ಜಮೀನು ವಿವಾದ ಪ್ರತಿಭಟನೆ
ಕ.ಪ್ರ.ವಾರ್ತೆ ್ಣ ದೊಡ್ಡಬಳ್ಳಾಪುರ ್ಣ ಮೇ 22
ನಗರಸಭೆಯಲ್ಲಿ ಹಿಂದು ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಇಲ್ಲಿನ ಹಿಂದು ಜಾಗರಣಾ ವೇದಿಕೆ ನೇತೃತ್ವದಲ್ಲಿ ನಗರಸಭೆ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಹಿಂಜಾವೇ ಜಿಲ್ಲಾ ಸಂಚಾಲಕ ಅಮರನಾಥ್, ಇಲ್ಲಿನ ಕುಂಬಾರಪೇಟೆಯ ಖಾಲಿ ಸ್ವತ್ತಿನ ಕುರಿತು ನ್ಯಾಯಾಲಯದಲ್ಲಿ ಹಿಂದುಗಳ ಪರ ಮೊಕದ್ದಮೆ ಹೂಡಲಾಗಿದೆ. ಪ್ರಸ್ತುತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೂ ನಗರಸಭೆ ಆಯುಕ್ತರು ಸದರಿ ಜಾಗದಲ್ಲಿ ಕಟ್ಟಡ ಕಟ್ಟಲು ಪಕ್ಕದಲ್ಲಿರುವ ಮಸೀದಿಯವರಿಗೆ ಪರವಾನಗಿ ನೀಡಿದ್ದಾರೆ. ಈ ಬಗ್ಗೆ ಆಕ್ಷೇಪಿಸಿ ಪರವಾನಗಿ ರದ್ದುಪಡಿಸಿ, ಕಟ್ಟಡ ಕಾಮಗಾರಿ ತಡೆಹಿಡಿಯುವಂತೆ ಹಿಂಜಾವೇ ಕಳೆದ ತಿಂಗಳೇ ನಗರಸಭೆಗೆ ಅರ್ಜಿ ಸಲ್ಲಿಸಿತ್ತು. ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಒತ್ತಾಯಿಸಿದ್ದರೂ ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಆಯುಕ್ತರು ಒತ್ತಾಯಕ್ಕೆ ಮಣಿದು ನಿರ್ಲಕ್ಷ್ಯ ವಹಿಸಿದ್ದಾರೆ ಎಂದರು.
ಮಸೀದಿಗೆ ಸಂಬಂಧಿಸಿದ ಕೆಲವರು ನಗರಸಭೆ ಮೂಲಖಾತೆಯಲ್ಲಿ ಅಕ್ರಮ ತಿದ್ದುಪಡಿ ಮಾಡಿ ಹೆಚ್ಚುವರಿ ಜಾಗ ಸೇರಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಅವರು, ಅಕ್ರಮ ತಿದ್ದುಪಡಿ ಖಚಿತಪಡಿಸಿದ್ದರೂ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದರು.
ಪ್ರತಿಭಟನೆಗೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಬಿಳಿಕೆಂಚಪ್ಪ, ಈಗಾಗಲೇ ಈ ಪ್ರಕರಣದ ಕುರಿತು ಹಿಂಜಾವೇ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಕಟ್ಟಡ ಕಟ್ಟಲು ನೀಡಿದ್ದ ಪರವಾನಗಿ ರದ್ದು ಪಡಿಸಲು ಕ್ರಮ ಕೈಗೊಳ್ಳಲಾಗಿದ್ದು, ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಿದೆ. ಅಕ್ರಮ ತಿದ್ದುಪಡಿ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗುರುವಾರ ನಗರಸಭೆಯ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಸಮ್ಮುಖದಲ್ಲಿ ಅವಧಿಯ ಮೊದಲ ಸಾಮಾನ್ಯ ಸಭೆ ನಡೆಯುತ್ತಿದ್ದ ಸಂದರ್ಭದಲ್ಲೇ ಪ್ರತಿಭಟನೆ ನಡೆಯಿತು. ಬಿಜೆಪಿ ಮತ್ತು ಜೆಡಿಎಸ್ನ ಕೆಲ ಸದಸ್ಯರು ಸಭೆಯಿಂದ ಹೊರಬಂದು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು ವಿಶೇಷವಾಗಿತ್ತು. ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತರಾದ ಮುರಳಿ, ಯಶವಂತ, ಯುವ ಮೋರ್ಚಾ ನಗರಾಧ್ಯಕ್ಷ ಶಿವಕುಮಾರ್ ನೇತೃತ್ವ ವಹಿಸಿದ್ದರು.