ದೇವನಹಳ್ಳಿ ಲಯನ್ಸ್ ಸಂಸ್ಥೆಯಿಂದ 150ನೇ ನೇತ್ರ ಚಿಕಿತ್ಸಾ ಶಿಬಿರ
ದೇವನಹಳ್ಳಿ: ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ ಹಾಗೂ ಲಯನ್ಸ್ ಸೇವಾ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ 150ನೆ ಉಚಿತ ನೇತ್ರ ಚಿಕಿತ್ಸಾ ಶಿಬಿರ ಹಾಗೂ ಹುಣಸಮಾರನಹಳ್ಳಿಯ ಶ್ರೀ ಕೃಷ್ಣದೇವರಾಯ ದಂತ ವೈದ್ಯಕೀಯ ಆಸ್ಪತ್ರೆ ವೈದ್ಯರಿಂದ ದಂತ ಚಿಕಿತ್ಸಾ ಶಿಬಿರವನ್ನು ಲಯನ್ಸ್ ಸೇವಾ ಭವನದಲ್ಲಿ ಆಯೋಜಿಸಲಾಗಿತ್ತು.
ಉದ್ಘಾಟನೆಯನ್ನು ಶ್ರೀ ಕೃಷ್ಣ ದೇವಾರಾಯ ಆಸ್ಪತ್ರೆಯ ವೈದ್ಯೆ ಡಾ. ಶ್ಯಾಮಲ ನೆರವೇರಿಸಿ ಗ್ರಾಮೀಣ ಭಾಗದ ಜನರು ಇಂತಹ ಶಿಬಿರಗಳ ಲಾಭ ಪಡೆಯಬೇಕು. ಇಲ್ಲವಾದರೆ ದುಬಾರಿ ಹಣತೆತ್ತು ನಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದರು. ಮನುಷ್ಯನ ದೇಹದ ಎಲ್ಲ ಭಾಗಗಳು ಮುಖ್ಯವಾಗಿರುವುದರಿಂದ ತಮ್ಮ ಹಲ್ಲುಗಳನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕಾಗುತ್ತದೆ ಎಂದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಆರ್.ನಾಗರಾಜಯ್ಯ ವಹಿಸಿ ನಮ್ಮ ಸಂಸ್ಥೆಯಿಂದ ನಡೆಸುತ್ತಿರುವ ಆರೋಗ್ಯ ಶಿಬಿರಗಳು ಉಚಿತ ಎಂದ ಮಾತ್ರಕ್ಕೆ ಚಿಕಿತ್ಸೆ ನೀಡುವಲ್ಲಿ ಕಳಪೆಯಾಗಿರುತ್ತದೆ ಎಂದು ತಿಳಿಯಬಾರದು. ಈ ಶಿಬಿರಗಳಿಗೆ ದಾನಿಗಳು ಸಹಕಾರ ನೀಡಿರುತ್ತಾರೆ. ಆದ್ದರಿಂದ ಉತ್ತಮ ವೈದ್ಯಕೀಯ ಸೇವೆ ದೊರೆಯುತ್ತದೆ ಎಂದರು.
ವೀರಪ್ಪ ಮೊಯ್ಲಿ ಗೆಲವಿಗೆ ವಿಜಯೋತ್ಸವ
ವಿಜಯಪುರ: ದೇಶದ್ಯಾಂತ ಬಿಜೆಪಿಯ ಮೋದಿ ಅಲೆ ಇದ್ದರೂ ಕೂಡ ಈ ಭಾಗದಲ್ಲಿ ವೀರಪ್ಪ ಮೊಯ್ಲಿಯವರು ಕೇಂದ್ರದಿಂದ ಬಂದಂತಹ ಸಾಕಷ್ಟು ಅನುದಾನಗಳು ಹಾಗೂ ಪಕ್ಷದ ತತ್ವ ಸಿದ್ಧಾಂತಗಳನ್ನು ಮನಗಂಡ ಈ ಕ್ಷೇತ್ರದ ಮತದಾರ ಪ್ರಭುಗಳು ಮತ್ತೊಮ್ಮೆ ಮೊಯ್ಲಿಯವರಿಗೆ ಆರ್ಶೀವಾದ ಮಾಡಿ ಆಯ್ಕೆ ಮಾಡಿದ್ದಾರೆ ಎಂದು ವಿಜಯಪುರ ಪಟ್ಟಣದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ಮುಖಂಡ ವಿ. ಮಂಜುನಾಥ್ ತಿಳಿಸಿದರು.
ಅವರು ಪಟ್ಟಣದ ಪುರಭವನ ಸರ್ಕಲ್ನಲ್ಲಿ ಕಾಂಗ್ರೆಸ್ನಿಂದ ವೀರಪ್ಪ ಮೊಯ್ಲಿಯವರ ಗೆಲವಿನ ಆಚರಣೆಯನ್ನು ಪಟಾಕಿ ಸಿಡಿಸಿ ಸಂಭ್ರಮಿಸುವ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಇಡೀ ದಕ್ಷಿಣ ಭಾರತದಲ್ಲೆ ತ್ರಿಕೋನ ಸ್ಪರ್ಧೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಎಂದರೇ ತಪ್ಪಾಗಲಾರದು ಎಂದರು.
ಇದೇ ಸಂಧರ್ಭದಲ್ಲಿ ವಿಜಯಪುರ ಟೌನ್ ಕಾಂಗ್ರೆಸ್ ಅಧ್ಯಕ್ಷ ಎಂ. ಸತೀಶ್ ಕುಮಾರ್ ಮಾತನಾಡಿ ಮೊಯ್ಲಿಯವರು ಇನ್ನು ಕೇವಲ 36 ತಿಂಗಳಲ್ಲಿ ಬಯಲು ಸೀಮೆಗೆ ನೀರನ್ನೊದಗಿಸುವುದು ಖಚಿತ. ರಾಜ್ಯದ ಮುಖ್ಯಮಂತ್ರಿಗಳ 13 ಸಾವಿರಗಳ ಅನುದಾನ ಬಿಡುಗಡೆಯಾಗಿದೆ. ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿಗಾಗಿ 11ಕೋಟಿ ಅನುದಾನದಲ್ಲಿ ಕಾರ್ಯಕೈಗೊಂಡಿದ್ದಾರೆ. ಅದು ಪ್ರಗತಿಯಲ್ಲಿದ್ದು ಅಂತಿಮ ರೂಪ ಪಡೆಯುವುದರಲ್ಲಿದೆ.
ಪುರಸಭಾ ಸದಸ್ಯರಾದ ನಾಗರಾಜ್, ಮಹೇಶ್, ಮುಬಾರಕ್, ಏಜಾಜ್, ನಿಸ್ಸಾರ್,ದಲಿತ ಮುಖಂಡರಾದ ಮೌಳೇಶ್, ವಹ್ನಿಕುಲ ರಾಜ್ಯ ಉಪಾಧ್ಯಕ್ಷ ರಾಮಚಂದ್ರಪ್ಪ, ಎಲ್. ಗೋವಿಂದರಾಜು ಇತರರು ಇದ್ದರು.