ವಶಪಡಿಸಿಕೊಂಡಿದ್ದ ಅಕ್ರಮ ಮದ್ಯ ನಾಶ
ರಾಮನಗರ: ತಾಲೂಕಿನಾದ್ಯಂತ ವ್ಯಾಪಕವಾಗಿರುವ ಅಕ್ರಮ ಮದ್ಯ ಮಾರಾಟ ಅಡ್ಡೆಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ ಸುಮಾರು 2.50 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ಅಬಕಾರಿ ಉಪ ಆಯುಕ್ತೆ ಕೆ. ರೂಪಶ್ರೀ ಅವರ ನೇತೃತ್ವದಲ್ಲಿ ಗುರುವಾರ ನಾಶಪಡಿಸಲಾಯಿತು.
ನಗರದ ಅಬಕಾರಿ ಉಪ ಅಧೀಕ್ಷಕರ ಕಚೇರಿ ಆವರಣದಲ್ಲಿ ಶೇಖರಿಸಿಟ್ಟಿದ್ದ 866.020 ಲೀಟರ್ ಮದ್ಯ, 109.470 ಲೀಟರ್ ಬಿಯರ್, 457.190 ಲೀಟರ್ ಸೇಂದಿಯನ್ನು ನಾಶಮಾಡಲಾಯಿತು. ಇದರಲ್ಲಿ 187.206 ಲೀಟರ್ ನಕಲಿ ಮದ್ಯ ಹಾಗೂ 35 ಲೀಟರ್ ಬ್ಲೆಂಡ್ ಮದ್ಯವೂ ಸೇರಿದೆ ಎಂದು ನಾಶ ಪ್ರಕ್ರಿಯೆ ಬಳಿಕ ಆಯುಕ್ತ ಕೆ. ರೂಪಶ್ರೀ ವಿವರಿಸಿದರು. 2008-09ನೇ ಸಾಲಿನಿಂದ 2011-12ನೇ ಸಾಲಿನವರೆಗೆ ವಿವಿಧ ಪ್ರಕರಣಗಳಲ್ಲಿ ಅಕ್ರಮ ಮದ್ಯವನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. ಸಂಬಂಧಪಟ್ಟ ಮೊಕದ್ದಮೆಗಳು ನ್ಯಾಯಾಲಯದಲ್ಲಿ ಇತ್ಯರ್ಥಗೊಂಡ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮದ್ಯವನ್ನು ನಾಶ ಪಡಿಸಲಾಗುತ್ತಿದೆ ಎಂದು ತಿಳಿಸಿದರು. ನಾಶ ಪ್ರಕ್ರಿಯೆಯಲ್ಲಿ ಅಬಕಾರಿ ಉಪ ಅಧೀಕ್ಷಕ ಜಿ.ಪಿ. ನರೇಂದ್ರಕುಮಾರ್, ಕಂದಾಯ ಇಲಾಖೆ ಶಿರಸ್ತೆದಾರ್ ಶಬೀನ್ ತಾಜ್, ಕೆ.ಎಸ್.ಬಿ.ಸಿ.ಎಲ್ ನಿಗಮದ ವ್ಯವಸ್ಥಾಪಕ ಪರಮಶಿವಯ್ಯ, ಅಬಕಾರಿ ನಿರೀಕ್ಷಕ ಎಂ.ಎಸ್.ನಾರಾಯಣನಾಯ್ಕ, ಉಪ ನಿರೀಕ್ಷಕರಾದ ಎಚ್.ಬಿ. ಲಿಂಗರಾಜು, ಲೋಹಿತ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.