ದೂರದ ಬೆಟ್ಟ ನುಣ್ಣಗೆ ಅಲ್ಲವೇ ಕುಮಾರಣ್ಣ?
ಮತ್ತಿಕೆರೆ ಜಯರಾಂ
ಕ.ಪ್ರ.ವಾರ್ತೆ ರಾಮನಗರ ಮೇ 16
ದೂರದ ಬೆಟ್ಟ ನುಣ್ಣಗೆ ಎನ್ನುವುದು ಅರ್ಥವಾಯ್ತೇ ಕುಮಾರಣ್ಣ ಇದು, ರಾಮನಗರದಿಂದ ಚಿಕ್ಕಬಳ್ಳಾಪುರಕ್ಕೆ ಕ್ಷೇತ್ರಾಂತರ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸ್ವಕ್ಷೇತ್ರದ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರ ಪರೋಕ್ಷ ಪ್ರಶ್ನೆಯಾಗಿದೆ.
ರಾಮನಗರವೇ ನನ್ನ ಕರ್ಮಭೂಮಿ. ಮಣ್ಣಾಗುವ ಕಾಲ ಬಂದರೆ ಈ ನೆಲದಲ್ಲೇ ಮಣ್ಣಾಗುವೆ. ಈ ಕ್ಷೇತ್ರದ ಜತೆಗೆ ನನ್ನದು ತಾಯಿ ಮತ್ತು ಮಗನ ಸಂಬಂಧ ಎಂದೆಲ್ಲಾ ಹೇಳುತ್ತಿದ್ದ ಕುಮಾರಸ್ವಾಮಿ ಇದ್ದಕ್ಕಿಂದ್ದಂತೆ ಚಿಕ್ಕಬಳ್ಳಾಪುರದಲ್ಲಿ ಕಣಕ್ಕೆ ಧುಮುಕಿದ್ದರು.
ಇಲ್ಲೂ ಅಭದ್ರವಾಯ್ತು: ಇದೀಗ ಅತ್ತ ಚಿಕ್ಕಬಳ್ಳಾಪುರದ ಮತದಾರರ ಕುಮಾರಸ್ವಾಮಿ ಅವರನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ ಮೂರನೇ ಸ್ಥಾನಕ್ಕೆ ದೂಡಿದ್ದಾರೆ. ತಮ್ಮದೇ ಭದ್ರಕೋಟೆಯಾಗಿದ್ದ ರಾಮನಗರ ಜಿಲ್ಲೆಯನ್ನು ಒಳಗೊಂಡ ಬೆಂಗಳೂರು ಗ್ರಾಮಾಂತರದಲ್ಲೂ ಪಕ್ಷ ಮತ್ತಷ್ಟು ಅಭದ್ರವಾಗಿದೆ.
ಕುಮಾರಸ್ವಾಮಿ ಕ್ಷೇತ್ರಾಂತರದ ಒಂದು ನಿರ್ಧಾರದಿಂದ ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ ಮಕಾಡೆ ಮಲಗಿದೆ. ಸ್ವಕ್ಷೇತ್ರ ರಾಮನಗರದಲ್ಲೇ ಸ್ವಪಕ್ಷದ ಮುನ್ನಡೆ ಕಾಯ್ದುಕೊಳ್ಳುವಲ್ಲಿ ವಿಫಲರಾಗುವ ಮೂಲಕ ಕುಮಾರಸ್ವಾಮಿ ಅವರು ಇಲ್ಲೂ ಮುಖಭಂಗ ಅನುಭವಿಸಿದ್ದಾರೆ.
3ನೇ ಸ್ಥಾನಕ್ಕೆ ಜೆಡಿಎಸ್: 1996 ಮತ್ತು 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಕುಮಾರಸ್ವಾಮಿ, 2002ರ ಉಪ ಚುನಾವಣೆಯಲ್ಲಿ ಇಲ್ಲಿಂದ ದೇವೇಗೌಡ ಗೆದ್ದು ಹೋಗಿದ್ದರು. ಕಳೆದ 2013ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ನೇರ ಎದುರಾಳಿಯಾಗಿತ್ತು.
ಆಗ ರಾಮನಗರದ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್, ಉಳಿದೆಲ್ಲೆಡೆ ಕಾಂಗ್ರೆಸ್ಗೆ ಮುನ್ನಡೆಯಾಗಿತ್ತು.
ಆದರೆ, ಪ್ರಸಕ್ತ ಚುನಾವಣೆಯಲ್ಲಿ ಜೆಡಿಎಸ್ ಒಂದು ಕಡೆಯೂ ಮುನ್ನಡೆ ಪಡೆದುಕೊಳ್ಳಲಾಗಿಲ್ಲ. 5 ಕಡೆ ಕಾಂಗ್ರೆಸ್, 3 ಕಡೆ ಬಿಜೆಪಿ ಮುನ್ನಡೆ ಪಡೆದಿದೆ.
ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ, ಆನೇಕಲ್. ಈ ವಿಧಾನಸಭಾ ಕ್ಷೇತ್ರಗಳಲ್ಲೂ ಮುನ್ನಡೆ ಪಡೆಯುತ್ತೇವೆಂದು ಬೀಗುತ್ತಿದ್ದ ದಳಪತಿಗಳಿಗೆ ಫಲಿತಾಂಶ ಭ್ರಮನಿರಸನ ಮೂಡಿಸಿದೆ. ಆ ಮೂರು ಕಡೆಯೂ ಜೆಡಿಎಸ್ 3ನೇ ಸ್ಥಾನಿಯಾಗಿದೆ.
ಹೆಚ್ಚುತ್ತಿರುವ ಪ್ರಾಬಲ್ಯ: ಸ್ವಕ್ಷೇತ್ರ ಕನಕಪುರದಲ್ಲಿ ಡಿ.ಕೆ.ಸುರೇಶ್ ಮತ್ತು ಡಿ.ಕೆ.ಶಿವಕುಮಾರ್ ಸಹೋದರರ ಪ್ರಾಬಲ್ಯ ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಲೇ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಕುಮಾರ್ ಪ್ರತಿಸ್ಪರ್ಧಿ ಸಿಂಧ್ಯಾ ವಿರುದ್ಧ 31 ಸಾವಿರ ಮತಗಳಿಂದ ಗೆದ್ದಿದ್ದರು.
ಕಳೆದ ಉಪ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ 52 ಸಾವಿರ ಮುನ್ನಡೆ ಪಡೆದಿದ್ದರು. ಈ ಬಾರಿ ಜೆಡಿಎಸ್ ಅಭ್ಯರ್ಥಿಗಿಂತ 72 ಸಾವಿರ, ಬಿಜೆಪಿಗಿಂತ 98 ಸಾವಿರದಷ್ಟು ಮುನ್ನಡೆ ಪಡೆದುಕೊಂಡು ಸ್ವಕ್ಷೇತ್ರದಲ್ಲಿ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆ.
ಪಿತೃವಾಕ್ಯ ಪರಿಪಾಲಿಸಿದರು
ಅಂದು ಬಿಜೆಪಿ ಜತೆ ಸೇರಿ ಸರ್ಕಾರ ರಚಿಸುವಾಗ ಕುಮಾರಸ್ವಾಮಿ ತಂದೆಯ ಮಾತು ಧಿಕ್ಕರಿಸಿದರೆನ್ನುವ ದೂಷಣೆಗೆ ಒಳಗಾಗಿದ್ದರು. ಆದರೆ, ಈ ಬಾರಿ ಸ್ವತಃ ಅವರೇ ಹೇಳಿಕೊಂಡಿದ್ದಂತೆ ಚಿಕ್ಕಬಳ್ಳಾಪುರದಿಂದ ಸ್ಪರ್ಧೆಗೆ ಪಿತೃವಾಕ್ಯ ಪರಿಪಾಲಿಸಿದ್ದೇ ಕಾರಣವಾಗಿದೆ. ಪಿತೃವಾಕ್ಯಕ್ಕೆ ವಿರುದ್ಧವಾಗಿ ನಡೆದಾಗ ವಚನಭ್ರಷ್ಟತೆಯ ಕಳಂಕ ಕಟ್ಟಿಕೊಳ್ಳಬೇಕಾಯಿತು. ಇದೀಗ ಪಿತೃವಾಕ್ಯ ಪಾಲನೆಗಾಗಿ ಪ್ರತಿಷ್ಠೆಯನ್ನು ಪಣಕ್ಕಿಟ್ಟು, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸೋತ ಮುಖದೊಂದಿಗೆ ಮರಳಿದ್ದಾರೆ.
ಸರ್ವರ್ ಸಮಸ್ಯೆ
ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಮತ ಎಣಿಕೆಗಾಗಿ ಹಲವು ದಿನಗಳಿಂದ ಸಾಕಷ್ಟು ತಯಾರಿಯೇನೋ ನಡೆದಿತ್ತು. ಆದರೆ, ಎಣಿಕೆಯ ದಿನ ಪ್ರಾರಂಭದಿಂದಲೇ ಸರ್ವರ್ ಕೈಕೊಟ್ಟಿತ್ತು. ಸುತ್ತುವಾರು ಫಲಿತಾಂಶದ ಮಾಹಿತಿ ಅಪ್ಡೇಟ್ ಮಾಡುವುದಕ್ಕೆ ಸಿಬ್ಬಂದಿ ಸಾಕಷ್ಟು ಹೆಣಗಾಡುತ್ತಿದ್ದರು. ಸಿಬ್ಬಂದಿಗಳಲ್ಲಿ ಬಹುತೇಕರು ಅನನುಭವಿಗಳಾಗಿದ್ದು, ಕೆಲಸ ನಿರ್ವಹಿಸಲು ತಿಣುಕಾಡುತ್ತಲೇ ಇದ್ದರು. ಮಾಹಿತಿಗಳನ್ನು ಕಂಪ್ಯೂಟರೀಕರಿಸಿ, ಅದರ ಪ್ರಕಟಕ್ಕೆ ರವಾನಿಸುವುದು ತೀರಾ ವಿಳಂಬವಾಗುತ್ತಿತ್ತು. ಉನ್ನತ ಅಧಿಕಾರಿಗಳು ಇದ್ಯಾವುದರ ಪರಿವೆಯೇ ಇಲ್ಲದಂತೆ ತಮ್ಮ ಕೊಠಡಿಯಲ್ಲಿ ಆಸೀನರಾಗಿದ್ದರು. ಲೋಪಗಳು ಫಲಿತಾಂಶ ಪ್ರಕಟದೊಂದಿಗೆ ಮುಚ್ಚಿ ಹೋದವು
27ನೇ ಕ್ಷೇತ್ರವೇ ಇದು
ರಾಜ್ಯದ 28 ಕ್ಷೇತ್ರಗಳ ಪೈಕಿ ಎಣಿಕೆ ಪ್ರಕ್ರಿಯೆ ಪೂರ್ಣಗೊಳಿಸಿ, ಫಲಿತಾಂಶ ಪ್ರಕಟವಾದ 27ನೇ ಕ್ಷೇತ್ರವೇ ಬೆಂಗಳೂರು ಗ್ರಾಮಾಂತರ. ಈ ಕ್ಷೇತ್ರಕ್ಕಿಂತ ಹೆಚ್ಚು ಮತಗಟ್ಟೆ, ಮತದಾರರಿದ್ದ ಕ್ಷೇತ್ರಗಳ ಫಲಿತಾಂಶಗಳೆಲ್ಲ ಮೊದಲೇ ಪ್ರಕಟವಾಗಿದ್ದವು. ಮಂದಗತಿಯಲ್ಲಿ ಸಾಗಿದ ಎಣಿಕೆ ವಿಳಂಬಕ್ಕೆ ಕಾರಣವೆನ್ನುವುದನ್ನು ಅಲ್ಲಿದ್ದ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.
ಕಾಂಗ್ರೆಸಿಗರಿಗೆ ನಿರಾಸೆ
ಚಿಕ್ಕಬಳ್ಳಾಪುರದಲ್ಲಿ ಕುಮಾರಸ್ವಾಮಿ ಗೆಲವನ್ನು ಬಯಸಿದ್ದವರು ಜೆಡಿಎಸ್ ಪಕ್ಷದವರಿಗಿಂತ ಕಾಂಗ್ರೆಸಿಗರೇ ಹೆಚ್ಚು. ಅಲ್ಲಿ ಅವರು ಗೆದ್ದರೆ, ರಾಮನಗರದಲ್ಲಿ ವಿಧಾನಸಭೆಗೆ ಚುನಾವಣೆ ಎದುರಾಗಬಹುದು ಎನ್ನುವ ಕಾರಣಕ್ಕೆ ಕಾಂಗ್ರೆಸಿಗರು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದರು. ದೇವೇಗೌಡ ಪ್ರಧಾನಿಯಾದಾಗ ರಾಮನಗರ ಕ್ಷೇತ್ರಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಆ ಮರು ಚುನಾವಣೆಯಲ್ಲಿ ಕ್ಷೇತ್ರವನ್ನು ಕಾಂಗ್ರೆಸ್ ಕೈವಶ ಮಾಡಿಕೊಂಡಿತ್ತು. ಕಳೆದ ಬಾರಿ ಸಂಸದರಾಗಿ ಆಯ್ಕೆಯಾದಾಗ ಕುಮಾರಸ್ವಾಮಿ ಕ್ಷೇತ್ರ ತೆರವುಗೊಳಿಸಿ, ತಮ್ಮ ಪಕ್ಷದ ತೆಕ್ಕೆಯಲ್ಲೇ ಉಳಿಸಿಕೊಂಡಿದ್ದರು. ಒಂದೊಮ್ಮೆ ಕುಮಾರಸ್ವಾಮಿ ಅವರೇನಾದರೂ ಚಿಕ್ಕಬಳ್ಳಾಪುರದಲ್ಲಿ ಆಯ್ಕೆಯಾಗಿದ್ದ ರಾಮನಗರಕ್ಕೆ ಇನ್ನೊಂದು ಉಪ ಚುನಾವಣೆ ತಂದೊಡ್ಡಿದ ಕಳಂಕಕ್ಕೆ ಪಾತ್ರರಾಗುತ್ತಿದ್ದರು. ಅಲ್ಲಿನ ಸೋಲಿನಿಂದ ಇಲ್ಲಿ ಉಪ ಚುನಾವಣೆ ತಪ್ಪಿದಂತಾಗಿದೆ.
3ನೇ ಸ್ಥಾನ ಹೊಸದಲ್ಲ
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸೋಲು-ಗೆಲವು ಹೊಸದಲ್ಲ. ಅಂತೆಯೇ 3ನೇ ಸ್ಥಾನಕ್ಕೆ ದೂಡಲ್ಪಟ್ಟಿರುವುದೂ ಇದೇ ಮೊದಲೇನಲ್ಲ. ಈ ಹಿಂದೆಯೂ 2 ಬಾರಿ ಲೋಕಸಭೆ ಚುನಾವಣೆಯಲ್ಲಿ ಆ ಸ್ಥಾನವನ್ನು ನೋಡಿದ್ದಾಗಿದೆ.
ಕನಕಪುರ ಕ್ಷೇತ್ರದಲ್ಲಿ 1998ರಲ್ಲಿ ಬಿಜೆಪಿಯ ಎಂ.ಶ್ರೀನಿವಾಸ್ ಆಯ್ಕೆಯಾದಾಗ ಮತ್ತು 1999ರಲ್ಲಿ ಕಾಂಗ್ರೆಸ್ನ ಎಂ.ವಿ.ಚಂದ್ರಶೇಖರಮೂರ್ತಿ ಗೆದ್ದಾಗ ಕುಮಾರಸ್ವಾಮಿ 3ನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದರು. ಈಗ ಮತ್ತೊಮ್ಮೆ ಅಂಥದ್ದೇ ಫಲಿತಾಂಶ ಕಂಡಿದ್ದಾರೆ.
2002ರಲ್ಲಿ ಗೆಲುವು ಸಾಧಿಸಿದ್ದ ದೇವೇಗೌಡ 2004ರಲ್ಲಿ ಹಾಸನದ ಜತೆಗೆ ಕನಕಪುರದಿಂದಲೂ ಸ್ಪರ್ಧಿಸಿದ್ದರು. ಆಗ ಅವರು ಹಾಸನದಲ್ಲಿ ಗೆದ್ದು ಬೀಗಿದ್ದರಾದರೂ ಕನಕಪುರದಲ್ಲಿ ತೇಜಸ್ವಿನಿಗೌಡ ಎದುರು ಸೋತು, 3ನೇ ಸ್ಥಾನಕ್ಕಿಳಿದಿದ್ದರು.