ಕಾಂಗ್ರೆಸ್ಸಿಗೆ ತಕ್ಕಪಾಠ: ಆನಂದ್
ಕೋಲಾರ: ಕೇಂದ್ರದಲ್ಲಿ ಯುಪಿಎ ಸರ್ಕಾರದ ದುರಾಡಳಿತದಿಂದ ರೈತರು ತೀವ್ರ ಮನನೊಂದು ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ ಎಂದು ರಾಜ್ಯ ದಲಿತ ಸಮಾಜ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸೂಲಿಕುಂಟೆ ಆನಂದ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ಈ ಹಿಂದೆ ಹತ್ತು ವರ್ಷಗಳಿಂದ ಆಡಳಿತ ನಡೆಸಿದ ಯುಪಿಎ ಮತ್ತು ಕಾಂಗ್ರೆಸ್ ಸರ್ಕಾರ 2ಜಿ ಹಗರಣ, ಕಲ್ಲಿದ್ದಲು ಹಗರಣ, ಕಮಾನ್ ವೆಲ್ತ್ ಗೇಮ್ಸ್ ಹಗರಣಗಳಲ್ಲಿ ಕೆಲ ಮಂತ್ರಿಗಳು, ಸಚಿವರು ಭಾಗಿಯಾಗಿದ್ದಾರೆ. ತಮ್ಮ ದುರಾಡಳಿತವನ್ನು ಎತ್ತಿ ತೋರಿಸಿಕೊಳ್ಳುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಸಾಧಿಸಿದೆ ಎಂದು ಟೀಕಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿರುವುದಕ್ಕೆ ರೈತಾಪಿ ವರ್ಗ, ಹಿಂದುಳಿದ ವರ್ಗದಿಂದ ಸಂತಸ ವ್ಯಕ್ತಪಡಿಸುತ್ತೆವೆ. ಅದೇ ರೀತಿ ರೈತರು ಬೆಳೆಯುವ ಬೆಳೆಗೆ ಬೆಂಬಲ ಬೆಲೆ ನೀಡಬೇಕು, ವಾಜಪೇಯಿ ಕನಸಾಗಿರುವ ನದಿಗಳ ಜೋಡಣೆ ಆನುಷ್ಠಾನ ಮಾಡಬೇಕು ಎಂದು ಒತ್ತಾಯಿಸಿದರು.
ರೈತರಿಗೆ 24ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕು. ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡುವುದರ ಮೂಲಕ ಅಗತ್ಯ ಹಣ ಮಂಜೂರು ಮಾಡಿ ಯೋಜನೆ ಕೂಡಲೇ ಆನುಷ್ಠಾನಕ್ಕೆ ಬರುವಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಎಲ್.ಎನ್. ಸ್ವಾಮಿ, ಕಾರ್ಯಾಧ್ಯಕ್ಷ ರಮೇಶ್, ಕಾರ್ಯದರ್ಶಿ ರಾಜೇಶ್, ಯಲವಳ್ಳಿ ನಾಗರಾಜ್ ಇದ್ದರು.
ಅರ್ಥಿಕ ಸ್ಥಿತಿ ಸುಧಾರಣೆಗೆ ದ್ವಿತಳಿ ರೇಷ್ಮೆ ಸೂಕ್ತ
ಮಾಲೂರು: ಅರ್ಥಿಕ ಪರಿಸ್ಥಿತಿ ಉತ್ತಮಗೊಳಿಸಿಕೊಳ್ಳಲು ರೈತರು ದ್ವಿತಳಿ (ಬೈವೋಲ್ಟಿನ್) ರೇಷ್ಮೆ ಬೆಳೆಯುವುದು ಸೂಕ್ತ ಎಂದು ಆರ್ಎಸ್ಆರ್ಎಸ್ ವಿಜ್ಞಾನಿ ಡಾ.ಕೆ.ಎಲ್.ರಾಜಣ್ಣ ಹೇಳಿದರು.
ಪಟ್ಟಣದ ಕೃಷಿಕ ಸಮಾಜ ಭವನದ ಸಭಾಂಗಣದಲ್ಲಿ ತಾಲೂಕು ರೇಷ್ಮೆ ಇಲಾಖೆ ಹಾಗೂ ಕೇಂದ್ರ ರೇಷ್ಮೆ ಮಂಡಳಿ ವತಿಯಿಂದ ತಾಲೂಕಿನ ಟೇಕಲ್ ಕ್ಲಸ್ಟರ್ನ ದ್ವಿತಳಿ ರೇಷ್ಮೆ ಬೆಳೆಗಾರರಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು. ನೀರಿನ ಕೊರತೆಯಿಂದ ರೇಷ್ಮೆ ಬೆಳೆಯಲು ಹೆಚ್ಚಿನ ಖರ್ಚು ಬರುತ್ತಿದೆ. ಈ ನಿಟ್ಟಿನಲ್ಲಿ ರೇಷ್ಮೆ ಇಲಾಖೆಯಲ್ಲಿ ನೂತನ ಅವಿಷ್ಕಾರ ಮಾಡಲಾಗಿದ್ದು, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಇಳುವರಿ ಸಿಗುವಂಥ ದ್ವಿತಳಿ ರೇಷ್ಮೆಯನ್ನು ಪರಿಚಯಿಸಿದೆ. ಕೆ.ಎಸ್.ಪಿ.ಯೋಜನೆ ಹಾಗೂ ಪೇಸ್ 1, 2, 3 ಯೋಜನೆಗಳಿಂದ ದ್ವಿತಳಿ ರೇಷ್ಮೆ ಮೂಲಕ ಹೆಚ್ಚಿನ ಇಳುವರಿ ಪಡೆಯುವ ಬಗ್ಗೆ ರೈತರಿಗೆ ತರಬೇತಿ-ಮಾಹಿತಿ ನೀಡಲಾಗುತ್ತಿದೆ. ರಾಜಣ್ಣ ಕಳೆದ ಒಂದು ವರ್ಷದಿಂದ ತಾಲೂಕಿನಲ್ಲಿ ದ್ವಿತಳಿ ಬೆಳೆಯುತ್ತಿದ್ದು, ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ ಎಂದರು. ರೇಷ್ಮೆ ಬೆಳೆ ವೃದ್ಧಿಸಲು ರಾಜ್ಯ ಸರ್ಕಾರ ಹಲವು ಕ್ರಮ ಕೈಗೊಂಡಿದ್ದು, ಮೊದಲ ಹಂತವಾಗಿ ವಿದೇಶದಿಂದ ಅಮದಾಗುವ ರೇಷ್ಮೆಗೆ ಹೆಚ್ಚಿನ ತೆರಿಗೆ ವಿಧಿಸಿ, ಅಮದು ಮೇಲೆ ನಿಯಂತ್ರಣ ಹೇರಲಾಗಿದೆ ಎಂದರು. ಎಸ್.ವಿ.ಕುಮಾರ್, ವಿಜ್ಞಾನಿ ಶಾನ್ಬಾಗ್, ರುದ್ರಪ್ಪ, ಟೇಕಲ್ ಕ್ಲಸ್ಟರ್ ಅಧ್ಯಕ್ಷ ನಾರಾಯಣ ಸ್ವಾಮಿ, ಕಾರ್ಯದರ್ಶಿ ನಾಗರಾಜ್, ವೆಂಕಟಸ್ವಾಮಿ, ನಾರಾಯಣಸ್ವಾಮಿ, ಅಲಹಳ್ಳಿ ವೆಂಕಟೇಶ್, ಮಂಜುನಾಥ್ ಇದ್ದರು.
ಅಪಘಾತದಲ್ಲಿ ಬೈಕ್ ಸವಾರ ಸಾವು
ಮಾಲೂರು: ಮಾಲೂರಿನ ಹೊರವಲಯದ ಚಿಕ್ಕಕಡತೂರು ಗೇಟ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ಸವಾರನೊಬ್ಬ ಸ್ಥಳದಲ್ಲಿ ಸಾವನ್ನಪ್ಪಿ ಇನ್ನೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ. ಮೃತನನ್ನು ಮಾಲೂರು ಪಟ್ಟಣದ ವಾಸಿ ಕೃಷ್ಣಪ್ಪ(45)ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ದ್ವಿಚಕ್ರದಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಚಿಕ್ಕಕಡತೂರಿನ ಮಂಜುನಾಥ್ನನ್ನು ಕೋಲಾರದ ಆಸ್ವತ್ರೆಗೆ ಸೇರಿಸಲಾಗಿದೆ. ಇಲ್ಲಿನ ಸರ್ಕಾರಿ ಆಸ್ವತ್ರೆಯ ಎ.ಎನ್.ಎಂ. ಆಗಿ ಕಾರ್ಯ ನಿರ್ವಹಿಸುತ್ತಿರುವ ರತ್ನಮ್ಮ ರವರ ಪತಿ ಕೃಷ್ಣಪ್ಪ ಬರುತ್ತಿರುವಾಗ ವೇಗವಾಗಿ ಬಂದ ಏಸ್ಗಾಡಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರೋಗಿಗಳಿಗೆ ಹಣ್ಣು ವಿತರಣೆ
ಗೌರಿಬಿದನೂರು: ಬುದ್ಧ ಪೌರ್ಣಮಿ ಅಂಗವಾಗಿ ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಲಾ ಬಳಗದ ವತಿಯಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಣೆ ಮಾಡಲಾಯಿತು. ಕಲಾ ಬಳಗದ ಅಧ್ಯಕ್ಷ ವೈ.ಟಿ. ಪ್ರಸನ್ನಕುಮಾರ್, ವೈದ್ಯಾಧಿಕಾರಿ ಡಾ. ಶ್ಯಾಮಸುಂದರ್, ವೈದ್ಯರಾದ ಶೇಷಗಿರಿರಾವ್, ಕಸಪ ಅಧ್ಯಕ್ಷ ಡಿ.ಜೆ. ಚಂದ್ರಮೋಹನ್, ಕಸಾಪ ಕಾರ್ಯದರ್ಶಿ ಹರೀಶ್ ಹತ್ವಾರ್, ಜಿವಿಕ ಲಕ್ಷ್ಮೀನಾರಾಯಣ, ರಾಮರಾವ್, ಹರೀಶ್, ಕಲ್ಲನಾಯಕನಹಳ್ಳಿ ಮುನಿಯಪ್ಪ ಇದ್ದರು.
ವ್ಯಕ್ತಿ ನೇಣಿಗೆ ಶರಣು
ಟೇಕಲ್: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬ ಟೇಕಲ್ನ ತೊರಹಳ್ಳಿಯಲ್ಲಿ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ. ಶ್ರೀನಿವಾಸ್ (35) ಮೃತ ವ್ಯಕ್ತಿ. ಈತ ತೊರಹಳ್ಳಿ ನಿವಾಸಿಯಾಗಿದ್ದು, ತನ್ನ ಹೆಂಡತಿ ಮನೆ ಚಿಕ್ಕತಿರುಪತಿ ಬಳಿ ಸಂಸಾರ ಮಾಡುತ್ತಿದ್ದ. ಇಬ್ಬರು ಗಂಡು ಮಕ್ಕಳಿದ್ದಾರೆ. ನಿನ್ನೆಯಷ್ಟೆ ಊರಿಗೆ ಬಂದು ಗ್ರಾಮದ ಹೊಂಗೆ ಮರಕ್ಕೆ ತನ್ನ ಲುಂಗಿಯಲ್ಲೆ ನೇಣು ಹಾಕಿಕೊಂಡಿದ್ದಾನೆ. ಸಾಲದ ಸುಳಿಯಲ್ಲಿ ಸಿಕ್ಕಿದ್ದ ಎನ್ನಲಾಗಿದೆ. ಮಾಸ್ತಿ ಪಿಎಸ್ಐ ಸಿದ್ದಪ್ಪ ಕೇಸು ದಾಖಲಿಸಿಕೊಂಡಿದ್ದಾರೆ.
ಇಂದು ಹಲವೆಡೆ ವಿದ್ಯುತ್ ವ್ಯತ್ಯಯ
ಚಿಂತಾಮಣಿ: ನಗರದ ವಿವಿಧ ಪ್ರದೇಶಗಳಲ್ಲಿ ಸೋಮವಾರ ಬೆಳ್ಳಿಗೆ 10ರಿಂದ ಸಂಜೆ5ರ ವರೆಗೆ ವಿದ್ಯುತ್ ಇರುವುದಿಲ್ಲವೆಂದು ಬೆಸ್ಕಾಂ ಅಧಿಕಾರಿ ಶ್ರೀನಿವಾಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಗರದ ಚೇಳೂರು ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ನಿಲ್ದಾಣ, ಡೈಮೆಂಡ್ ಟಾಕೀಸ್ ರಸ್ತೆ, ಆಜಾದ್ಟೌಕ, ರೈಲ್ವೇ ಸ್ಟೇಷನ್ ರಸ್ತೆ, ದೊಡ್ಡಪೇಟೆ, ಅಗ್ರಹಾರ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳ ಬದಲಾವಣೆ ಮಾಡುವ ಹಿನ್ನೆಲೆಯಲ್ಲಿ ಮೇ 19ರಂದು ಸೋಮವಾರ ಬೆಳ್ಳಿಗೆ 10ರಿಂದ ಸಂಜೆ5ರ ವರೆಗೆ ವಿದ್ಯುತ್ ಇರುವುದಿಲ್ಲವೆಂದು ತಿಳಿಸಿದ್ದಾರೆ.
ಪೌರ ಸಮಸ್ಯೆ?
ಕಳ್ಳ-ಕಾಕರಿಗೆ ರಹದಾರಿ ಇದು
ಕೋಲಾರ ನಗರದ 13ನೇ ವಾರ್ಡಿಗೆ ಸೇರಿದ ಪಿಸಿ ಬಡಾವಣೆಯ ಸಮೀಪದ ರೇಲ್ವೆ ನಿಲ್ದಾಣದ ಪೂರ್ವ ದಿಕ್ಕಿನಲ್ಲಿರುವ ಪ್ರವೇಶ ದ್ವಾರಕ್ಕೆ ಸೂಕ್ತವಾದ ಭದ್ರತೆ ಇಲ್ಲದಿರುವುದರಿಂದ ಕಳ್ಳ-ಕಾಕರಿಗೆ ರಹದಾರಿ ಆದಂತಾಗಿದೆ. ಪಿಸಿ ಬಡಾವಣೆಯಲ್ಲಿ ನಡೆದ ಎರಡು ಮೂರು ಸರಗಳ್ಳತನದ ಹಿನ್ನಲೆಯಲ್ಲಿ ರೇಲ್ವೆ ನಿಲ್ದಾಣಕ್ಕೆ ಹೋಗುವ ಪ್ರವೇಶ ದ್ವಾರದ ಬಗ್ಗೆ ಸಾರ್ವಜನಿಕರು ಪೊಲೀಸ್ ಇಲಾಖೆಯ ಗಮನ ಸೆಳೆದಿದ್ದರೂ ಸಂಬಂಧಪಟ್ಟವರಿಂದ ಗೇಟಟ್ಬಂದೋಬಸ್ತ್ ಮಾಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ರೇಲ್ವೆ ನಿಲ್ದಾಣಕ್ಕೆ ಪಿಸಿ ಬಡಾವಣೆ,ಜಯನಗರ,ಹಾರೋಹಳ್ಳಿ, ಉದಯಗಿರಿ, ಚಾಮುಂಡೇಶ್ವರಿ ನಗರ ಇನ್ನಿತರ ಕಡೆಗಳಿಂದ ಜನರು ಪೂರ್ವದಿಕ್ಕಿನಿಂದ ಹಾದು ಹೋಗಲು ಗೇಟ್ ಇರುವುದು ಒಳ್ಳೆಯದೆ ಆದರೂ ರೇಲ್ವೆ ಇಲಾಖೆಯವರು ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸದಿರುವುದರಿಂದ ಸರಗಳ್ಳರು ತಮ್ಮ ಕೆಲಸ ಮುಗಿಸಿ ಸುಲಭವಾಗಿ ತಪ್ಪಿಸಿಕೊಳ್ಳುವುದಕ್ಕೆ ಸಹಾಯವಾಗುತ್ತಿರುವುದರಿಂದ ಕೂಡಲೇ ಗೇಟ್ ಬಳಿ ಬಂದೋಬಸ್ತ್ ಮಾಡುವುದು ಒಳ್ಳೆಯದು.
ಸತ್ಯನಾರಾಯಣರಾವ್, ಪಿಸಿ ಬಡಾವಣೆ, ಕೋಲಾರ.
ಎಂ.ಜಿ ರಸ್ತೆಯ ಅಂದ ಕೆಡಿಸಿದ ಪ್ಲಾಸ್ಟಿಕ್
ಕೋಲಾರದ ಪ್ರತಿಷ್ಠಿತ ವಾಣಿಜ್ಯ ಕೇಂದ್ರವಾದ ಎಂ.ಜಿ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಕೆಜಿ ಪ್ಸಾಸ್ಟಿಕ್ ಸಹಿತ ಘನತ್ಯಾಜ್ಯ ಶೇಖರಣೆ ಆಗುತ್ತಿದ್ದು ಇದನ್ನು ಸೂಕ್ತವಾದ ಜಾಗದಲ್ಲಿ ವಿಲೇವಾರಿ ಮಾಡಲು ಘಟಕವಿಲ್ಲದೆ ಎಂ.ಜಿ. ರಸ್ತೆಯಲ್ಲಿನ ಖಾಸಗಿ ನಿವೇಶನದಲ್ಲಿ ಸುರಿಯಲಾಗುತ್ತಿದೆ.ನಗರಸಭೆಯ ಅಧಿಕಾರಿಗಳು ಮತ್ತು ಈ ಭಾಗದ ನಗರಸಭೆ ಸದಸ್ಯರು ನೋಡಿ ನೋಡದಂತೆ ಇರುವುದರಿಂದ ಪ್ಲಾಸ್ಟಿಕ್ ರಾಶಿ ಹೆಚ್ಚಾಗುತ್ತಿದೆ. ಎಂ.ಜಿ ರಸ್ತೆಯ ಅಂದ ಹಾಳಾಗುತ್ತಿರುವುದಲ್ಲದೆ ಪರಿಸರ ಹಾನಿ ಆಗುತ್ತಿರುವುದರಿಂದ ನಗರಸಭೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕೂಡಲೇ ಖಾಸಗಿ ನಿವೇಶನದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಹಾಗೂ ಕಸಕಡ್ಡಿ ತೆರವು ಮಾಡಿಸಿ ನಿವೇಶನದಲ್ಲಿ ಇನ್ನು ಮುಂದೆ ಯಾರೂ ಕಸ ಹಾಕದಂತೆ ಸೂಚಿಸದಿದ್ದರೆ ಎಂ.ಜಿ ರಸ್ತೆ ಗಬ್ಬುನಾರುವುದರಲ್ಲಿ ಅನುಮಾನವಿಲ್ಲ.
ಬಾಲಕೃಷ್ಣ, ಎಂಜಿ ರಸ್ತೆ ನಿವಾಸಿ, ಕೋಲಾರ
ಕೊತ್ತಕೋಟೆ ನೀರಿನ ಟ್ಯಾಂಕ್ ದುರಸ್ತಿ ಪಡಿಸಿ
ಇಂದೋ ನಾಳೆಯೋ ಮುರಿದು ಬಿಳುವ ಹಂತದಲ್ಲಿರುವ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ದುರಸ್ತಿ ಪಡಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಗೂಳೂರು ಹೋಬಳಿಯ ಕೊತ್ತಕೋಟೆಯಲ್ಲಿ ಕಳೆದ 15 ವರ್ಷಗಳ ಹಿಂದೆ ಗ್ರಾಮದ ಜನತೆಗೆ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಟ್ಯಾಂಕ್ ನಿರ್ಮಾಣ ಮಾಡಲಾಗಿತ್ತು. ಕಳೆದ 3 ವರ್ಷಗಳ ಹಿಂದೆ ಟ್ಯಾಂಕ್ನಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಗ್ರಾಪಂ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಣ್ಣ ಬಿರಕು ದೊಡ್ಡದಾಗಿದೆ. ಟ್ಯಾಂಕ್ನ ಸಿಮೆಂಟ್ ಕಂಬಗಳಲ್ಲಿ ಕಾಂಕ್ರಿಟ್ ಉದರಿಹೋಗಿರುವ ಪರಿಣಾಮ ಟ್ಯಾಂಕ್ ಅಸ್ತಿಪಂಜರದಂತಾಗಿದ್ದು ಇಂದೋ ನಾಳೆಯೋ ಮುರಿದು ಬೀಳುವ ಸ್ಥಿತಿ ತಲುಪಿದೆ. ಇದರಿಂದ ಭಯ ಭೀತರಾಗಿರುವ ಗ್ರಾಮಸ್ಥರು ಜೀವವನ್ನು ಅಂಗೈಯಲ್ಲಿ ಹಿಡಿದು ಓಡಾಡುವಂತಾಗಿದೆ.
ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಗ್ರಾಪಂಗೆ ಅನೇಕ ಸಲ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಟ್ಯಾಂಕ್ ಇರುವ ಸ್ಥಳಕ್ಕೆ ಕೂಗಳತೆಯ ದೂರದಲ್ಲಿಯೇ ಸರ್ಕಾರಿ ಪ್ರಾಥಮಿಕ ಶಾಲೆ ಇರುವುದರಿಂದ ಶಾಲಾ ಮಕ್ಕಳು ಈ ಟ್ಯಾಂಕ್ ಬಳಿ ಆಟವಾಡುತ್ತಿರುತ್ತಾರೆ. ಆಕಸ್ಮಿಕವಾಗಿ ಟ್ಯಾಂಕ್ ಮುರಿದು ಬಿದ್ದು ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂಬುದೆ ತಿಳಿಯುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಶಿಥಿಲಾವಸ್ಥೆಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ದುರಸ್ತಿ ಪಡಿಸುವ ಮೂಲಕ ಆಗಬಹುದಾದ ಅನಾಹುತ ತಪ್ಪಿಸಬೇಕಾಗಿದೆ.
ಬಿ.ಟಿ. ಚಂದ್ರಶೇಖರರೆಡ್ಡಿ. ಬಾಗೇಪಲ್ಲಿ