ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಿರ್ಧಾರ ಎಡವಟ್ಟು: ಎಚ್ಡಿಕೆಗೆ ಬಿಕ್ಕಟ್ಟು

ತೆಗೆದುಕೊಂಡ ಎರಡು ಎಡವಟ್ಟಿನ ನಿರ್ಧಾರಗಳಿಂದ ಮಾಜಿ ಸಿಎಂ....

Vishwanath S
Updated On : 19 May 2014, 12:57 pm

ರಾಮನಗರ: ತೆಗೆದುಕೊಂಡ ಎರಡು ಎಡವಟ್ಟಿನ ನಿರ್ಧಾರಗಳಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಮನಗರ ಜಿಲ್ಲಾ ರಾಜಕಾರಣದಲ್ಲಿ ಪ್ರಾಬಲ್ಯಕ್ಕೆ ಕುತ್ತು ತಂದುಕೊಂಡಿದ್ದಾರೆ. ಇಲ್ಲೀಗ ತಮ್ಮ ರಾಜಕೀಯ ಕಡುವೈರಿ ಡಿಕೆಶಿ ಪಾರುಪತ್ಯಕ್ಕೆ ರಹದಾರಿ ಮಾಡಿಕೊಟ್ಟು ಪರಿತಪಿಸುತ್ತಿದ್ದಾರೆ.
ಮರಳಿ ಶಾಸಕರಾಗಿ ಸಂಸದ ಸ್ಥಾನಕ್ಕೆ ಉಪಚುನಾವಣೆ ತಂದೊಡ್ಡಿದ್ದು, ಮತ್ತೆ ಸಂಸದರಾಗಲು ಚಿಕ್ಕಬಳ್ಳಾಪುರಕ್ಕೆ ಕ್ಷೇತ್ರಾಂತರ ಮಾಡಿದ್ದೇ ಕುಮಾರಸ್ವಾಮಿ ಅವರ ರಾಜಕಾರಣಕ್ಕೆ ಪ್ರಸ್ತುತ ಮುಳುವಾಗಿರುವ ಆ ಎರಡು ನಿರ್ಧಾರಗಳಾಗಿವೆ.
ಎಚ್‌ಡಿಕೆ ರಾಜಕೀಯ ಮೇಲಾಟ: ವಿಧಾನಸಭೆ ಮತ್ತು ಲೋಕಸಭೆ ಹೀಗೆ ಎರಡು ದೋಣಿ ಮೇಲೆ ಕಾಲಿಟ್ಟು ಪಯಣಿಸುವ ಕುಮಾರಸ್ವಾಮಿ ಪ್ರಯತ್ನ ಇದೇ  ಮೊದಲಲ್ಲ. 1999ರ ಚುನಾವಣೆಯಲ್ಲಿ ಕನಕಪುರದಿಂದ ಲೋಕಸಭೆಗೆ, ಸಾತನೂರಿನಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋಲು ತಂದುಕೊಂಡಿದ್ದರು.
2008ರಲ್ಲಿ ರಾಮನಗರದಲ್ಲಿ ವಿಧಾನಸಭೆಗೆ ಮರು ಆಯ್ಕೆಯಾದ ಅವರು ವರ್ಷದಲ್ಲೇ ನಡೆದ ಲೋಕಸಭೆ ಚುನಾವಣೆಗೆ ಬೆಂಗಳೂರು ಗ್ರಾಮಾಂತರದಿಂದ ಆಯ್ಕೆಗೊಂಡು, ವಿಧಾನಸಭೆಗೆ ಉಪ ಚುನಾವಣೆ ತಂದೊಡ್ಡಿದ್ದರು.
2013ರಲ್ಲಿ ಸಂಸದರಾಗಿದ್ದುಕೊಂಡೇ ವಿಧಾನಸಭೆಗೆ ಸ್ಪರ್ಧಿಸಿದ್ದರು. ಆಗ ಅವರು ಸಂಸತ್ತಿನ ಕಲಾಪ, ಅಲ್ಲಿ ಮಾತನಾಡಲು ಸಿಗುವ ಅವಕಾಶದ ಬಗ್ಗೆ ಮೂದಲಿಕೆ ಮಾತುಗಳನ್ನಾಡಿ ಮತ್ತೆಂದು ಲೋಕಸಭೆ ಸ್ಪರ್ಧೆಗೆ ಹೋಗಲಾರೆ ಎನ್ನುವ ವಾಗ್ದಾನವನ್ನು ಜನತೆಗೆ ನೀಡಿದ್ದರು.
ರಾಮನಗರದಲ್ಲಿ ಕುಮಾರಸ್ವಾಮಿ ಪ್ರಚಾರಕ್ಕೆ ಬಾರದೆಯೂ 25 ಸಾವಿರ ಮತಗಳ ಅಂತರದ ಗೆಲವು ದಾಖಲಿಸಿದರು. ಈ ಬಾರಿ ಚುನಾವಣೆ ಘೋಷಣೆ ಬಳಿಕವೂ ಲೋಕಸಭೆ ಬಿಲ್‌ಕುಲ್  ಸ್ಪರ್ಧೆ ಇಲ್ಲವೆಂದೇ ಹೇಳಿಕೊಂಡು ಬಂದಿದ್ದರು. ಕಡೆಗೆ, ಚಿಕ್ಕಬಳ್ಳಾಪುರದಿಂದ ಅಖಾಡಕ್ಕೆ ಇಳಿದರು.
ಎರವಾಗಿದ್ದು ಹೀಗೆ: ವಿಧಾನಸಭೆಯಲ್ಲಿ ಜೆಡಿಎಸ್ ಪ್ರತಿಪಕ್ಷವಾಗಿ ಹೊರ ಹೊಮ್ಮುತ್ತಿದ್ದಂತೆಯೇ ಆಪ್ತಮಿತ್ರರಾದ ಚಲುವರಾಯಸ್ವಾಮಿ ಮತ್ತು ಕುಮಾರಸ್ವಾಮಿ ಸಂಸದ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು. ಎಂಟು ತಿಂಗಳು ಬಾಕಿ ಇರುವಾಗ ಮಂಡ್ಯ ಮತ್ತು ಇಲ್ಲಿ ಉಭಯ ಕಡೆ ಉಪ ಚುನಾವಣೆ ನಡೆಯಿತು. ಅಷ್ಟರಲ್ಲಿ ಡಿ.ಕೆ.ಶಿವಕುಮಾರ್ ಸಚಿವ ಸ್ಥಾನ ಸಿಗದ ಹತಾಶೆಯಲ್ಲಿದ್ದರು. ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಿ, ಕ್ಷೇತ್ರ ಕೈವಶ ಮಾಡಿಕೊಳ್ಳಲು ಹವಣಿಸಿದ್ದ ಕಾಂಗ್ರೆಸ್ ಹೈಕಮಾಂಡ್ ಕಣ್ಣಿಗೆ ಆಗ ಬಿದ್ದವರೇ ಡಿ.ಕೆ.ಸುರೇಶ್.  ಆ ಚುನಾವಣೆ ಸುರೇಶ್ ಮಾತ್ರವಲ್ಲದೆ ಶಿವಕುಮಾರ್ ಪಾಲಿಗೂ ವರದಾನವಾಯಿತು.
ತಮ್ಮೆಲ್ಲ ಶಕ್ತಿ ಧಾರೆ ಎರೆದ ಶಿವಕುಮಾರ್ ಸಹೋದರನನ್ನು ಸಂಸದರಾಗಿಸಿದರು. ಆಗ ಉಪ ಚುನಾವಣೆ  ಬಾರದಿದ್ದರೆ ಸುರೇಶ್ ಸಂಸತ್ತಿಗೆ, ಶಿವಕುಮಾರ್ ಸಂಪುಟಕ್ಕೆ ಪ್ರವೇಶ ಪಡೆಯಲು ಇನ್ನೆಷ್ಟು ದಿನ  ಕಾಯಬೇಕಿತ್ತೋ. ಹೀಗಾಗಿ ಕುಮಾರಸ್ವಾಮಿ ತಾವಾಗಿ ಎದುರಾಳಿಗಳ ಕೈ ಮೇಲು ಮಾಡಿದರು.
ಸ್ಪರ್ಧೆ ಇಲ್ಲ ಎನ್ನುತ್ತಲೇ ಚಿಕ್ಕಬಳ್ಳಾಪುರದಲ್ಲಿ ಅಖಾಡಕ್ಕೆ ಇಳಿದ ಕುಮಾರಸ್ವಾಮಿ, ಅಲ್ಲೂ ಹೀನಾಯ ಸೋಲು ಕಂಡಿದ್ದಾರೆ. ಅವರ ಕ್ಷೇತ್ರಾಂತರದಿಂದ ಬೆಂಗಳೂರು ಗ್ರಾಮಾಂತರದಲ್ಲಿ ವಿಶೇಷವಾಗಿ ರಾಮನಗರದಲ್ಲಿ ಜೆಡಿಎಸ್ ಸ್ಥಿತಿ ಮೂರಾಬಟ್ಟೆಯಾಯಿತು.
ಕುಮಾರಸ್ವಾಮಿ ಕ್ಷೇತ್ರಾಂತರವೇ ಉಭಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬತ್ತಳಿಕೆಯ ಪ್ರಮುಖ ಅಸ್ತ್ರವಾಯಿತು. ತಮ್ಮ ನಾಯಕನೇ ಕ್ಷೇತ್ರ ತೊರೆದ ಮೇಲೆ ಇನ್ನೇನು ಎಂದು ಕೆಲ ಜೆಡಿಎಸ್ ಮುಖಂಡರು ಗುಳೆ ಹೊರಟರೆ, ಹಲವರು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡರು.
ಕುಮಾರಸ್ವಾಮಿ ಸ್ವಕ್ಷೇತ್ರ ರಾಮನಗರ ಸೇರಿದಂತೆ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿರುವುದು ಡಿಕೆಎಸ್ ಸಹೋದರರ ಪ್ರಾಬಲ್ಯವೃದ್ಧಿಗೆ ಸಾಕ್ಷಿಯಾಗಿದೆ. ಕರ್ಮಭೂಮಿ ರಾಮನಗರದಲ್ಲಿ ಕುಮಾರಸ್ವಾಮಿ ಪಕ್ಷದ ಪುನರ್ ಸಂಘಟನೆಗೆ ಇಳಿಯುವ ಸ್ಥಿತಿ ಬಂದೊದಗಿದೆ. ಆದರೆ ಅದು ಸುಲಭವಂತೂ ಅಲ್ಲ. ಜನರು ಅವರನ್ನು ನಂಬದ ಸ್ಥಿತಿ ತಲುಪಿರುವುದಂತೂ ಸತ್ಯ.


-ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement