8 ವರ್ಷ 17ಡಿಸಿಗಳು!
ರಾಮನಗರ: ಈ ಜಿಲ್ಲೆ ರಚನೆಗೊಂಡು ಇನ್ನೂ ತುಂಬಿಲ್ಲ ವರ್ಷ 8. ಇಷ್ಟರಲ್ಲಾಗಲೇ ಜಿಲ್ಲಾಧಿಕಾರಿ ಕುರ್ಚಿಯಲ್ಲಿ ಕುಳಿತು ಮೇಲೇಳುತ್ತಿದ್ದಾರೆ 16ನೇ ಅಧಿಕಾರಿ. ಈಗ 17ರ ಸ್ಥಾನ ತುಂಬಲು ಆಗಮಿಸುತ್ತಿರುವ ಎಫ್.ಆರ್. ಜಮಾದಾರ್ ದರ್ಬಾರ್ ಎಷ್ಟು ದಿನ?
ಇದು, ಜಿಲ್ಲಾಧಿಕಾರಿ ಹುದ್ದೆಗೆ ರಾಜ್ಯದ ಬೇರೆ ಯಾವ ಜಿಲ್ಲೆಯಲ್ಲೂ ಆಗದಷ್ಟು ಬದಲಾವಣೆಗಳನ್ನು ಕಂಡಿರುವ ಮತ್ತು ಈ ವಿಷಯದಲ್ಲಿ ದಾಖಲೆ ಬರೆಯಲು ಹೂರಟ ರಾಮನಗರ ಜಿಲ್ಲೆ ಜನತೆಯನ್ನು ಕಾಡುತ್ತಿರುವ ಪ್ರಶ್ನೆ.
ಬೆಂಗಳೂರು ಗ್ರಾಮಾಂತರದಿಂದ 2007ರಲ್ಲಿ ಪ್ರತ್ಯೇಕಗೊಂಡ ರಾಮನಗರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಹುದ್ದೆಗೆ 17ನೇ ಬಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ 10ನೇ ಬದಲಾವಣೆ ಕಾಣಲಾಗಿದೆ. ಇದು ಜಿಲ್ಲೆ ಪಾಲಿಗೆ ಶಾಪವೇ ಸರಿ.
5 ಬಾರಿ ಪ್ರಭಾರ: ಜಿಲ್ಲಾಧಿಕಾರಿ ಹುದ್ದೆಗೆ ಆದ ಬದಲಾವಣೆಗಳ ಪೈಕಿ 5 ಬಾರಿ ಪ್ರಭಾರ ನೇಮಕವಾದರೆ, ಉಳಿದ ಡಜನ್ ಸಂಖ್ಯೆಯಷ್ಟು ಬದಲಾವಣೆಗಳನ್ನು ಸರ್ಕಾರದ ಅವೈಜ್ಞಾನಿಕ ವರ್ಗಾವಣೆ ನೀತಿಯಿಂದಲೇ ಕಾಣುವಂತಾಗಿರುವುದು ವಿಪರ್ಯಾಸ.
ಆಗಿರುವ ಒಟ್ಟು ಬದಲಾವಣೆಗಳನ್ನು ಸರಾಸರಿ ಲೆಕ್ಕ ಹಾಕಿದರೆ ಬರೋಬ್ಬರಿ ವರ್ಷಕ್ಕೆ ಎರಡಕ್ಕಿಂತ ಹೆಚ್ಚಿನ ಪ್ರಮಾಣದ್ದಾಗಿದೆ. ಬೆಂಗಳೂರು ಮಗ್ಗುಲಲ್ಲಿರುವ ಈ ಜಿಲ್ಲೆಗೆ ಸೇವಾವಧಿ ಅಂತ್ಯದಲ್ಲಿ ಬಂದ ಇಬ್ಬರು ಇಲ್ಲೇ ನಿವೃತ್ತರಾಗಿದ್ದಾರೆ. ಇಲ್ಲಿ ಕೆಲಸ ನಿಭಾಯಿಸಲಾಗದೆ ಸ್ವತಃ ವರ್ಗಾವಣೆ ಪಡೆದವರು ಇಬ್ಬರು. ಮತ್ತಿಬ್ಬರಿಗೆ ಎತ್ತಂಗಡಿಯ ಸಜೆ ಆಗಿದೆ. ರಾಜಕೀಯ ಸಂಘರ್ಷ, ಅಧೀನ ಅಧಿಕಾರಿಗಳ ಅಸಹಾಕಾರ ಮತ್ತು ಸ್ವೇಚ್ಛಾಚಾರಕ್ಕೆ ಬೇಸತ್ತು ಹೋದವರೂ ಉಂಟು.
ಮಾಫಿಯಾ ಕೈವಾಡ: ಹೇಳಿ ಕೇಳಿ ರಾಮನಗರ ಜಿಲ್ಲೆಯಲ್ಲಿ ಒಂದೆಡೆ ರಿಯಲ್ ಎಸ್ಟೇಟ್ ಅಬ್ಬರ, ಇನ್ನೊಂದೆಡೆ ಮರಳಿನ ಜತೆಗೆ ಕಲ್ಲು ಗಣಿಗಾರಿಕೆಯ ಸಪ್ಪಳವಿದೆ. ಒಟ್ಟು ವಿಸ್ತೀರ್ಣದಲ್ಲಿ ಅರ್ಧದಷ್ಟು ಅರಣ್ಯ, ಗೋಮಾಳ ಸೇರಿದಂತೆ ಸರ್ಕಾರಿ ಜಾಗವಿದೆ. ಭೂ ಕಬಳಿಕೆದಾರರು, ಮಾಫಿಯಾ ಕಬಂದಬಾಹು ಸಾಕಷ್ಟು ವಿಸ್ತಾರಕ್ಕೆ ಚಾಚಿದೆ. ಅಕ್ರಮಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಿಲ್ಲ. ಹಾಗೊಮ್ಮೆ ಮುಂದಾದವರಿಗೆ ಇಲ್ಲಿ ಹೆಚ್ಚು ದಿನ ಉಳಿಗಾಲವಿಲ್ಲ ಎನ್ನುವ ಮಾತು ಜಗಜ್ಜಾಹೀರ.
ಸಚಿವರೂ ಹೊರತಲ್ಲ: ರಾಮನಗರ ಜಿಲ್ಲೆಯಲ್ಲಿ ಕೇವಲ ಅಧಿಕಾರಿಗಳು ಮಾತ್ರವಲ್ಲ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಯೂ ಮಿತಿ ಮೀರಿದೆ. ಪ್ರಸ್ತುತ ಉಸ್ತುವಾರಿ ಹೊಣೆ ಹೊತ್ತಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹತ್ತನೆಯವರು.
ಬಿಜೆಪಿ ಸರ್ಕಾರದಲ್ಲಿ ಸಿ.ಪಿ. ಯೋಗೇಶ್ವರ್ ಅಲ್ಪಾವಧಿ ಉಸ್ತುವಾರಿ ಹೊಣೆ ಹೊತ್ತಿದ್ದರು. ಇವರಿಬ್ಬರನ್ನು ಹೊರತುಪಡಿಸಿದರೆ 8 ಮಂದಿ ಹೊರ ಜಿಲ್ಲೆಯವರೇ. ಇಬ್ಬರು ಉಸ್ತುವಾರಿ ಸಚಿವರಾಗಿದ್ದರಾದರೂ ಜಿಲ್ಲೆಗೆ ಕಾಲಿಡದೇ ಬದಲಾದರು.
ಡಿಸಿ ಕುರ್ಚಿಯಲ್ಲಿ ಕುಳಿತವರು
ಆರ್.ಕೆ. ರಾಜು
ಪೊನ್ನುರಾಜ್
ಮನೀಶ್ ಮಾದ್ಗಿಲ್
ಡಾ.ಕೆ.ಜಿ. ಜಗದೀಶ್
ಜಿ.ಎಲ್. ಚಂದ್ರಶೇಖರ್
ಸಿ.ಪಿ. ಶೈಲಜ(ಪ್ರಭಾರ)
ಆರ್.ಕೆ. ರಾಜು(ಪ್ರಭಾರ)
ಚಕ್ರವರ್ತಿ ಮೋಹನ್
ಎಸ್. ಪುಟ್ಟಸ್ವಾಮಿ
ಎಂ.ಎಸ್. ಅರ್ಚನಾ(ಪ್ರಭಾರ)
ವಿ. ಶ್ರೀರಾಮರೆಡ್ಡಿ
ನವೀನ್ ರಾಜ್ ಸಿಂಗ್
ವಿ. ಶ್ರೀರಾಮರೆಡ್ಡಿ
ಎಂ.ಎಸ್. ಅರ್ಚನಾ(ಪ್ರಭಾರ)
ಡಾ.ಡಿ.ಎಸ್.ವಿಶ್ವನಾಥ್
ಡಾ.ಎಂ.ವಿ. ವೆಂಕಟೇಶ್ (ಪ್ರಭಾರ)
ಎಫ್.ಆರ್. ಜಮಾದಾರ್-ಆಗಮನ ನಿರೀಕ್ಷೆ
ನಮ್ಮ ಉಸ್ತುವಾರಿಗಳಿವರು
ಎಚ್.ಡಿ. ರೇವಣ್ಣ
ಕಟ್ಟಾಸುಬ್ರಹ್ಮಣ್ಯ ನಾಯ್ಡು
ಶ್ರೀರಾಮುಲು
ಉಮೇಶ್ ಕತ್ತಿ
ಬಿ.ಎನ್. ಬಚ್ಚೇಗೌಡ
ಸಿ.ಪಿ. ಯೋಗೇಶ್ವರ್
ಎಂ.ಪಿ. ರೇಣುಕಾಚಾರ್ಯ
ಕೃಷ್ಣ ಬೈರೇಗೌಡ
ಕೆ.ಜೆ. ಜಾರ್ಜ್
ಡಿ.ಕೆ. ಶಿವಕುಮಾರ್
ರಜೆಗೆ ಹೋದವರಿಗೆ ವಿದಾಯ
ಹಿಂದಿನ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಚುನಾವಣಾಧಿಕಾರಿಯ ಕರ್ತವ್ಯ ಮುಗಿಸಿ 20 ದಿನದ ಗಳಿಕೆ ರಜೆ ಬೇಕೆಂದು ಕೋರಿಕೆ ಸಲ್ಲಿಸಿದ್ದರು. ಅದಕ್ಕೆ ಮಂಜೂರಾತಿ ನೀಡಿದ ಸರ್ಕಾರ ರಜೆ ಮೇಲೆ ತೆರಳಿದ ಎರಡನೇ ದಿನದಲ್ಲಿ ಅವರನ್ನು ಎತ್ತಂಗಡಿ ಮಾಡಿದೆ. ರಜೆಯೊಟ್ಟಿಗೆ ಜಿಲ್ಲೆಗೆ ವಿದಾಯದ ಮಾತುಗಳು ಅಧಿಕಾರಿ ವಲಯದಲ್ಲಿ ಕೇಳಿ ಬರುತ್ತಿದ್ದವು. ಅದೀಗ ನಿಜವಾಗಿದೆ. ಜಿಪಂ ಸಿಇಒ ಡಾ.ಎಂ.ವಿ. ವೆಂಕಟೇಶ್ ಪ್ರಭಾರ ಜಿಲ್ಲಾಧಿಕಾರಿಯಾಗಿದ್ದು, ಅವರೇ ಪೂರ್ಣಾವಧಿಗೆ ಬರುತ್ತಾರೆನ್ನುವ ನಿರೀಕ್ಷೆ ಹುಸಿಯಾಗಿದೆ.
ಅಲ್ಲೂ ಹೊಸ ಜಿಲ್ಲೆಯೇ
ಯಾದಗಿರಿಯೂ ರಾಮನಗರದ ಜತೆಯಲ್ಲೇ ಅಸ್ತಿತ್ವಕ್ಕೆ ಬಂದ ಹೊಸ ಜಿಲ್ಲೆ. ಅಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಫ್.ಆರ್. ಜಮಾದಾರ್ ಅವರನ್ನು ಸರ್ಕಾರ ರಾಮನಗರ ಜಿಲ್ಲೆಗೆ ವರ್ಗಾಯಿಸಿದೆ. ಪ್ರಮುಖ ಹುದ್ದೆಗೆ ಹದ್ದುಮೀರಿದ ಬದಲಾವಣೆಯೂ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗಲಿದೆ. ಈ ಜಿಲ್ಲೆ ರಚನೆಯಾದಾಗ ಮಂಜೂರಾದ ಅದೆಷ್ಟೋ ಯೋಜನೆಗಳಿನ್ನೂ ಪೂರ್ಣಗೊಳ್ಳದಿರಲು, ಜನರ ಬವಣೆಗಳಿಗೆ ಮುಕ್ತಿ ಸಿಗದಿರುವುದಕ್ಕೂ ಇಂತಹ ವರ್ಗಾವಣೆಗಳೇ ಕಾರಣ. ರಾಮನಗರ ಜಿಲ್ಲೆಯ ಆಯಕಟ್ಟಿನ ಹುದ್ದೆಗಳಲ್ಲಿರುವ ಇನ್ನಷ್ಟು ಅಧಿಕಾರಿಗಳ ವರ್ಗಾವಣೆಗೆ ಸರ್ಕಾರ ಕೈ ಹಾಕಿದೆ. ಹೀಗೆ ಅದೆಷ್ಟೋ ಬದಲಾವಣೆಗಳನ್ನು ತಂದರೂ ಜಡ್ಡುಗಟ್ಟಿರುವ ಆಡಳಿತಕ್ಕೆ ಚುರುಕು ಮುಟ್ಟಿಸಲು ಆಗದ ಹತಾಶೆಯಂತೂ ಕಾಡುತ್ತಿರುವುದು ಸುಳ್ಳಲ್ಲ.
ಮತ್ತೀಕೆರೆ ಜಯರಾಮ್