'ಮೋದಿ ಪಾತ್ರ ಶ್ಲಾಘನೀಯ'
ಆನೇಕಲ್ಲು: ಭವ್ಯ ಭಾರತದ ಪರಿಕಲ್ಪನೆಯಡಿ ವಿಶ್ವಾಸಾರ್ಹ, ದೃಢ ಹಾಗೂ ಭರವಸೆಯ ಬಿಜೆಪಿ ಸರ್ಕಾರ ನಡೆಸಲು ದೇಶದ ಮಹಾ ಜನತೆ ಆಶೀರ್ವದಿಸಿದ್ದಾರೆ. ನರೇಂದ್ರ ಮೋದಿಯವರು ಪಕ್ಷದ ಅದ್ವಿತೀಯ ಶಕ್ತಿಯಾಗಿ ಹೊರಹೊಮ್ಮಿದ್ದು ಎಲ್ಲರ ಸಹಕಾರದೊಂದಿಗೆ ಜನತೆಯ ನಿರೀಕ್ಷೆಯನ್ನು ಈಡೇರಿಸಲಿದ್ದಾರೆ ಎಂದು ಮಾಜಿ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದ್ದಾರೆ.
ಅವರು ಆನೇಕಲ್ಲಿನ ದೇವರಕೊಂಡಪ್ಪ ವೃತ್ತದಲ್ಲಿ ಅಪಾರ ಬೆಂಬಲಿಗರು, ಕಾರ್ಯಕರ್ತರು ಹಾಗೂ ಮುಖಂಡರಿಗೆ ಸಿಹಿ ವಿತರಿಸಿ ಮಾತನಾಡಿ ಯುಪಿಎ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿ ದೇಶಾದ್ಯಂತ ಸಂಚಾರ ಮಾಡಿದ ಮೋದಿಯವರ ಯಶಸ್ಸು ಪಕ್ಷವನ್ನು ಖಂಡಿತ ಮುನ್ನಡೆಸುತ್ತದೆ ಎಂಬ ಭರವಸೆ ಇದ್ದಿತು. ಆದರೆ ಭಾರಿ ಗೆಲುವಿನಿಂದಾಗಿ ಸ್ವಾಭಿಮಾನಿ ಭಾರತೀಯ ಪ್ರಜೆಯನ್ನು ವಿಶ್ವದ ಎಲ್ಲೆಡೆ ಕಾಣಬಹುದಾಗಿದೆ. ಭಾರತೀಯ ಸಂಸ್ಕೃತಿ ಸಂಪ್ರದಾಯವನ್ನು ಗೌರವಿಸುವಂತಹ ಮಾರ್ಗದಲ್ಲಿ ಎಲ್ಲ ದೇಶವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ನಮ್ಮ ಸಂಸದರು ರಾಜ್ಯದ ಹಿತಾಸಕ್ತಿ ಕಾಪಾಡಲು ಒಟ್ಟಾಗಿ ಹೋರಾಟ ಮಾಡುವ ವಿಶ್ವಾಸವಿದ್ದು ಮುಂದಿನ ದಿನಗಳಲ್ಲಿ ಶ್ರೇಷ್ಠ ಆಡಳಿತ ಕಾಣಬಹುದಾಗಿದೆ ಎಂದರು.
ಪುರಸಭಾ ಸದಸ್ಯರಾದ ಕೆ. ನಾಗರಾಜು, ನರಸಿಂಹರೆಡ್ಡಿ, ಬ್ಯಾಗಡದೇನಹಳ್ಳಿ ಶಂಕರ್, ಚಂದಾಪುರ ರಾಮು, ಮರಸೂರು ರಾಮಚಂದ್ರ, ಬಾಬು, ಟೌನ್ ಶಿವರಾಂ ಸೇರಿದಂತೆ ನೂರಾರು ಅಭಿಮಾನಿಗಳಿದ್ದರು.