ರಸ್ತೆ ಬದಿಯ ಮೋರಿಗೆ ಬೈಕ್ ಡಿಕ್ಕಿ: ಒಬ್ಬ ಸಾವು
ಸೂಲಿಬೆಲೆ: ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಸತ್ಯವಾರ ಬಳಿ ರಸ್ತೆ ಬದಿಯ ಮೋರಿಗೆ ಬೈಕ್ ಒಂದು ಡಿಕ್ಕಿ ಹೊಡೆದು ಸವಾರನೊಬ್ಬ ಸಾವನ್ನಪ್ಪಿ, ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಅಶೋಕ (24) ಸಾವನ್ನಪ್ಪಿರುವ ರ್ದುದೈವಿ. ಬಾಬು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದಾರೆ.
ಮೃತ ಅಶೋಕ ಮತ್ತು ಬಾಬು ಮೂಲತಃ ಶ್ರೀನಿವಾಸಪುರ ತಾಲೂಕಿನ ಒಳಗೆರೆ ಗ್ರಾಮದವರಾಗಿದ್ದು ಸಮಾರಂಭಗಳಿಗೆ ಹೂವಿನ ನೇಮ್ಬೋರ್ಡ್ ಹಾಕುವ ಕೆಲಸ ಮಾಡುತ್ತಿದ್ದರು. ಮಂಗಳವಾರ ರಾತ್ರಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡ ಸ್ವಗ್ರಾಮದತ್ತ ಹೋಗುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಅಶೋಕ ಸ್ಥಳದಲ್ಲಿ ಸಾವನ್ನಪ್ಪಿದ್ದು, ಬಾಬು ಗಾಯಗೊಂಡಿದ್ದಾನೆ. ಮಂಗಳವಾರ ರಾತ್ರಿ ಮಳೆ ಬರುತ್ತಿದ್ದಾಗ ಈ ಘಟನೆ ನಡೆದಿದ್ದು, ಮೋರಿಗೆ ಕೆಳಗೆ ಬಿದ್ದ ವ್ಯಕ್ತಿಗಳನ್ನು ಯಾರು ನೋಡಿಲ್ಲ. ಬುಧವಾರ ಬೆಳಿಗ್ಗೆ ದಾರಿ ಹೋಕರು ಇಬ್ಬರು ವ್ಯಕ್ತಿಗಳ ಮತ್ತು ಬೈಕ್ ಬಿದ್ದಿರುವದನ್ನು ಗಮನಿಸಿ ನಂದಗುಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದಾಗ ಅಶೋಕ ಮೃತನಾಗಿದ್ದು, ಬಾಬುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂದಗುಡಿಯಲ್ಲಿ ಪ್ರಕರಣ ದಾಖಲಾಗಿದೆ.