸಿ ಹೋದರಷ್ಟೇ. ಅವರ ಹೊರತಾಗಿ ರಾಷ್ಟ್ರ ಮತ್ತು ರಾಜ್ಯದ ಘಟಾನುಘಟಿ ನಾಯಕರು ಬೆಂಗಳೂರು ಗ್ರಾಮಾಂತರದತ್ತ ಸುಳಿಯಲೇ ಇಲ್ಲ.
ನಿರೀಕ್ಷೆಯಂತೆಯೇ ಬೆಂಗಳೂರು ನಗರ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಭಾರಿ ಮುನ್ನಡೆ ಪಡೆದಿದೆ. ಆದರೆ, ಗ್ರಾಮೀಣ ಭಾಗದಲ್ಲಿರುವ ಉಳಿದ ಐದು ವಿಧಾನಸಭಾ ಕ್ಷೇತ್ರಗಳ ಮತದಾರರು ಬಿಜೆಪಿ ಬೆಂಬಲಿಸಲಿಲ್ಲ. ಕಾಂಗ್ರೆಸ್ ಈ ಚುನಾವಣೆಯನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸಿರಲೇ ಇಲ್ಲ. ಗೆಲುವು ನಿರೀಕ್ಷಿತವೆಂದೇ ಆತ್ಮ ವಿಶ್ವಾಸದೊಂದಿಗೆ ಅಭ್ಯರ್ಥಿ ಮತ್ತು ಮುಖಂಡರು ಪ್ರಚಾರ ನಡೆಸಿದ್ದರು. ಪ್ರತಿಪಕ್ಷಗಳ ಎಲ್ಲ ದೌರ್ಬಲ್ಯಗಳನ್ನು ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಂಡಿದೆ.
ಶಾಸಕರ ಹಿಡಿತ ಸಡಿಲ
ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸೇರಿದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣದ ಎಂ.ಕೃಷ್ಣಪ್ಪ, ಕನಕಪುರದ ಡಿ.ಕೆ.ಶಿವಕುಮಾರ್ ಮತ್ತು ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್ ಮಾತ್ರವೇ ಸ್ವಪಕ್ಷಕ್ಕೆ ಮುನ್ನಡೆ ತಂದುಕೊಡುವಲ್ಲಿ ಯಶಸ್ವಿಯಾದ ಶಾಸಕರೆನಿಸಿದ್ದಾರೆ. ಇವರನ್ನು ಹೊರತುಪಡಿಸಿ ಉಳಿದ 5 ಶಾಸಕರಿಗೆ ಸ್ವಕ್ಷೇತ್ರದಲ್ಲಿ ಹಿಡಿತ ಸಾಧಿಸಲಾಗಿಲ್ಲ. ಇವರಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಸೇರಿದ್ದಾರೆ. ಅವರು ಪ್ರತಿನಿಧಿಸುತ್ತಿರುವ ರಾಮನಗರದಲ್ಲಿ ಕಾಂಗ್ರೆಸ್ ಸುಮಾರು 10 ಸಾವಿರ ಮತಗಳ ಮುನ್ನಡೆ ಪಡೆದಿದೆ.
ಕುಣಿಗಲ್ ಕ್ಷೇತ್ರದಲ್ಲಿ ಜೆಡಿಎಸ್ನ ಡಿ.ನಾಗರಾಜಯ್ಯ ಶಾಸಕರಾಗಿದ್ದು, ಅಲ್ಲಿ ಕಾಂಗ್ರೆಸ್ 32 ಸಾವಿರದಷ್ಟು ಮುನ್ನಡೆ ಪಡೆದಿದೆ. ಜೆಡಿಎಸ್ನ ಎಚ್.ಸಿ.ಬಾಲಕೃಷ್ಣ ಶಾಸಕರಾಗಿರುವ ಮಾಗಡಿಯಲ್ಲೂ ಕಾಂಗ್ರೆಸ್ ಮುನ್ನಡೆ 10 ಸಾವಿರ ಮತಗಳನ್ನು ದಾಟಿದೆ.
ಕಾಂಗ್ರೆಸ್ ಶಾಸಕ ಶಿವಣ್ಣ ಇರುವ ಆನೇಕಲ್ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ, ಕನಕಪುರ ಮತ್ತು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ದೊಡ್ಡ ಮಟ್ಟದ ಅಂತರವನ್ನು ಪಡೆದುಕೊಂಡಿರುವುದು ವಿಶೇಷ.
ಬಂಡವಾಳ ಲುಕ್ಸಾನು
ಶ್ರೀರಂಗ ನೀರಾವರಿ ಯೋಜನೆಯ ಅಬ್ಬರ ತಣ್ಣಗಾಗಿಸಲೆಂದೇ ಮಾಗಡಿ ಕ್ಷೇತ್ರಕ್ಕೆ ಜೆಡಿಎಸ್ ಭಾರಿ ಮೊತ್ತದ ಬಂಡವಾಳ ಹೂಡಿತ್ತು. ದೇವೇಗೌಡ, ಕುಮಾರಸ್ವಾಮಿ ಪ್ರಚಾರದ ನಡೆಸಿದ್ದರು. ಶಾಸಕ ಬಾಲಕೃಷ್ಣ ಟೊಂಕ ಕಟ್ಟಿ ನಿಂತರೂ ಅಲ್ಲಿ ಕಾಂಗ್ರೆಸ್ ಕೈ ಮೇಲಾಗಿದೆ.
ಪಕ್ಷಾಂತರಿಗಳ ಪ್ರಭಾವ
ಚನ್ನಪಟ್ಟಣದಲ್ಲಿ ಸಮಾಜವಾದಿ ಪಕ್ಷದಿಂದ ಶಾಸಕರಾಗಿದ್ದ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಗೂಡಿಗೆ ಮರಳಿದರೆ, ಆಪರೇಷನ್ ಕಮಲಕ್ಕೆ ಒಳಗಾಗಿ ಮೂಲೆ ಗುಂಪಾಗಿದ್ದ ಮಾಜಿ ಶಾಸಕ ಎಂ.ಸಿ.ಅಶ್ವತ್ ಮತ್ತೆ ಜೆಡಿಎಸ್ ಮನೆಗೆ ಮರು ಪ್ರವೇಶಿಸಿದ್ದರು.
ಪಕ್ಷಾಂತರಿಗಳ ಪೈಕಿ ಯೋಗೇಶ್ವರ್ ಭಾರಿ ಮುನ್ನಡೆಯನ್ನು ಪಕ್ಷದ ಅಭ್ಯರ್ಥಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ಮುಗುಳ್ನಗೆ ಬೀರಿದ್ದಾರೆ. ಹೇಳಿ ಕೇಳಿ ಚನ್ನಪಟ್ಟಣದಲ್ಲಿ ಜೆಡಿಎಸ್ ಒಡೆದ ಮನೆ. ಅಲ್ಲೀಗ ಪೆಚ್ಚು ಮೋರೆಯ ದಳ ಮುಖಂಡರು ಚುನಾವಣೆಯಲ್ಲಿ ತಮ್ಮಲ್ಲೇ ಕಾಲೆಳೆದಾಟಕ್ಕೆ ಇಳಿದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ಆರುವರೆ ಸಾವಿರ ಮತಗಳಿಂದ ಸೋತಿದ್ದರು. ಲೋಕಸಭೆ ಉಪ ಚುನಾವಣೆಗೆ ಎದುರಾಳಿಯ ಮುನ್ನಡೆ ದುಪ್ಪಟ್ಟು ಅಂದರೆ 13 ಸಾವಿರಕ್ಕೆ ಹೋಗಿತ್ತು. ಈಗ ಅದಕ್ಕಿಂತ ಅಧಿಕ ಅಂದರೆ 26 ಸಾವಿರದಾಚೆಗೆ ಸಾಗಿದೆ.
ಕಾಸು ನೋಡದೆ ಮತ
ಜೆಡಿಎಸ್ ಅಭ್ಯರ್ಥಿಯು ಕ್ಷೇತ್ರಾದ್ಯಂತ ಮತದಾರರಿಗೆ ತಲಾವಾರು ಹಣ ಹಂಚಿದ್ದರಾದರೂ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಫಂಡ್ ಮಾಡಿರಲೇ ಇಲ್ಲ.
ಇಷ್ಟಾಗಿಯೂ ಕನಕಪುರದಲ್ಲಿರುವ ಡಿಕೆಎಸ್ ಸಹೋದರರ ವಿರೋಧಿಗಳ ಸುಮಾರು 39 ಸಾವಿರ ಮತಗಳು ಜೆಡಿಎಸ್ ಅಭ್ಯರ್ಥಿಗೆ ಬಿದ್ದಿವೆ. ಅಲ್ಲಿ ಬಿಜೆಪಿ ಮತಗಳಿಕೆಯು 10 ಸಾವಿರ ದಾಟಿದೆ.
ಕುಣಿಗಲ್ನಲ್ಲೂ ಕೈ ಹವಾ
ಕುಣಿಗಲ್ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಾರಂಭದಲ್ಲಿ ಜೆಡಿಎಸ್ ಹವಾ ಕಂಡಿತ್ತಾದರೂ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೇ ಅಚ್ಚರಿಯಾಗುವಷ್ಟು ದೊಡ್ಡ ಮಟ್ಟದ ಅಂತರ ಸಿಕ್ಕಿದೆ. ಅಲ್ಲಿ ಕಾಂಗ್ರೆಸ್ ಶೇ. 45ರಷ್ಟು ಮತಗಳನ್ನು ಬಾಚಿಕೊಂಡಿದೆ. ಜೆಡಿಎಸ್ ಮತ್ತು ಬಿಜೆಪಿ ನಡುವಿನ ಅಂತರ ಸರಿ ಸುಮಾರು ಆರು ನೂರು ಮಾತ್ರವೇ.