ಸೂಲಿಬೆಲೆ ಹೋಬಳಿಯಲ್ಲಿ ಉತ್ತಮ ಮಳೆ
ಸೂಲಿಬೆಲೆ: ಮಂಗಳವಾರ ರಾತ್ರಿ ಹೊಸಕೋಟೆ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಅತಿ ಹೆಚ್ಚು ಮಳೆ ಸೂಲಿಬೆಲೆಯಲ್ಲಿ ಸುರಿದಿದ್ದು, ಅನುಗೊಂಡಹಳ್ಳಿ ಹೋಬಳಿಯಲ್ಲಿ ಕಡಿಮೆ ಮಳೆಯಾಗಿದೆ.
ಹೊಸಕೋಟೆ ತಾಲೂಕಿನ ಐದು ಹೋಬಳಿಗಳಲ್ಲಿ ಮೇ 20 ರಂದು ರಾತ್ರಿ ಮಳೆಯಾಗಿದ್ದು, ಸೂಲಿಬೆಲೆ ಹೋಬಳಿಯಲ್ಲಿ 40.06.ಮೀ.ಮೀ.ಕಸಬಾ ಟೌನ್ 18.02 ಮೀ.ಮೀ, ಜಡಿಗೇನಹಳ್ಳಿ ಹೋಬಳಿಯಲ್ಲಿ 15.2 ಮೀಮೀ, ಅನುಗೊಂಡಹಳ್ಳಿ ಹೋಬಳಿಯಲ್ಲಿ ಅತಿ ಕಡಿಮೆ 05.01 ಮೀ ಮೀ ಮಳೆಯಾಗಿದೆ. ನಂದಗುಡಿ ಹೋಬಳಿಯಲ್ಲಿ ಮಳೆ ಮಾಪನ ದುರಸ್ಥಿಯಾಗಿದ್ದು, ಮಳೆಯ ಪ್ರಮಾಣ ಲಭ್ಯವಾಗುತ್ತಿಲ್ಲ.
ಬಿತ್ತನೆ ಬೀಜಗಳ ದಾಸ್ತಾನು: ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಹೋಬಳಿ ಕೇಂದ್ರಗಳಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಬಿತ್ತನೆ ಬೀಜಗಳ ದಾಸ್ತಾನಿದ್ದು ರೈತರು ಸಕಾಲಕ್ಕೆ ಪಡೆದುಕೊಳ್ಳುವಂತೆ ಕೃಷಿ ಇಲಾಖಾಧಿಕಾರಿಗಳು ಮನವಿ ಮಾಡಿದ್ದಾರೆ. ಬಿತ್ತನೆಗೆ ಅಗತ್ಯವಾಗಿರುವ ರಾಗಿ, ತೊಗರಿ, ಅಲಸಂದಿ ಇತ್ಯಾದಿ ಬೀಜಗಳು ಲಭ್ಯ ಇವೆ. ಇತ್ತೀಚ್ಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಬಹುತೇಕ ಕಡೆ ಅಂತರ್ಜಲ ಕುಸಿತಗೊಂಡಿದ್ದು ಬಹುತೇಕ ರೈತರು ವಾರ್ಷಿಕ ಮಳೆಯನ್ನು ನಂಬಿ ರಾಗಿ ಬಿತ್ತನೆಗೆ ಮುಂದಾಗಿದ್ದಾರೆ. ಸಕಾಲಕ್ಕೆ ಉತ್ತಮ ಮಳೆ ಸುರಿದರೇ ಉತ್ತಮ ರಾಗಿ ಬೆಳೆಯನ್ನು ನಿರೀಕ್ಷೆ ಮಾಡಬಹುದು. ಮೇ 10 ರಿಂದ ಕೃತಿಕಾ ಮಳೆ ಪ್ರಾರಂಭವಾಗಿದ್ದು ಮೇ 25ರವರೆಗೂ ಇರುತ್ತೆ. ನಂತರ ಮಳೆಯ ನಕ್ಷತ ಬದಲಾಗಲಿದ್ದು, ಮುಂದಿನ ದಿನಗಳಲ್ಲಿ ಮಳೆಯಾಗುವ ನಿರೀಕ್ಷೆಯನ್ನು ರೈತರು ಹೊಂದಿದ್ದಾರೆ.