ಚುನಾವಣಾಧಿಕಾರಿ ಆದೇಶ ರದ್ದು
ರಾಮನಗರ: ಬೆಂಗಳೂರು ಹಾಲು ಒಕ್ಕೂಟ(ಬಮೂಲ್) ಆಡಳಿತ ಮಂಡಳಿಯ ಚನ್ನಪಟ್ಟಣ ಕ್ಷೇತ್ರದ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಅಭ್ಯರ್ಥಿ ಜಯಮುತ್ತು ನಾಮಪತ್ರ ತಿರಸ್ಕರಿಸಿದ ಚುನಾವಣಾಧಿಕಾರಿ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ತಾವು ಸಲ್ಲಿಸಿದ್ದ ನಾಮಪತ್ರವನ್ನು ರಾಜಕೀಯ ಪಿತೂರಿಯಿಂದ ತಿರಸ್ಕರಿಸಲಾಗಿದೆ ಎಂದು ಆರೋಪಿಸಿ ಜಯಮುತ್ತು ಹೈಕೋರ್ಟ್ ಮೆಟ್ಟಿಲೇರಿದ್ದರು. ಪಿರ್ಯಾದಿಯ ಅರ್ಜಿ ಪುರಸ್ಕರಿಸಿದ ನ್ಯಾಯಾಧೀಶರು ಜಯಮುತ್ತು ಸ್ಪರ್ಧೆಗೆ ಅವಕಾಶ ಕಲ್ಪಿಸಿ ತೀರ್ಪು ನೀಡಿದ್ದಾರೆ.
ಆದರೆ, ಜಯಮುತ್ತು ಅವರ ಸ್ಪರ್ಧೆ ಸಂಬಂಧ ಆಕ್ಷೇಪಣೆಗಳ ಬಗ್ಗೆ ಪ್ರತಿಸ್ಪರ್ಧಿಯು ಕಾನೂನು ಸಮರ ಮುಂದುವರೆಸಬಹುದು. ಆಗ ಹೊರ ಬೀಳುವ ತೀರ್ಪಿನ ಮೇಲೆ ಪ್ರಸಕ್ತ ಚುನಾವಣೆಯ ಫಲಿತಾಂಶ ಅವಲಂಬಿಸಿದೆ ಎನ್ನುವ ಷರತ್ತನ್ನು ಹೈಕೋರ್ಟ್ ವಿಧಿಸಿದೆ.
ವಿವಾದ ಹಿನ್ನೆಲೆ: ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಅಭ್ಯರ್ಥಿ ಸದಸ್ಯರಾಗಿರುವ ಹಾಲು ಉತ್ಪಾದಕರ ಸಹಕಾರ ಸಂಘ ಚುನಾವಣೆಗೆ ಹಿಂದಿನ ಸತತ ಎರಡು ವರ್ಷ ಎ ಇಲ್ಲವೇ ಬಿ ದರ್ಜೆ ಸಂಘವೆನ್ನುವ ಮಾನ್ಯತೆ ಹೊಂದಿರುವುದು ಕಡ್ಡಾಯವಾಗಿರುತ್ತದೆ.
ಈ ದರ್ಜೆಯನ್ನು ಸದರಿ ಸಂಘದ ಆಡಿಟ್ ಆಧರಿಸಿ ನಿರ್ಧರಿಸಲಾಗುತ್ತದೆ. ಜಯಮುತ್ತು ತಮ್ಮ ನಾಮಪತ್ರದ ಜತೆ ನಿಯಮಾನುಸಾರ ಆಡಿಟ್ ವರದಿ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆ ವೇಳೆ ಎದುರಾಳಿಯ ಆಕ್ಷೇಪ ಹಿನ್ನೆಲೆಯಲ್ಲಿ ಜಯಮುತ್ತು ನಾಮಪತ್ರ ತಿರಸ್ಕೃತವಾಗಿತ್ತು.
ಒಂದು ದಿನ ತಡ: ಮೇ 19ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಸಿ, ಅಂದೇ ಮಧ್ಯಾಹ್ನ 3ಕ್ಕೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟವಾಗಬೇಕಿತ್ತು. ಆದರೆ, ಚುನಾವಣಾಧಿಕಾರಿ ಮೇ 20ಕ್ಕೆ ಜಯಮುತ್ತು ಅವರ ನಾಮಪತ್ರ ತಿರಸ್ಕೃತ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಅಂತಿಮವಾಗಿ ಹಾಲಿ ನಿರ್ದೇಶಕ ಎಸ್. ಲಿಂಗೇಶ್ ಕುಮಾರ್ ಮತ್ತು ಬೋರ್ ವೆಲ್ ರಾಮಚಂದ್ರ ಉಳಿದಿದ್ದರು. ಸ್ಪರ್ಧಾವಕಾಶ ಕೈತಪ್ಪಿದ ಹಿನ್ನೆಲೆಯಲ್ಲಿ ಜಯಮುತ್ತು ಕಾನೂನು ಸಮರಕ್ಕೆ ಇಳಿದಿದ್ದು, ಅಲ್ಲಿ ಯಶಸ್ಸು ಸಾಧಿಸಿದ್ದಾರೆ.
ಈಗ ಚಿತ್ರಣ ಬದಲು: ಪ್ರಸಕ್ತ ಚುನಾವಣೆಯು ಚನ್ನಪಟ್ಟಣದ ಮಟ್ಟಿಗೆ ಜೆಡಿಎಸ್ ನಡುವಿನ ಕದನವೇ ಆಗಿದೆ. ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಲಿಂಗೇಶ್ ಕುಮಾರ್ ವಿರುದ್ಧ ಅಖಾಡಕ್ಕೆ ಸಜ್ಜಾಗಿದ್ದ ಜಯಮುತ್ತುಗೆ ಕಳೆದ ಬಾರಿ ಸೋತು ಮುಖಭಂಗ ಅನುಭವಿಸಿದ್ದ ಬೋರ್ ವೆಲ್ ರಾಮಚಂದ್ರ ಬೆಂಬಲ ನೀಡಿದ್ದರು.
ತಮ್ಮ ನಾಮಪತ್ರ ತಿರಸ್ಕೃತಗೊಂಡ ಬಳಿಕ ಬೋರ್ವೆಲ್ ರಾಮಚಂದ್ರ ಅವರನ್ನೇ ಬೆಂಬಲಿಸುವ ನಿರ್ಧಾರಕ್ಕೆ ಜಯಮುತ್ತು ಬಂದಿದ್ದರು. ಇದೀಗ ಹೈಕೋರ್ಟ್ ಆದೇಶದ ನಂತರ ಚನ್ನಪಟ್ಟಣದಲ್ಲಿ ಸ್ಪರ್ಧಾ ಚಿತ್ರಣ ಬದಲಾಗುವ ಸಾಧ್ಯತೆ ನಿಚ್ಚಳವಾಗಿದೆ.
ರಾಮಚಂದ್ರ ಹಿಂದಕ್ಕೆ: ಜಯಮುತ್ತು ಸ್ಪರ್ಧೆಗೆ ಅವಕಾಶ ನೀಡಿರುವ ಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆಯೇ ಚನ್ನಪಟ್ಟಣದಲ್ಲಿ ಚುನಾವಣೆ ಅಖಾಡ ಕಾವೇರಿದೆ. ಒಲ್ಲದ ಮನಸ್ಸಿನಿಂದಲೇ ಅಭ್ಯರ್ಥಿಯಾಗಿದ್ದ ಬೋರ್ ವೆಲ್ ರಾಮಚಂದ್ರ ಕಣದಿಂದ ನಿವೃತ್ತಿ ಘೋಷಿಸುವ ಸಾಧ್ಯತೆ ಹೆಚ್ಚಿದೆ.
ಗುರುವಾರ ಮಧ್ಯಾಹ್ನದವರೆಗೂ ಊರೂರು ಸುತ್ತಿ ಮತಬೇಟೆ ನಡೆಸುತ್ತಿದ್ದ ರಾಮಚಂದ್ರ ಸಂಜೆಯಷ್ಟರಲ್ಲಿ ಜಯಮುತ್ತು ಪರ ಪ್ರಚಾರ ಪ್ರಾರಂಭಿಸಿದ್ದಾರೆ. ಹೈಕೋರ್ಟ್ ಆದೇಶದಿಂದ ಲಿಂಗೇಶ್ ವಿರೋಧಿ ಪಾಳಯ ಅದರಲ್ಲೂ ಮಾಜಿ ಶಾಸಕ ಎಂ.ಸಿ. ಅಶ್ವತ್ಥ್, ಬೆಂಬಲಿಗರಿಗೆ ಹರ್ಷ ಮೂಡಿಸಿದೆ.