ನಂಜಯ್ಯಮಠ ನೇತೃತ್ವದ ಸಮಿತಿಯಿಂದ ಅರ್ಜಿ ಸ್ವೀಕಾರ
ಕ.ಪ್ರ.ವಾರ್ತೆ ರಾಮನಗರ ಮೇ 21
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರಡಿ ಗ್ರಾಮ ಪಂಚಾಯಿತಿಗಳ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ ರಚನೆಗೊಂಡಿರುವ ಮಾಜಿ ಶಾಸಕ ಎಸ್.ಜಿ. ನಂಜಯ್ಯಮಠ ನೇತೃತ್ವದ ಸಮಿತಿಯು ಜಿಲ್ಲಾ ವ್ಯಾಪ್ತಿಯ ಗ್ರಾ.ಪಂ. ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿತು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಗ್ರಾ.ಪಂ.ಗಳ ಪುನರ್ ವಿಂಗಡಣೆ, ಪರಿಷ್ಕರಣೆ, ಕೇಂದ್ರ ಸ್ಥಾನಗಳ ಬದಲಾವಣೆಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಿ ಮಾತನಾಡಿದ ಅವರು, 1991ರ ಜನಗಣತಿ ಆಧಾರದ ಮೇಲೆ ಗ್ರಾ.ಪಂ.ಗಳನ್ನು ವಿಂಗಡಿಸಲಾಗಿದೆ. 20 ವರ್ಷದಿಂದ ಪುನರ್ ವಿಂಗಡಣೆಯಾಗಿಲ್ಲ. ಹೀಗಾಗಿ ಕೆಲವು ನ್ಯೂನತೆಗಳು ತಲೆದೋರಿದ್ದು, ಇದರ ನಿವಾರಣೆಗಾಗಿ 2011ರ ಜನಗಣತಿ ಆಧಾರದ ಮೇಲೆ ಗ್ರಾ.ಪಂ.ಗಳನ್ನು ಪುನರ್ ವಿಂಗಡಣೆ ಮಾಡಲು ಸಮಿತಿ ರಚಿಸಲಾಗಿದೆ ಎಂದರು.
ಆಡಳಿತಾತ್ಮಕ ಹಾಗೂ ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ 2011ರ ಜನಸಂಖ್ಯೆಗೆ ಅನುಗುಣವಾಗಿ ಗಾ.ಪಂ.ಗಳಪುನರ್ ವಿಂಗಡಣೆ ಅತ್ಯಗತ್ಯವಾಗಿದೆ. 5 ರಿಂದ 7 ಸಾವಿರ ಜನಸಂಖ್ಯೆಗೆ ಒಂದರಂತೆ ಗ್ರಾ.ಪಂ.ಗಳನ್ನು ರಚಿಸಲಾಗುವುದು. ಹಲವು ಗ್ರಾಮಗಳ ಗುಂಪುಗಳಿಂದ ರಚನೆಗೊಂಡಿರುವ ಗ್ರಾ.ಪಂ.ಗಳನ್ನು ಜನಸಂಖ್ಯೆಗನುಗುಣವಾಗಿ ಪನರ್ ವಿಂಗಡಿಸಲಾಗುವುದು ಎಂದು ಹೇಳಿದರು.
ಅನುಕೂಲ: ಒಂದೇ ಗ್ರಾಮವು ಎರಡು ಪಂಚಾಯ್ತಿಗಳಿಗೆ ಸೇರಿದ ಸಾಕಷ್ಟು ಉದಾಹರಣೆಗಳಿವೆ. ಇದಲ್ಲದೇ ಈಗಿನ ಗ್ರಾ.ಪಂ. ವ್ಯಾಪ್ತಿಯು 8 ರಿಂದ 12 ಕಿ.ಮೀ.ವರೆಗೆ ಇದ್ದು, ಈಗ 5 ಕಿಮೀ ವ್ಯಾಪ್ತಿಗೆ ಒಳಪಡುವ ಗ್ರಾಮಗಳನ್ನು ಸೇರಿಸಿ ಒಂದು ಗ್ರಾಮ ಪಂಚಾಯಿತಿಯನ್ನು ರಚಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ಸಮಿತಿಯು ರಾಜ್ಯ ವ್ಯಾಪ್ತಿ ಪ್ರವಾಸ ಕೈಗೊಂಡಿದೆ. ಆಗಸ್ಟ್ ಕೊನೆಯವರೆಗೆ ಅರ್ಜಿಗಳನ್ನು ಸ್ವೀಕರಿಸಲಿದೆ. ಈ ಅರ್ಜಿಗಳ ಆಧಾರದ ಮೇಲೆ ವರದಿ ತಯಾರಿಸಿ, ಸೆಪ್ಟೆಂಬರ್ನಲ್ಲಿ ಸರ್ಕಾರಕ್ಕೆ ಸಲ್ಲಿಸಲಿದೆ. ಆಗಸ್ಟ್ವರೆಗೂ ಸಾರ್ವಜನಿಕರು ಅರ್ಜಿಗಳನ್ನು ಸಲ್ಲಿಸಬಹುದು ಎಂದರು.
ಕೋಟಿಗಟ್ಟಲೇ ಅನುದಾನ: ಈ ಹಿಂದೆ ಪ್ರತಿ ಗ್ರಾ.ಪಂ.ಗೆ ಕೆಲವೇ ಸಾವಿರಗಳಷ್ಟು ಅನುದಾನ ಬರುತ್ತಿತ್ತು. ಆದರೆ, ಇಂದು ಸುವರ್ಣ ಗ್ರಾಮ, ನರೇಗಾ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಹರಿದು ಬರುತ್ತಿದೆ. ಹೀಗಾಗಿ ಗ್ರಾ.ಪಂ.ಗಳು ಆರ್ಥಿಕವಾಗಿ ಸದೃಢವಾಗಿವೆ. ಇವುಗಳನ್ನು ಇನ್ನಷ್ಟು ಸಬಲಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಅದಕ್ಕಾಗಿ ಸಾರ್ವಜನಿಕರು, ಜನಪ್ರತಿನಿಧಿಗಳಿಂದ ಸಮಿತಿಯು ಅಭಿಪ್ರಾಯ ಸಂಗ್ರಹಿಸುತ್ತಿದೆ ಎಂದು ನಂಜಯ್ಯಮಠ ತಿಳಿಸಿದರು.
ರಾಮನಗರದ ಕೂಟಗಲ್ ಹಾಗೂ ಲಕ್ಷ್ಮೀಪುರ ಗ್ರಾ.ಪಂ.ಗಳು ದೊಡ್ಡದಾಗಿರುವುದರಿಂದ ಈ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಯರೇಹಳ್ಳಿ, ಅಂಕನಹಳ್ಳಿ, ಚನ್ನೇಗೌಡನದೊಡ್ಡಿ, ಇಬ್ಲುಕಲ್ಲು ಗ್ರಾಮಗಳನ್ನು ಬೇರ್ಪಡಿಸಿ ಹೊಸದಾಗಿ ಯರೇಹಳ್ಳಿ ಪಂಚಾಯಿತಿ ರಚಿಸಬೇಕೆಂದು ಯರೇಹಳ್ಳಿಯ ಬೋರೇಗೌಡ ಮನವಿ ಮಾಡಿದರು. ಹೊಸದಾಗಿ ಗ್ರಾ.ಪಂ. ರಚಿಸಲು ಆ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 5 ಸಾವಿರ ಜನಸಂಖ್ಯೆ ಹೊಂದಿರಬೇಕು. 5 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಇದ್ದಲ್ಲಿ ತಮ್ಮ ಮನವಿಯನ್ನು ಪರಿಗಣಿಸಲಾಗುವುದು ಎಂದು ಸಮಿತಿ ಆಶ್ವಾಸನೆ ನೀಡಿತು.
ಮನವಿ: ಮಾಗಡಿಯ ಕಣ್ಣೂರು ಗ್ರಾ.ಪಂ.ನ ಕೇಂದ್ರ ಸ್ಥಾನವನ್ನು ಸುಗ್ಗನಹಳ್ಳಿಗೆ ಬದಲಾಯಿಸುವಂತೆ ಕಣ್ಣೂರು ಗ್ರಾ.ಪಂ. ಅಧ್ಯಕ್ಷ ಕುಮಾರ್ ಮನವಿ ಮಾಡಿದರು. ಪ್ರಸ್ತುತ ಕೇಂದ್ರ ಸ್ಥಾನವಾಗಿರುವ ಕಣ್ಣೂರಿನಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲ. ಆದ್ದರಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿರುವ ಸುಗ್ಗನಹಳ್ಳಿಗೆ ಬದಲಾಯಿಸಬೇಕು ಎಂದರು.
ಗ್ರಾ.ಪಂ.ನ ಕೇಂದ್ರ ಸ್ಥಾನವನ್ನು ಬದಲಿಸಿದರೆ ಆಡಳಿತಾತ್ಮಕ ಸಮಸ್ಯೆಗಳು ಉದ್ಭವವಾಗುತ್ತವೆ. ಆದ್ದರಿಂದ ಪಂಚಾಯಿತಿಯು ಸರ್ವಾನುಮತದಿಂದ ಈ ಸಂಬಂಧ ಠರಾವು ಅಂಗೀಕರಿಸಿದಲ್ಲಿ ಬದಲಾವಣೆಗೆ ಕ್ರಮ ಕೈಗೊಳ್ಳಬಹದು ಎಂದು ಸಮಿತಿ ಅಭಿಪ್ರಾಯಪಟ್ಟಿತು.
ಚನ್ನಪಟ್ಟಣದ ಹನುಮಪ್ಪನದೊಡ್ಡಿ ಗ್ರಾಮದ ಗ್ರಾಮಸ್ಥರು ತಮ್ಮ ಗ್ರಾಮವು ಮೈಲನಾಯಕನಹಳ್ಳಿ ಹಾಗೂ ಹೆಚ್.ಬ್ಯಾಡರಹಳ್ಳಿ ಎರಡೂ ಪಂಚಾಯಿತಿಗಳ ವ್ಯಾಪ್ತಿಗೆ ಒಳಪಟ್ಟಿದೆ. ಇದನ್ನು ಸರಿಪಡಿಸಿ ಗ್ರಾಮವನ್ನು ಮೈಲನಾಯಕನಹಳ್ಳಿ ಪಂಚಾಯತಿಗೆ ಸೇರಿಸುವಂತೆ ಹಾಗೂ ಮಾಳಗ ಗ್ರಾಮದ ಪ್ರದೀಪ್ ತಮ್ಮ ಗ್ರಾಮವನ್ನು ಮಳೂರುಪಟ್ಟಣ ಗ್ರಾ.ಪಂ.ನಿಂದ ಬೇರ್ಪಡಿಸಿ ಅಕ್ಕೂರು ಗ್ರಾ.ಪಂ.ಸೇರಿಸಲು ವಿನಂತಿಸಿದರು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಬಿ.ಸಿ.ಶಿವಾನಂದ, ಎಸ್.ಕೆ.ಭಾಗವತ್, ಎ.ಆರ್.ಸುಧಾಮಣಿ, ಅಬ್ದುಲ್ ನಜೀರ್ ಸಾಬ್, ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧಿಕಾರಿ ಗಣೇಶ್ ಪ್ರಸಾದ್, ವಿಶೇಷ ಅಧಿಕಾರಿ ಒಡೆಯರ್, ಜಿ.ಪಂ. ಸಿಇಒ ಡಾ.ಎಂ.ವಿ. ವೆಂಕಟೇಶ್ ಹಾಜರಿದ್ದರು.